ಪುಣೆ: ದೆಹಲಿ ಮೂಲದ ಹೆರಿಟೇಜ್ ಏವಿಯೇಷನ್ಸ್ ಸಂಸ್ಥೆಯ ‘ಅಗಸ್ಟಾ 109’ ಹೆಲಿಕಾಪ್ಟರ್ ಬುಧವಾರ ಬೆಳಿಗ್ಗೆ 7.40ಕ್ಕೆ ಪತನಗೊಂಡಿದೆ. ಈ ಅವಘಡದಲ್ಲಿ ಇಬ್ಬರು ಪೈಲಟ್ ಹಾಗೂ ಒಬ್ಬರು ಎಂಜಿನಿಯರ್ ಮೃತಪಟ್ಟಿದ್ದಾರೆ.
ಆಕ್ಸ್‌ವರ್ಡ್ ಕೌಂಟಿ ಗಾಲ್ಫ್ ಕೋರ್ಸ್ ಹೆಲಿಪ್ಯಾಡ್‌ನಿಂದ ಬೆಳಿಗ್ಗೆ 7.30ಕ್ಕೆ ಹೊರಟಿದ್ದ ಹೆಲಿಕಾಪ್ಟರ್ ಮುಂಬೈನ ಜುಹುಗೆ ತಲುಪಬೇಕಿತ್ತು. ಆದರೆ, ಟೇಕ್ ಆಫ್ ಆದ 10 ನಿಮಿಷದಲ್ಲಿಯೇ ಬವ್‌ಧನ್‌ನ ಗುಡ್ಡಗಾಡು ಪ್ರದೇಶದ ಸಮೀಪ ಹೆಲಿಕಾಪ್ಟರ್ ಪತನಗೊಂಡು, ಬೆಂಕಿ ಹೊತ್ತುಕೊಂಡಿತು.
ವಿಮಾನದಲ್ಲಿದ್ದ ಗಿರೀಶ್ ಕುಮಾರ್, ಪ್ರೀತಮ್ ಸಿಂಗ್ ಬಾರಧ್ವಾಜ್ ಹಾಗೂ ಪ್ರೇಮ್‌ಜೀತ್ ಸಿಂಗ್ ಮೃತಪಟ್ಟಿದ್ದಾರೆ.
‘ಹೆಲಿಕಾಪ್ಟರ್ ಪತನಗೊಂಡ ಪ್ರದೇಶವು ಹಿಮದಿಂದ ಆವೃತವಾಗಿತ್ತು. ಈ ಕಾರಣಕ್ಕೆ ಅವಘಡ ಸಂಭವಿಸಿರಬಹುದು. ಹೆಲಿಕಾಪ್ಟರ್ ಪತನದ ನಿಖರ ಕಾರಣವನ್ನು ತಿಳಿಯಲು ವಿಸ್ತೃತ ತನಿಖೆ ನಡೆಸಲಾಗುವುದು’ ಎಂದು ಪಿಂಪ್ರಿ ಚಿಂಚ್ವಾಡದ ಜಂಟಿ ಪೊಲೀಸ್ ಆಯುಕ್ತ ಶಶಿಕಾಂತ್ ಮಹವರ್‌ಕರ್ ತಿಳಿಸಿದರು.
ಇದೇ ಹೆಲಿಕಾಪ್ಟರ್‌ನಲ್ಲಿ ಎನ್‌ಸಿಪಿ ಪಕ್ಷದ ಅಧ್ಯಕ್ಷ ಹಾಗೂ ಸಂಸದ ಸುನೀಲ್ ತಠಕರ್ ಅವರು ಮುಂಬೈನಿಂದ ರಾಯಿಗಢಕ್ಕೆ ಪ್ರಯಾಣಿಸಬೇಕಾಗಿತ್ತು. ಈ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.
‘ಘಟನೆಯಿಂದ ನನಗೆ ತೀವ್ರ ನೋವಾಗಿದೆ. ಈ ಹೆಲಿಕಾಪ್ಟರ್ ಅನ್ನು ಮಂಗಳವಾರ ಪಕ್ಷವು ಬಾಡಿಗೆ ಪಡೆದಿತ್ತು. ಮಂಗಳವಾರ ನಾನು ಇದರಲ್ಲಿ ಪ್ರಯಾಣಿಸಿದ್ದೆ. ಬುಧವಾರವೂ ಪ್ರಯಾಣ ಬೆಳೆಸಬೇಕಿತ್ತು’ ಎಂದು ಅವರು ಹೇಳಿದ್ದಾರೆ.