ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಹಮದಾಬಾದ್: ಎನ್‌ಒಸಿಗೆ ₹70 ಸಾವಿರ ಲಂಚ ನೀಡಿದ್ದ ಬಿಜೆಪಿ ಮುಖಂಡ

Published 30 ಮೇ 2024, 13:58 IST
Last Updated 30 ಮೇ 2024, 13:58 IST
ಅಕ್ಷರ ಗಾತ್ರ

ಅಹಮದಾಬಾದ್: ರಾಜ್‌ಕೋಟ್‌ ಮಹಾನಗರ ಪಾಲಿಕೆಯ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದುಕೊಳ್ಳಲು ತಾವು ₹70 ಸಾವಿರ ಲಂಚ ನೀಡಿರುವುದಾಗಿ ಬಿಜೆಪಿಯ ಹಿರಿಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ರಾಮ್‌ ಮೊಕಾರಿಯಾ ಹೇಳಿದ್ದಾರೆ.

ರಾಜ್‌ಕೋಟ್‌ನ ಟಿಆರ್‌ಪಿ ಗೇಮ್‌ ಜೋನ್‌ನಲ್ಲಿ ಅಗ್ನಿ ದುರಂತ ನಡೆದ ಕೆಲವೇ ದಿನಗಳಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಈ ಗೇಮ್‌ ಜೋನ್‌, ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯದೆಯೇ ಕಾರ್ಯಾಚರಣೆ ನಡೆಸುತ್ತಿತ್ತು ಎಂದು ಆರೋಪಿಸಲಾಗಿದೆ.

ರಾಜ್‌ಕೋಟ್‌ನಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಲು ಮೊಕಾರಿಯಾ ಅವರು ತಮ್ಮ ವೈಯಕ್ತಿಕ ಅನುಭವವೊಂದನ್ನು ಸುದ್ದಿಗಾರರ ಜೊತೆ ಹಂಚಿಕೊಂಡಿದ್ದಾರೆ.

ತಾವು ಲಂಚವನ್ನು ಪಾಲಿಕೆಯ ಉಪ ಅಗ್ನಿಶಾಮಕ ಅಧಿಕಾರಿ ಬಿ.ಜೆ. ಥೆಬಾ ಅವರಿಗೆ ಸರಿಸುಮಾರು ಐದು ವರ್ಷಗಳ ಹಿಂದೆ ನೀಡಿದ್ದಾಗಿ, ಆಗ ತಾವು ರಾಜ್ಯಸಭಾ ಸದಸ್ಯ ಆಗಿರಲಿಲ್ಲ ಎಂಬುದಾಗಿ ಮೊಕಾರಿಯಾ ಸ್ಪಷ್ಟಪಡಿಸಿದ್ದಾರೆ. ಮೊಕಾರಿಯಾ ಅವರು ಆಗ ಉದ್ಯಮಿ ಆಗಿದ್ದರು.

ಮೊಕಾರಿಯಾ ಅವರು 2021ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ‘ಥೆಬಾ ಅವರನ್ನು ಪೊಲೀಸರು ಗೇಮ್‌ ಜೋನ್‌ ಅಗ್ನಿದುರಂತದ ವಿಚಾರವಾಗಿ ವಿಚಾರಣೆಗೆ ಗುರಿಪಡಿಸಿದ್ದಾರೆ ಎಂದು ಗೊತ್ತಾಗಿದೆ. ಭ್ರಷ್ಟಾಚಾರವು ವ್ಯಾಪಕವಾಗಿದೆ, ನಾನು ಈ ಬಗ್ಗೆ ಹಿಂದೆಯೂ ಮನವಿಗಳನ್ನು ಸಲ್ಲಿಸಿದ್ದೇನೆ ಎಂಬುದನ್ನು ಹೇಳಲಷ್ಟೇ ಬಯಸಿದ್ದೇನೆ’ ಎಂದು ಮೊಕಾರಿಯಾ ಅವರು ತಿಳಿಸಿದ್ದಾರೆ.

ತಾವು ರಾಜ್ಯಸಭಾ ಸದಸ್ಯರಾದ ನಂತರ ಥೆಬಾ ಅವರು ಲಂಚದ ಹಣವನ್ನು ಮರಳಿಸಿದ್ದರು ಎಂದೂ ಮೊಕಾರಿಯಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT