ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಸಾರ ಸೇವೆಗಳ ಮಸೂದೆ ಜಾರಿಯಿಂದ ವಾಕ್ ಸ್ವಾತಂತ್ರ್ಯಕ್ಕೆ ಅಡ್ಡಿ: ಪ್ರಿಯಾಂಕಾ

Published 5 ಆಗಸ್ಟ್ 2024, 11:43 IST
Last Updated 5 ಆಗಸ್ಟ್ 2024, 11:43 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆಯನ್ನು ಜಾರಿಗೆ ತರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಡಿಜಿಟಲ್ ಮಾಧ್ಯಮ, ಸಾಮಾಜಿಕ ಮಾಧ್ಯಮ, ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮತ್ತು ತಮ್ಮದೇ ವಲಯದಲ್ಲಿ ಬರಹ ಹಾಗೂ ಭಾಷಣಗಳ ಮೂಲಕ ಆಲೋಚನೆಗಳನ್ನು ಅಭಿವ್ಯಕ್ತಗೊಳಿಸುವವರ ವಾಕ್ ಸ್ವಾತಂತ್ರ್ಯಕ್ಕೆ ತಡೆಯೊಡ್ಡಲು ತಯಾರಿ ನಡೆಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ಮಹಾತ್ಮ ಗಾಂಧೀಜಿ (ಯಂಗ್ ಇಂಡಿಯಾ, 1922) ಮತ್ತು ಜವಾಹರಲಾಲ್ ನೆಹರೂ (ಮಾರ್ಚ್ 1940) ಅವರ ಎರಡು ಉಲ್ಲೇಖಗಳನ್ನು ಹಂಚಿಕೊಂಡಿದ್ದು, ವಾಕ್ ಮತ್ತು ಪತ್ರಿಕಾ ಸ್ವಾತಂತ್ರ್ಯದ ಮಹತ್ವವನ್ನು ಒತ್ತಿ ಹೇಳಿದ್ದಾರೆ.

ನಮ್ಮ ನಾಗರಿಕರಿಗೆ ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬುದನ್ನು ಈ ಎರಡು ಉದಾಹರಣೆಗಳಿಂದ ತಿಳಿಯಬಹುದು. ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಮಂದಿ ಹೋರಾಟ ನಡೆಸಿದ್ದಾರೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

‘ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾವುದೇ ಸರ್ಕಾರವು ನಾಗರಿಕರ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಮುಂದಾಗಿರಲಿಲ್ಲ. ಆದರೆ, ಮೋದಿ ಸರ್ಕಾರವು ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಇಡೀ ಮಾಧ್ಯಮ ಕ್ಷೇತ್ರವನ್ನು ಸರ್ಕಾರದ ಮುಖವಾಣಿಯನ್ನಾಗಿ ಪರಿವರ್ತಿಸಲು ಹೊರಟ್ಟಿದೆ. ಮತ್ತೊಂದೆಡೆ, ಡಿಜಿಟಲ್ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು, ಒಟಿಟಿ ವೇದಿಕೆಗಳು ಮತ್ತು ಬರಹಗಾರರ ಬಾಯಿ ಮುಚ್ಚಿಸಲು ತಯಾರಿ ನಡೆಸುತ್ತಿದೆ’ ಎಂದು ಅವರು ದೂರಿದ್ದಾರೆ.

ಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆಯಿಂದ ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಬೆದರಿಕೆವೊಡ್ಡಿದಂತಾಗುತ್ತದೆ. ಜತೆಗೆ, ಆನ್‌ಲೈನ್‌ನಲ್ಲಿ ಅತಿಯಾದ ಕಣ್ಗಾವಲಿಗೆ ದಾರಿ ಮಾಡಿಕೊಡುತ್ತದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT