ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿವೋ ಇಂಡಿಯಾ: ಹಣ ಅಕ್ರಮ ವರ್ಗಾವಣೆ ಪ್ರಕರಣ; ಉತ್ತರಿಸಲು ಆರೋಪಿಗಳಿಗೆ ವಾರದ ಗಡುವು

Published 3 ಜನವರಿ 2024, 12:27 IST
Last Updated 3 ಜನವರಿ 2024, 12:27 IST
ಅಕ್ಷರ ಗಾತ್ರ

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಾದ ವಿವೋ–ಇಂಡಿಯಾದ ಅಧಿಕಾರಿಗಳಿಗೆ ಉತ್ತರಿಸಲು ದೆಹಲಿ ಹೈಕೋರ್ಟ್ ಒಂದು ವಾರದ ಕಾಲಾವಕಾಶ ನೀಡಿದೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ವಿವೋ ಹಾಗೂ ಇತರ ಕಂಪನಿಗಳ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಆರೋಪಪಟ್ಟಿ ಸಲ್ಲಿಸಿದೆ. ಈ ಪ್ರಕರಣ ಸಂಬಂಧ ಈಗಾಗಲೇ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. 

ಲಾವಾ ಇಂಟರ್‌ನ್ಯಾಷನಲ್‌ ಮೊಬೈಲ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹರಿ ಓಂ ರೈ, ಚೀನಾ ಪ್ರಜೆ ಗುವಾಂಗ್‌ವೆನ್‌ ಅಲಿಯಾಸ್‌ ಅಂಡ್ರ್ಯೋ ಕುವಾಂಗ್‌, ಚಾರ್ಟೆಡ್‌ ಅಕೌಂಟೆಂಟ್‌ಗಳಾದ ನಿತಿನ್‌ ಗರ್ಗ್‌ ಮತ್ತು ರಂಜನ್‌ ಮಲಿಕ್ ಅವರನ್ನು ಇ.ಡಿ ಈಗಾಗಲೇ ಬಂಧಿಸಿದೆ.

ವಿವೋ ಕಂಪನಿಯು ಭಾರತದಲ್ಲಿ ತೆರಿಗೆ ಪಾವತಿಸುವುದನ್ನು ತಪ್ಪಿಸಲು ತನ್ನ ವಹಿವಾಟಿನ ಶೇ 50ರಷ್ಟು ಮೊತ್ತ, ಅಂದರೆ ಸುಮಾರು ₹ 62,476 ಕೋಟಿಯನ್ನು ಚೀನಾಗೆ ರವಾನಿಸಿದೆ ಎಂದು ಇ.ಡಿ ಆರೋಪಿಸಿತ್ತು.

ವಿವೋ ಮೊಬೈಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಹಾಗೂ ಇದರ ಸಹಭಾಗಿಯಾಗಿರುವ ವಿವಿಧ ಕಂಪನಿಗಳ ಮೇಲೆ ಇ.ಡಿ ಜುಲೈ 5ರಂದು ದಾಳಿ ನಡೆಸಿತ್ತು.

ಸಹ ಸಾಲಿಸಿಟರ್ ಜನರಲ್‌ ಎಸ್.ವಿ.ರಾಜು ಅವರು ವಾದ ಮಂಡಿಸಿ, ಕೆಳ ನ್ಯಾಯಾಲಯದ ತೀರ್ಪು ಅಸಹಜವಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ತ್ವರಿತ ಆದೇಶ ಅಗತ್ಯ ಎಂದರು. ಆದರೆ ಆರೋಪಿಗಳ ಪರ ವಕೀಲರು ಲಿಖಿತ ಉತ್ತರ ಸಲ್ಲಿಸಲು ಕಾಲಾವಕಾಶ ಕೋರಿದರು.

ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಸ್ವರ್ಣಕಾಂತಾ ಶರ್ಮಾ, ವಿಚಾರಣೆಯನ್ನು ಜ. 11ಕ್ಕೆ ಮುಂದೂಡಿದರು. ‘ಆರೋಪಿಗಳ ಪರ ವಕೀಲರು ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ನಾನು ಅದನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಒಂದು ವಾರಗಳ ಕಾಲಾವಕಾಶ ನೀಡಲಾಗಿದೆ’ ಎಂದರು.

ಚೀನಾ ಪ್ರಜೆ ಪರಾರಿಯಾಗುವ ಅಪಾಯವಿದೆ ಎಂದು ಎಎಸ್‌ಜಿ ರಾಜು ನ್ಯಾಯಾಲಯಕ್ಕೆ ಹೇಳಿದರು. ಆದರೆ ಆರೋ‍ಪಿಗಳು ತಮ್ಮ ಪಾಸ್‌ಪೋರ್ಟ್‌ಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ ಎಂದು ಆರೋಪಿಗಳ ಪರ ವಕೀಲರು ತಿಳಿಸಿದರು.

ಆರೋಪಿಗಳು ಜಾರಿ ನಿರ್ದೇಶನಾಲಯದ ಎದುರು ಶುಕ್ರವಾರ ಮತ್ತು ಸೋಮವಾರದಂದು ಹಾಜರಾಗುವಂತೆ ಆದೇಶದಲ್ಲಿ ಬರೆಯಲಾಗುವುದು ಎಂದು ನ್ಯಾ. ಶರ್ಮಾ ಹೇಳಿದರು.

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಈ ಪ್ರಕರಣದಲ್ಲಿ ಬಂಧಿತರನ್ನು 24 ಗಂಟೆಯೊಳಗೆ ನ್ಯಾಯಾಲಯದ ಮುಂದೆ ಹಾಜರುಪಡಿಸದ ಕಾರಣ, ಬಂಧನವೇ ಅಕ್ರಮ ಎಂದು ಪರಿಗಣಿಸಿದ ಕೆಳ ಹಂತದ ನ್ಯಾಯಾಲಯ, ನಾಲ್ಕು ಜನರ ಬಿಡುಗಡೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ತನಿಖಾ ಸಂಸ್ಥೆ ಪರ ವಕೀಲರು ಹೈಕೋರ್ಟ್‌ನ ರಜಾಕಾಲದ ಪೀಠದ ಎದುರು ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT