ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾದಲ್ಲಿ ಬಿಜೆಪಿ ಗೆದ್ದರೆ ಕಾಂಗ್ರೆಸ್‌ ಹೊಣೆ: ಶಿವಸೇನಾ

ಗೋವಾ: ಮೈತ್ರಿ ಪ್ರಸ್ತಾವನೆಗೆ ಕಾಂಗ್ರೆಸ್‌ನಿಂದ ಪ್ರತಿಕ್ರಿಯೆ ಇಲ್ಲ- ಎಂಬ ಆರೋಪ
Last Updated 21 ಜನವರಿ 2022, 18:29 IST
ಅಕ್ಷರ ಗಾತ್ರ

ಪಣಜಿ: ‘ಗೋವಾದಲ್ಲಿ ಬಿಜೆಪಿ ಗೆದ್ದರೆ ಅದಕ್ಕೆ ಕಾಂಗ್ರೆಸ್‌ ಪಕ್ಷವನ್ನೇ ಹೊಣೆಯಾಗಿಸಬೇಕು’ ಎಂದು ಶಿವಸೇನಾ ಮುಖಂಡ ಸಂಜಯ್‌ ರಾವುತ್‌ ಅವರು ಶುಕ್ರವಾರ ಹೇಳಿದ್ದಾರೆ.

ಎನ್‌ಸಿಪಿ ಮತ್ತು ಗೋವಾ ಫಾರ್ವರ್ಡ್‌ ಪಕ್ಷದ (ಜಿಎಫ್‌ಪಿ) ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಕುರಿತು ಕಾಂಗ್ರೆಸ್‌ ಎದುರು ಶಿವಸೇನಾ ಪ್ರಸ್ತಾವ ಇರಿಸಿತ್ತು. ಆದರೆ ಈ ಪ್ರಸ್ತಾವಕ್ಕೆ ಕಾಂಗ್ರೆಸ್‌ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ, ಕಾಂಗ್ರೆಸ್‌ ವಿರುದ್ಧ ಶಿವಸೇನಾ ಹರಿಹಾಯ್ದಿದೆ.

ಎನ್‌ಸಿಪಿ ಜೊತೆ ಸೇರಿಶಿವಸೇನಾ ಗೋವಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಪಕ್ಷದ ಒಂಬತ್ತು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ರಾವುತ್‌ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ‘ಎನ್‌ಸಿಪಿ, ಜಿಎಫ್‌ಪಿ, ಕಾಂಗ್ರೆಸ್ಮತ್ತು ಶಿವಸೇನಾ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಕುರಿತು ಕಾಂಗ್ರೆಸ್‌ ಮುಖಂಡರಾದ ದಿನೇಶ್‌ ಗುಂಡೂರಾವ್‌, ದಿಗಂಬರ್‌ ಕಾಮತ್‌ ಮತ್ತು ಗಿರೀಶ್ ಚೋಡಣ್‌ಕರ್‌ ಅವರ ಜೊತೆ ಸಭೆ ನಡೆಸಿದ್ದೆವು. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ’ ಎಂದರು.

ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್‌ ವಿರುದ್ಧ ತೃಣಮೂಲ ಕಾಂಗ್ರೆಸ್‌ ಇಂಥದ್ದೇ ಆರೋಪ ಮಾಡಿತ್ತು. ಗೋವಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಅವರೇ ಕಾರಣರಾಗುತ್ತಾರೆ ಎಂದು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಹೇಳಿದ್ದರು. ಅಭಿಷೇಕ್‌ ಅವರ ಹೇಳಿಕೆಯನ್ನು ರಾವುತ್‌ ಅನುಮೋದಿಸಿದ್ದಾರೆ. ಆದರೆ, ಚಿದಂಬರಂ ಅವರನ್ನು ಮಾತ್ರ ಹೊಣೆಯಾಗಿಸಲು ಸಾಧ್ಯವಿಲ್ಲ. ಕಾಂಗ್ರೆಸ್‌ ಹೈಕಮಾಂಡ್‌ ಹೇಳಿದಂತೆ ಚಿದಂಬರಂ ಕೇಳುತ್ತಾರೆ ಎಂದು ಅವರು ಹೇಳಿದ್ದಾರೆ.

‘40 ಸ್ಥಾನಗಳ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 30 ಸ್ಥಾನಗಳಿಗೆ ಸ್ಪರ್ಧಿಸಲಿ, ಉಳಿದ 10 ಸ್ಥಾನಗಳನ್ನು ಮಿತ್ರ ಪಕ್ಷಗಳು ಹಂಚಿಕೊಳ್ಳಬಹುದು ಎಂದು ಕಾಂಗ್ರೆಸ್‌ ಎದುರು ಪ್ರಸ್ತಾವ ಇರಿಸಿದ್ದೆವು. ಈ ಹತ್ತು ಕ್ಷೇತ್ರಗಳಲ್ಲಿ
ಕಾಂಗ್ರೆಸ್ ಎಂದಿಗೂ ಗೆದ್ದಿಲ್ಲ’ ಎಂದು ರಾವುತ್‌ ಹೇಳಿದ್ದಾರೆ.

ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಅವರ ಮಗ, ಬಿಜೆಪಿಯಿಂದ ಟಿಕೆಟ್‌ ವಂಚಿತರಾದ ಉತ್ಪಲ್‌ ಪರಿಕ್ಕರ್‌ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಶಿವಸೇನಾ ಬೆಂಬಲ ನೀಡಲಿದೆ. ಆದರೆ ಅವರು ಮುಂದಿನ ದಿನಗಳಲ್ಲಿ ಬಿಜೆಪಿಗೆ ಬೆಂಬಲ ನೀಡುವುದಿಲ್ಲ ಎಂಬ ಭರವಸೆ ನೀಡಬೇಕು ಎಂದು ರಾವುತ್‌ ಹೇಳಿದ್ದಾರೆ.

ಎಂಜಿಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಗೋವಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ 10 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ (ಎಂಜಿಪಿ) ಶುಕ್ರವಾರ ಬಿಡುಗಡೆ ಮಾಡಿದೆ. ಅದರಲ್ಲಿ ಪಕ್ಷದ ಮುಖ್ಯಸ್ಥ ದೀಪಕ್‌ ಧವಾಲಿಕರ್‌ ಮತ್ತು ಅವರ ಸಹೋದರ ಸುದಿನ್‌ ಧವಾಲಿಕರ್‌ ಅವರ ಹೆಸರೂ ಇವೆ.ದೀಪಕ್ ಅವರು ಪ್ರಿಯೋಲ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಮತ್ತು ಸುದಿನ್‌ ಅವರು ಮರ್ಕೈಮ್‌ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಬಿಜೆಪಿ ತೊರೆದು ಎಂಜಿಪಿ ಸೇರ್ಪಡೆ ಆಗಿದ್ದ ಮಾಜಿ ಶಾಸಕ ಪ್ರವೀಣ್‌ ಝ್ಯಾಂತೆ ಅವರು ಮಾಯೆಂ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಎಂಜಿಪಿಯು ತೃಣಮೂಲ ಕಾಂಗ್ರೆಸ್‌ ಜೊತೆಇತ್ತೀಚೆಗಷ್ಟೇ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ.\

ಜಿಎಫ್‌ಪಿ ತೊರೆದ ಶಾಸಕ ವಿನೋದ್‌

ಗೋವಾ ಫಾರ್ವರ್ಡ್‌ ಪಕ್ಷದ (ಜಿಎಫ್‌ಪಿ) ಶಾಸಕ ವಿನೋದ್‌ ಪಳಿಯೆಂಕರ್‌ ಪಕ್ಷದ ಸದಸ್ಯತ್ವ ಮತ್ತು ಶಾಸನ ಸಭೆಗೆಶುಕ್ರವಾರ ರಾಜೀನಾಮೆ ನೀಡಿದರು. ಇವರ ರಾಜೀನಾಮೆ ಬಳಿಕ, 40 ಸದಸ್ಯರ ಗೋವಾ ವಿಧಾನಸಭೆಯಲ್ಲಿ ಜಿಎಫ್‌ಪಿ ಶಾಸಕರ ಸಂಖ್ಯೆ ಒಂದಕ್ಕೆ ಇಳಿದಿದೆ. ಸಿಯೋಲಿಂ ಕ್ಷೇತ್ರದ ಶಾಸಕರಾಗಿದ್ದ ವಿನೋದ್‌ ಅವರು ಅದೇ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ತಮ್ಮ ಬಂಬಲಿಗರು ಇಚ್ಛೆ ಪಟ್ಟ ಕಾರಣ ತಾವು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT