ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂನ ಕಾಜಿರಂಗದಲ್ಲಿ ಕಂಡ ‘ಚಿನ್ನದ ಹುಲಿ’!

Last Updated 13 ಜುಲೈ 2020, 20:37 IST
ಅಕ್ಷರ ಗಾತ್ರ

ಗುವಾಹಟಿ: ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನದ ‘ಚಿನ್ನದ ಹುಲಿ’ (ಗೋಲ್ಡನ್ ಟೈಗರ್) ಚಿತ್ರವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಹಂಚಿಕೊಂಡ ಬಳಿಕ ಈ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಶನಿವಾರದಿಂದ ವೈರಲ್ ಆಗಿದೆ.

‘ಒಂದಲ್ಲ, ಉದ್ಯಾನದ ಮೂರು ಹುಲಿಗಳು ಚಿನ್ನದ ಬಣ್ಣದಿಂದ ಕೂಡಿರುವುದು ಕಂಡುಬಂದಿದೆ. ಚಿನ್ನದ ಬಣ್ಣದ ಹುಲಿ ಕಾಣಿಸಿರುವುದು ಸಂಭ್ರಮದ ವಿಚಾರ ಅಲ್ಲ, ಇದು ಹುಲಿ ಸಂತತಿಯ ಭವಿಷ್ಯ ಮಸುಕಾಗಿದೆ ಎಂಬುದರ ಸಂಕೇತ’ ಎಂದು ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಕಾಡಿನ ಹುಲಿಗಳ ಅಸಾಮಾನ್ಯ ಬಣ್ಣ ವಿರೂಪಕ್ಕೆ ಚಿನ್ನದ ಹುಲಿ ಒಂದು ಉದಾಹರಣೆ. ನಿಕಟ ಸಂಬಂಧಿ ಹುಲಿಗಳ ಮಿಲನದಿಂದಾದ ಸಂತಾನೋತ್ಪತ್ತಿಯಿಂದ ಹೀಗಾಗಿರಬಹುದು. ಹುಲಿಗಳ ಆವಾಸಸ್ಥಾನ ನಾಶ ಅಥವಾ ಪರಸ್ಪರ ಸಂಪರ್ಕ ಕಡಿತ ಇದಕ್ಕೆ ಕೆಲವು ಕಾರಣಗಳು. ಇರುವ ಸಂಖ್ಯೆಯಲ್ಲೇ ಸಂತಾನೋತ್ಪತ್ತಿ ನಡೆಯುವುದರಿಂದ ವಂಶವಾಹಿನಿಯಲ್ಲಿ ಈ ರೀತಿಯ ಬದಲಾವಣೆಗಳು ಕಂಡುಬರುತ್ತವೆ’ ಎಂದು ಕಾಜಿರಂಗ ಹುಲಿ ರಕ್ಷಿತಾರಣ್ಯದ ಸಂಶೋಧಕ ಅಧಿಕಾರಿ ರಾಬಿನ್ ಶರ್ಮಾ ತಿಳಿಸಿದ್ದಾರೆ.

ನಿಕಟ ಸಂಬಂಧದಲ್ಲಿಯೇ ಹೆಚ್ಚಿನ ಸಂತಾನೋತ್ಪತ್ತಿ ನಡೆಯುತ್ತಿರುವುದು ಅರಣ್ಯದಲ್ಲಿ ಹುಲಿಯ ಸಂತಾನ ಕಡಿಮೆಯಾಗುತ್ತಿದೆ ಎಂಬುದಕ್ಕೆ ಸೂಚನೆ. ಹಾಗಾಗಿ ಇದು ಕಳವಳಕಾರಿ ಎಂದು ಅವರು ಹೇಳಿದ್ದಾರೆ.

ಹಳದಿ ಮಿಶ್ರಿತ ಚರ್ಮ, ಕಪ್ಪು ಪಟ್ಟೆಗಳು, ಹೊಟ್ಟೆಯ ಭಾಗದಲ್ಲಿ ಬಿಳಿ ಪಟ್ಟೆಗಳು ಕಂಡುಬಂದಿವೆ. 2014ರಲ್ಲಿ ಕ್ಯಾಮರಾದಲ್ಲಿ ಈ ರೀತಿಯ ಹುಲಿಗಳು ಮೊದಲಿಗೆ ಸೆರೆಯಾಗಿದ್ದವು. ಪ್ರತೀ ವರ್ಷ ಇವು ಕ್ಯಾಮರಾ ಕಣ್ಣಿಗೆ ಸಿಗುತ್ತಿವೆ. ಮುಂಬೈ ಮೂಲದ ಛಾಯಾಗ್ರಾಹಕ ಮಯೂರೇಶ್ ಹೆಂದ್ರೆ ಅವರು ಈ ಚಿತ್ರ ಸೆರೆ ಹಿಡಿದಿದ್ದಾರೆ.

ಹುಲಿಯ ಈ ಬಣ್ಣ ಮುಂದಿನ ಸಂತಾನಕ್ಕೆ ವರ್ಗಾವಣೆಯಾಗುತ್ತದೆಯೋ, ಇಲ್ಲವೋ ಎಂಬ ಬಗ್ಗೆ ಸಂಶೋಧನೆ ಆಗಬೇಕಿದೆ ಎಂದು ವನ್ಯಜೀವಿ ಜೀವಶಾಸ್ತ್ರಜ್ಞ ಕಮಲ್ ಆಜಾದ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT