ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲಿಜಿಯಂಗಿಂತಲೂ ಸರ್ಕಾರವೇ ಹೆಚ್ಚು ಅಪಾರದರ್ಶಕ: ನ್ಯಾಯಮೂರ್ತಿ ಮದನ್ ಬಿ. ಲೋಕೂರ್

Published 7 ನವೆಂಬರ್ 2023, 13:51 IST
Last Updated 7 ನವೆಂಬರ್ 2023, 13:51 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ‘ನ್ಯಾಯಮೂರ್ತಿಗಳ ಸಮಿತಿ’ಗಿಂತಲೂ (ಕೊಲಿಜಿಯಂ) ಸರ್ಕಾರವೇ ಹೆಚ್ಚು ಅಪಾರದರ್ಶಕ ಆಗಿದೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕದಲ್ಲಿ ಕಾರ್ಯಾಂಗದ ಅಪಾರದರ್ಶಕ ನಡೆ ಕೊನೆಗೊಳ್ಳಬೇಕು ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ಇ–ಮೇಲ್ ಮೂಲಕ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಲೋಕೂರ್ ಅವರು ಕರ್ತವ್ಯದಲ್ಲಿದ್ದಾಗ ಕೊಲಿಜಿಯಂ ಸದಸ್ಯರಾಗಿದ್ದರು.

ನ್ಯಾಯಮೂರ್ತಿಗಳನ್ನು ನ್ಯಾಯಮೂರ್ತಿಗಳೇ ನೇಮಕ ಮಾಡುವ ಈಗಿರುವ ವ್ಯವಸ್ಥೆಯ ಪರವಾಗಿ ಮಾತನಾಡಿರುವ ಲೋಕೂರ್, ಈ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳು ಆಗಬೇಕು ಎಂದಿದ್ದಾರೆ. ಬದಲಾವಣೆಗಳಿಗೆ ಸಂಬಂಧಿಸಿದಂತೆ ಚರ್ಚೆಗಳು ಆಗಬೇಕಿವೆ ಎಂದು ಹೇಳಿದ್ದಾರೆ.

ಕೊಲಿಜಿಯಂ ವ್ಯವಸ್ಥೆಯ ಮೂಲಕ ನ್ಯಾಯಮೂರ್ತಿಗಳ ನೇಮಕ ವಿಚಾರವು ಸುಪ್ರೀಂ ಕೋರ್ಟ್‌ ಹಾಗೂ ಕೇಂದ್ರ ಸರ್ಕಾರದ ನಡುವೆ ಆಗಾಗ ಸಂಘರ್ಷಕ್ಕೆ ಕಾರಣವಾಗಿದೆ. ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಬೇರೆ ಬೇರೆ ವಲಯಗಳಿಂದ ಟೀಕೆಗಳು ಬಂದಿವೆ.

‘ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ವ್ಯವಸ್ಥೆಯು ಲಭ್ಯವಿರುವ ಅತ್ಯುತ್ತಮ ವ್ಯವಸ್ಥೆ ಎಂಬ ಮಾತನ್ನು ನಾನು ಮತ್ತೆ ಮತ್ತೆ ಹೇಳುತ್ತಿದ್ದೇನೆ. ಆದರೆ ಇದರಲ್ಲಿ ಕೆಲವು ಬದಲಾವಣೆಗಳು ಆಗಬೇಕಿವೆ. ಈ ಬಗ್ಗೆ ಚರ್ಚೆ ಆಗಬೇಕು. ಸರ್ಕಾರದಲ್ಲಿನ ಅಪಾರದರ್ಶಕತೆಯು ನಿವಾರಣೆ ಆಗಬೇಕಿರುವುದು ಒಂದು ಮುಖ್ಯ ಬದಲಾವಣೆ. ಸರ್ಕಾರವು ಕೊಲಿಜಿಯಂಗಿಂತ ಹೆಚ್ಚು ಅಪಾರದರ್ಶಕ’ ಎಂದು ಅವರು ಹೇಳಿದ್ದಾರೆ.

ಕೊಲಿಜಿಯಂ ವ್ಯವಸ್ಥೆಯ ಬದಲಿಗೆ ಕೇಂದ್ರ ಸರ್ಕಾರ ರೂಪಿಸಿದ್ದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಆಯೋಗ (ಎನ್‌ಜೆಎಸಿ) ಕಾಯ್ದೆ –2014ಅನ್ನು ಸುಪ್ರೀಂ ಕೋರ್ಟ್‌ 2015ರ ಅಕ್ಟೋಬರ್‌ನಲ್ಲಿ ರದ್ದುಮಾಡಿತು. ಕಾಯ್ದೆಯನ್ನು ರದ್ದುಮಾಡಿದ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದಲ್ಲಿ ಲೋಕೂರ್ ಅವರೂ ಇದ್ದರು.

ಈ ಕಾಯ್ದೆಯು ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯಲ್ಲಿ ಕಾರ್ಯಾಂಗಕ್ಕೆ ಪ್ರಧಾನ ಪಾತ್ರವನ್ನು ನೀಡಿತ್ತು. 

‘ಅತ್ಯಂತ ದುರದೃಷ್ಟಕರ’: ಅಪೂರ್ಣ ದೋಷಾರೋಪ ಪಟ್ಟಿ ಸಲ್ಲಿಸುವ, ಆರೋಪಿಯನ್ನು ಜೈಲಿನಲ್ಲಿ ಇರಿಸುವ ಉದ್ದೇಶದಿಂದಲೇ ಕೆಲವು ಅಗತ್ಯ ದಾಖಲೆಗಳನ್ನು ಸಲ್ಲಿಸದೆ ಇರುವ ಕೆಲಸವನ್ನು ಕೆಲವು ಬಾರಿ ತನಿಖಾ ಸಂಸ್ಥೆಗಳು ಮಾಡುತ್ತಿದ್ದು, ಇದನ್ನು ಗುರುತಿಸಲು ನ್ಯಾಯಾಂಗ ಮನಸ್ಸು ಮಾಡುತ್ತಿಲ್ಲದಿರುವುದು ಅತ್ಯಂತ ದುರದೃಷ್ಟಕರ ಎಂದು ನ್ಯಾಯಮೂರ್ತಿ ಲೋಕೂರ್ ಹೇಳಿದ್ದಾರೆ.

ರಾಜಕಾರಣಿಯ ಪಾತ್ರ ಇರುವ ಎಲ್ಲ ಭ್ರಷ್ಟಾಚಾರ ಪ್ರಕರಣಗಳ ಹಿಂದೆಯೂ ರಾಜಕೀಯ ದ್ವೇಷ ಇರುತ್ತದೆ ಎಂದು ಆರೋಪಿಸುವುದು ಕಷ್ಟಕರ. ಆದರೆ ಆರೋಪಿಯು ತನ್ನ ನಿಷ್ಠೆಯನ್ನು ಬದಲಿಸಿದಾಗ, ಅವರ ವಿರುದ್ಧ ತನಿಖೆ ನಿಂತುಹೋಗುತ್ತದೆ ಎಂದಾದರೆ ಅನುಮಾನ ಹುಟ್ಟಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

ಎಎ‍ಪಿ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ನಿರಾಕರಿಸಿರುವುದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಲೋಕೂರ್ ಅವರು, ‘ಜಾಮೀನು ನೀಡುವ ಹಾಗೂ ನಿರಾಕರಿಸುವುದಕ್ಕೆ ಸಂಬಂಧಿಸಿದ ಮೂಲ ತತ್ವಗಳನ್ನು ಕೋರ್ಟ್‌ಗಳು ಈಗಿನ ದಿನಗಳಲ್ಲಿ ಮರೆತಿರುವಂತೆ ಕಾಣುತ್ತಿದೆ’ ಎಂದು ಉತ್ತರಿಸಿದ್ದಾರೆ.

‘ಪೊಲೀಸರು ಮೊದಲು ವ್ಯಕ್ತಿಯನ್ನು ಬಂಧಿಸುತ್ತಾರೆ, ನಂತರ ಗಂಭೀರ ತನಿಖೆ ಶುರು ಮಾಡುತ್ತಾರೆ. ಅಪೂರ್ಣ ದೋಷಾರೋಪ ಪಟ್ಟಿಯನ್ನು ಸಲ್ಲಿಸಿ, ನಂತರ ಪೂರಕ ದೋಷಾರೋಪ ಪಟ್ಟಿ ಸಲ್ಲಿಸುತ್ತಾರೆ. ಕೆಲವು ದಾಖಲೆಗಳನ್ನು ಸಲ್ಲಿಸುವುದಿಲ್ಲ. ಇವನ್ನೆಲ್ಲ ಅರ್ಥ ಮಾಡಿಕೊಳ್ಳಲು ಕೋರ್ಟ್‌ಗಳು ಮನಸ್ಸು ಮಾಡುತ್ತಿಲ್ಲದಿರುವುದು ಅತ್ಯಂತ ದುರದೃಷ್ಟದ ಸಂಗತಿ’ ಎಂದು ಲೋಕೂರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT