ನವದೆಹಲಿ: ‘ಶಿವಲಿಂಗದ ಮೇಲೆ ಚೇಳು ಕೂತಿದೆ. ಅದನ್ನು ಕೈಯಲ್ಲಿ ಹಿಡಿದು ಎಸೆಯಲೂ ಆಗದು, ಚಪ್ಪಲಿಯಲ್ಲಿ ಹೊಡೆಯಲೂ ಆಗದು’ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ದಾಖಲಿಸಿದ್ದ ಪ್ರಕರಣದಲ್ಲಿ, ಸಂಸದ ಶಶಿ ತರೂರ್ ವಿರುದ್ಧದ ಮಾನಹಾನಿ ಪ್ರಕರಣ ಕೈಬಿಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.
ಮಾನನಷ್ಟ ಮೊಕದ್ದಮೆ ಪ್ರಶ್ನಿಸಿ ತರೂರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅನೂಪ್ ಕುಮಾರ್ ಮೆಂಡಿರತ್ತ ಅವರಿದ್ದ ಪೀಠವು, ಪ್ರಕರಣ ಕೈಬಿಡಲು ನಿರಾಕರಿಸಿತು.
‘ಅನಾಮದೇಯ ಆರ್‌ಎಸ್ಎಸ್ ಮುಖಂಡರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಶಿವಲಿಂಗದ ಮೇಲೆ ಕುಳಿತ ಚೇಳು’ ಎಂದು ಹೋಲಿಕೆ ಮಾಡಿದ್ದಾರೆ’ ಎಂದು 2018ರಲ್ಲಿ ಹೇಳಿಕೆ ನೀಡಿದ್ದ ತರೂರ್, ಅದನ್ನು ತಮ್ಮದೇ ಆದ ಧಾಟಿಯಲ್ಲಿ ವಿವರಿಸಿದ್ದರು.
ಈ ಕುರಿತು 2018ರ ನ. 2ರಂದು ಬಿಜೆಪಿ ಮುಖಂಡ ರಾಜೀವ್ ಬಬ್ಬರ್ ಅವರು ಮಾನಹಾನಿ ಪ್ರಕರಣವನ್ನು ದಾಖಲಿಸಿದರು. ‘ನಾನೊಬ್ಬ ಭಗವಾನ್ ಶಿವನ ಭಕ್ತನಾಗಿದ್ದು, ತರೂರ್ ಅವರು ಅಸಂಖ್ಯಾತ ಶಿವ ಭಕ್ತರ ಭಾವನೆಗಳಿಗೆ ತಮ್ಮ ಹೇಳಿಕೆ ಮೂಲಕ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿದ್ದರು.
ಸೆಶನ್ಸ್ ನ್ಯಾಯಾಲಯದಲ್ಲಿ ದಾಖಲಾದ ಕ್ರಿಮಿನಲ್ ಪ್ರಕರಣ ರದ್ಧತಿ ಕೋರಿ ತರೂರ್ ಅವರು 2020ರಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕ್ರಿಮಿನಲ್ ಮೊಕ್ಕದಮೆಗೆ ಹೈಕೋರ್ಟ್ ತಡೆ ನೀಡಿತ್ತು.
ವಿಚಾರಣೆಯನ್ನು ಮುಂದುವರಿಸಿದ ಹೈಕೋರ್ಟ್, ‘ಈ ಹಂತದಲ್ಲಿ ಪ್ರಕರಣ ಕೈಬಿಡಲು ಯಾವುದೇ ಆಧಾರವಿಲ್ಲ. ನ್ಯಾಯದ ದೃಷ್ಟಿಕೋನದಿಂದ, ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಮುಂದುವರಿಸುವುದು ಸೂಕ್ತ’ ಎಂದು ಪೀಠ ಆದೇಶ ಪ್ರಕಟಿಸಿತು.