ಅಗರ್ತಲಾ: ತ್ರಿಪುರಾದಲ್ಲಿ ಐದು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಸಂಬಂಧಿತ ಅವಘಡಗಳು ಮತ್ತು ಭೂಕುಸಿತದಲ್ಲಿ ಇದುವರೆಗೆ 10 ಜನರು ಮೃತಪಟ್ಟಿದ್ದಾರೆ, ಒಬ್ಬರು ಕಾಣೆಯಾಗಿದ್ದಾರೆ.
ಸುಮಾರು 32 ಸಾವಿರ ಜನರನ್ನು ಸ್ಥಳಾಂತರಿಸಿ, 330 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ಗುರುವಾರ ಕೂಡ ಭಾರಿ ಮಳೆಯಾಗಿದ್ದು, ಪಶ್ಚಿಮ ತ್ರಿಪುರಾ ಮತ್ತು ಸೆಪಹಿಜಾಲಾ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಪ್ರವಾಹ ಪರಿಹಾರ ಕಾರ್ಯಾಚರಣೆಯಲ್ಲಿ ರಾಜ್ಯ ಸರ್ಕಾರಕ್ಕೆ ನೆರವಾಗಲು ಕೇಂದ್ರದಿಂದ 11 ಎನ್‌ಡಿಆರ್‌ಎಫ್ ತಂಡಗಳು ಪರಿಹಾರ ಸಾಮಗ್ರಿಗಳು ಮತ್ತು ವಿಪತ್ತು ನಿರ್ವಹಣೆಯ ಸಲಕರಣೆಗಳೊಂದಿಗೆ ತ್ರಿಪುರಾಕ್ಕೆ ಬಂದಿಳಿದಿವೆ.
ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಎನ್‌ಡಿಆರ್‌ಎಫ್, ಅಸ್ಸಾಂ ರೈಫಲ್ಸ್ ಸೇರಿ ಕೇಂದ್ರ ಅರೆಸೇನಾ ಪಡೆಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ.
‘ರಾಜ್ಯದ ಪ್ರಮುಖ ನದಿಗಳಲ್ಲಿನ ನೀರಿನ ಮಟ್ಟವು ಅಪಾಯದ ಮಟ್ಟ ಮೀರಿದೆ. 1,900ಕ್ಕೂ ಹೆಚ್ಚು ಕಡೆ ಭೂಕುಸಿತ ಸಂಭವಿಸಿ, ಸಂಪರ್ಕ ಕಡಿತಗೊಂಡಿದೆ’ ಎಂದು ರಾಜ್ಯ ಸರ್ಕಾರ ಬುಧವಾರ ಪ್ರಕಟಣೆಯಲ್ಲಿ ತಿಳಿಸಿತ್ತು.
‘ಅಗರ್ತಲಾದ ಮಹಾರಾಜ ಬಿರ್ ಬಿಕ್ರಮ್ ಮಾಣಿಕ್ಯ ಬಹದ್ದೂರ್ ವಿಮಾನ ನಿಲ್ದಾಣಕ್ಕೆ ಪರಿಹಾರ ಸಾಮಗ್ರಿಗಳು ಮತ್ತು ವಿಪತ್ತು ನಿರ್ವಹಣಾ ಸಲಕರಣೆಗಳು ಬಂದು ತಲುಪಿವೆ. ಪ್ರವಾಹಪೀಡಿತ ಪ್ರದೇಶಗಳಿಗೆ ಆದಷ್ಟು ಶೀಘ್ರ ತಲುಪಿಸುವ ವಿಶ್ವಾಸವಿದೆ’ ಎಂದು ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಗುರುವಾರ ‘ಫೇಸ್‌ಬುಕ್’ನಲ್ಲಿ ಪೋಸ್ಟ್ ಮಾಡಿದ್ದಾರೆ.