ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಪಿಸಿ ಡಿಪ್ಲೊಮಾ: 20 ಸಾವಿರ ತಜ್ಞ ವೈದ್ಯರ ಭವಿಷ್ಯ ಅತಂತ್ರ

Published 5 ಜುಲೈ 2023, 6:54 IST
Last Updated 5 ಜುಲೈ 2023, 6:54 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಎರಡು ತಿಂಗಳ ಹಿಂದೆ ವೈದ್ಯರ ಹೊಸ ನೋಂದಣಿ ನಿಯಮಗಳನ್ನು ಪ್ರಕಟಿಸಿದ್ದು, ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 20,000ಕ್ಕೂ ಹೆಚ್ಚು ತಜ್ಞ ವೈದ್ಯರ ಭವಿಷ್ಯ ಅಪಾಯಕ್ಕೆ ಸಿಲುಕಿದೆ.

ಈ ವೈದ್ಯರು ಪೂರ್ಣಗೊಳಿಸಿರುವ ಸ್ನಾತಕೋತ್ತರ ವಿಶೇಷ ಕೋರ್ಸ್‌ಗಳನ್ನು ಎನ್‌ಎಂಸಿ ಮಾನ್ಯ ಮಾಡದ ಕಾರಣ ಈ ವೈದ್ಯರ ಭವಿಷ್ಯ ಇದೀಗ ಅತಂತ್ರವಾಗಿದೆ.

ಇವರೆಲ್ಲರೂ ಮುಂಬೈನ ‘ಕಾಲೇಜ್‌ ಆಫ್‌ ಫಿಸಿಷಿಯನ್ಸ್‌ ಮತ್ತು ಸರ್ಜನ್ಸ್‌’ನಲ್ಲಿ (ಸಿಪಿಸಿ) ವಿಶೇಷ ಕೋರ್ಸ್‌ಗಳನ್ನು ಪೂರ್ಣಗೊಳಿಸಿದವರು. 1912ರಿಂದ ಮಾನ್ಯತೆ ಪಡೆದಿರುವ ಈ ಕಾಲೇಜು ವಿವಿಧ ವೈದ್ಯಕೀಯ ವಿಷಯಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗಳನ್ನು ನಡೆಸಿಕೊಂಡು ಬಂದಿದೆ.

ವೈದ್ಯಕೀಯ ವಿಜ್ಞಾನಗಳಲ್ಲಿ ಎಂ.ಡಿ/ಎ.ಎಸ್‌ (64,000 ಸೀಟುಗಳು) ಮತ್ತು ಡಿಪ್ಲೊಮಾ ಕೋರ್ಸ್‌ಗಳಿಗೆ (2,700 ಸೀಟುಗಳು) ರಾಷ್ಟ್ರೀಯ ಪರೀಕ್ಷಾ ಮಂಡಳಿಯು ಅಭ್ಯರ್ಥಿಗಳನ್ನು ಭರ್ತಿ ಮಾಡುತ್ತದೆ. ಇದರ ಹೊರತಾಗಿ ಸ್ನಾತಕೋತ್ತರ ಅಧ್ಯಯನ ಮಾಡಬಯಸುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಿಪಿಸಿ ನಡೆಸುವ ಕೋರ್ಸ್‌ಗಳು (1,600 ಸೀಟುಗಳು) ಮೂರನೇ ಮಾರ್ಗವನ್ನು ಕಲ್ಪಿಸುತ್ತದೆ.

ಮೇ ತಿಂಗಳಿನಲ್ಲಿ ವೈದ್ಯರ ರಾಷ್ಟ್ರೀಯ ರಿಜಿಸ್ಟರ್ ರಚಿಸಲು ಎನ್‌ಎಂಸಿ  ನಿಯಮಗಳನ್ನು ರೂಪಿಸಿದೆ. ಅಖಿಲ ಭಾರತ ಮಟ್ಟದಲ್ಲಿ ಮಾನ್ಯತೆ ಹೊಂದಿರುವ ಶೈಕ್ಷಣಿಕ ಕೋರ್ಸ್‌ಗಳನ್ನು ಪೂರೈಸಿರುವವರಿಗೆ ಮಾತ್ರ ರಿಜಿಸ್ಟರ್‌ನಲ್ಲಿ ನೋಂದಾಯಿಸಲು ಅವಕಾಶ ಕಲ್ಪಿಸಿದೆ.

ಕರ್ನಾಟಕದ ಜತೆಯಲ್ಲಿ ಮಹಾರಾಷ್ಟ್ರ, ಗುಜರಾತ್‌, ಒಡಿಶಾ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತಿಸಗಡ ರಾಜ್ಯಗಳು ಸಿಪಿಸಿಯ ಕೋರ್ಸ್‌ಗಳಿಗೆ ಮಾನ್ಯತೆ ನೀಡಿವೆ. ಹೀಗಾಗಿ ಸಿಪಿಸಿಯಲ್ಲಿ ಡಿಪ್ಲೊಮಾ ಮಾಡಿರುವ 20,000ಕ್ಕೂ ಹೆಚ್ಚು ತಜ್ಞ ವೈದ್ಯರು ಈ ರಾಜ್ಯಗಳಲ್ಲಿ, ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಎನ್‌ಎಂಸಿಯ ಹೊಸ ನಿಯಮ ಇವರ ಭವಿಷ್ಯವನ್ನು ತ್ರಿಶಂಕು ಸ್ಥಿತಿಗೆ ತಂದಿದೆ.

ಭಾರತೀಯ ವೈದ್ಯಕೀಯ ಪರಿಷತ್ (ಐಎಂಸಿ) ಕಾಯ್ದೆ 1956ರ ಅಡಿ ಮಾನ್ಯತೆ ಹೊಂದಿರುವ ಸಿಪಿಸಿಯ ವಿಶೇಷ ಕೋರ್ಸ್‌ಗಳ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಗುಣಮಟ್ಟದ ಕುರಿತು ಸಂಶಯಗಳು ಮೂಡಿದ್ದವು. ಅದರ ಜತೆಗೆ ಪ್ರವೇಶ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರದ ಆರೋಪಗಳೂ ವ್ಯಕ್ತವಾಗಿದ್ದವು.

2017ರಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ್ದ ಗೆಜೆಟ್‌ ಅಧಿಸೂಚನೆಯಲ್ಲಿ ಸಿಪಿಸಿಯ 39 ಕೋರ್ಸ್‌ಗಳಿಗೆ ಮಾನ್ಯತೆ ಇರುವುದಾಗಿ ಪ್ರಕಟಿಸಿತ್ತು. ಆದರೆ ವರ್ಷದ ಬಳಿಕ ಸಚಿವಾಲಯ ಹೊರಡಿಸಿದ ಮತ್ತೊಂದು ಅಧಿಸೂಚನೆಯಲ್ಲಿ ಸಿಪಿಸಿಯ 36 ಕೋರ್ಸ್‌ಗಳು ಅಮಾನ್ಯಗೊಂಡಿರುವುದಾಗಿ ಪ್ರಕಟಿಸಿತ್ತು.

ಸದ್ಯಕ್ಕೆ ಸಿಪಿಸಿಯಲ್ಲಿ, ಮಕ್ಕಳ ಚಿಕಿತ್ಸಾ ವಿಜ್ಞಾನ, ಪ್ರಸೂತಿ ವಿಜ್ಞಾನ ಮತ್ತು ರೋಗಪತ್ತೆಶಾಸ್ತ್ರ ಡಿಪ್ಲೊಮಾ ಕೋರ್ಸ್‌ಗಳಿಗೆ ಮಾತ್ರ ಎನ್‌ಎಂಸಿ ಮಾನ್ಯತೆ ನೀಡಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಆ ಕೋರ್ಸ್‌ಗಳ ಮಾನ್ಯತೆಯನ್ನೂ ಹಿಂಪಡೆಯಲು ಪ್ರಸ್ತಾವ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT