ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೋಡ ಹತ್ಯಾಕಾಂಡ: 20ಕ್ಕೆ ತೀರ್ಪು ಪ್ರಕಟ

Last Updated 15 ಏಪ್ರಿಲ್ 2023, 14:42 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್‌ನ ಮಾಜಿ ಸಚಿವೆ ಮಾಯಾ ಕೊಡ್ನಾನಿ, ಬಜರಂಗ ದಳದ ಮುಖಂಡ ಬಾಬು ಬಜರಂಗಿ ಪ್ರಮುಖ ಆರೋಪಿಗಳಾಗಿರುವ ನರೋಡ ಹತ್ಯಾಕಾಂಡ ಪ್ರಕರಣದ ತೀರ್ಪನ್ನು ವಿಶೇಷ ನ್ಯಾಯಾಲಯವು ಏಪ್ರಿಲ್‌ 20ರಂದು ಪ್ರಕಟಿಸಲಿದೆ.

ಕಳೆದ ವಾರವೇ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಪ್ರಧಾನ ಸೆಷನ್ಸ್‌ ನ್ಯಾಯಾಧೀಶರಾದ ಎಸ್‌.ಕೆ. ಭಾಕ್ಸಿ ತೀರ್ಪನ್ನು ಕಾಯ್ದಿರಿಸಿದ್ದರು.

2002ರ ಏಪ್ರಿಲ್‌ 2ರಂದು ನಡೆದ ಗೋಧ್ರಾ ಗಲಭೆ ಬಳಿಕ ಏಪ್ರಿಲ್‌ 28ರಂದು ನರೋಡ ಗ್ರಾಮದಲ್ಲಿ ಕೋಮುಗಲಭೆ ನಡೆದಿತ್ತು. ಈ ಘಟನೆಯಲ್ಲಿ 11 ಮಂದಿ ಅಲ್ಪಸಂಖ್ಯಾತರ ಹತ್ಯೆ ನಡೆದಿತ್ತು.

ಮಾಯಾ ಕೊಡ್ನಾನಿ, ಬಾಬು ಬಜರಂಗಿ, ವಿಶ್ವ ಹಿಂದೂ ಪರಿಷತ್‌ನ ಮಾಜಿ ನಾಯಕ ಜಗದೀಶ್‌ ಪಟೇಲ್‌, ಬಿಜೆಪಿ ಕಾರ್ಪೋರೇಟರ್‌ ವಲ್ಲಭಬಾಯಿ ಪಟೇಲ್‌ ಸೇರಿದಂತೆ 69 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಗಲಭೆ, ಕೊಲೆ, ಕ್ರಿಮಿನಲ್‌ ಸಂಚು ಎಸಗಿದ ಆರೋಪ ಅವರ ಮೇಲಿದೆ.

ಸುಪ್ರೀಂ ಕೋರ್ಟ್‌ ನೇಮಿಸಿದ್ದ ವಿಶೇಷ ತನಿಖಾ ದಳ (ಎಸ್‌ಐಟಿ) ಈ ಪ್ರಕರಣದ ವಿಚಾರಣೆ ನಡೆಸಿತ್ತು. 2009ರ ಜುಲೈನಿಂದ ಸುದೀರ್ಘ 14 ವರ್ಷಗಳ ಕಾಲ ನಡೆದ ವಿಚಾರಣಾ ಪ್ರಕ್ರಿಯೆಯಲ್ಲಿ 86 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಈ ಪೈಕಿ 17 ಆರೋಪಿಗಳು ವಿಚಾರಣಾ ಹಂತದಲ್ಲಿಯೇ ಮೃತಪಟ್ಟಿದ್ದಾರೆ.

ನರೋಡ ಪಟಿಯಾದಲ್ಲಿ ನಡೆದ ಕೋಮುಗಲಭೆಯಲ್ಲಿ 97 ಮುಸಲ್ಮಾನರು ಹತ್ಯೆಯಾಗಿದ್ದರು. ಈ ಪ್ರಕರಣದಲ್ಲಿಯೂ ಮಾಯಾ ಕೊಡ್ನಾನಿ, ಬಾಬು ಬಜರಂಗಿ ಸೇರಿದಂತೆ ನಾಲ್ವರು ಶಿಕ್ಷೆಗೆ ಗುರಿಯಾಗಿದ್ದರು. ಜೀವಾವಾಧಿ ಶಿಕ್ಷೆಗೆ ಗುರಿಯಾಗಿದ್ದ ಕೊಡ್ನಾನಿ ಅವರನ್ನು ಗುಜರಾತ್‌ ಹೈಕೋರ್ಟ್‌ ಖುಲಾಸೆಗೊಳಿಸಿತ್ತು. ಉಳಿದ ಸಹ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ.

ನರೋಡ ಗ್ರಾಮ ಮತ್ತು ನರೋಡ ಪಟಿಯಾ ಗಲಭೆ ನಡೆದ ಸ್ಥಳದಲ್ಲಿ ನಾನು ಇರಲಿಲ್ಲ. ಆ ವೇಳೆ ವಿಧಾನಸಭೆಯಲ್ಲಿಯೇ ಇದ್ದೆ. ನಂತರ ಅಸ್ವಾರದಲ್ಲಿರುವ ಸಾರ್ವಜನಿಕ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿ ಮನೆಗೆ ತೆರಳಿದ್ದೆ ಎಂದು ನ್ಯಾಯಾಲಯದಲ್ಲಿ ಆಕೆ ಹೇಳಿಕೆ ದಾಖಲಿಸಿದ್ದರು.

2018ರಲ್ಲಿ ನಡೆದ ಈ ಪ್ರಕರಣದ ಅಂತಿಮ ವಿಚಾರಣೆ ವೇಳೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ನ್ಯಾಯಾಲಯದ ಕಟಕಟೆಗೆ ಹಾಜರಾಗಿ ಸಾಕ್ಷ್ಯ ದಾಖಲಿಸಿದ್ದು, ದೇಶದ ಗಮನ ಸೆಳೆದಿತ್ತು.

ಈ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು 187 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇವರಲ್ಲಿ 113 ಮಂದಿ ಸಂತ್ರಸ್ತರು ಮತ್ತು ಅವರ ಕುಟುಂಬದ ಸದಸ್ಯರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT