ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಚಲಪ್ರದೇಶ: ಜೈರಾಮ್ ಠಾಕೂರ್ ನೇತೃತ್ವದಲ್ಲಿ ಗವರ್ನರ್ ಭೇಟಿಯಾದ ಬಿಜೆಪಿ ಶಾಸಕರು

Published 28 ಫೆಬ್ರುವರಿ 2024, 5:02 IST
Last Updated 28 ಫೆಬ್ರುವರಿ 2024, 5:02 IST
ಅಕ್ಷರ ಗಾತ್ರ

ಶಿಮ್ಲಾ: ಜೈರಾಮ್ ಠಾಕೂರ್ ನೇತೃತ್ವದ ಹಿಮಾಚಲಪ್ರದೇಶದ ಬಿಜೆಪಿ ಶಾಸಕಾಂಗ ಪಕ್ಷದ ಸದಸ್ಯರು ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಅವರನ್ನು ಭೇಟಿಯಾಗಿದ್ದಾರೆ.

ಹಿಮಾಚಲ ಪ್ರದೇಶ ವಿಧಾನಸಭೆಯಿಂದ ರಾಜ್ಯ ಸಭೆಯ ಏಕೈಕ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅತೃಪ್ತ ಶಾಸಕರು ಅಡ್ಡ ಮತದಾನ ಮಾಡಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಕಾರಣರಾಗಿದ್ದರು. ಇದಾದ ಬೆನ್ನಲ್ಲೇ, ವಿಧಾನಸಭೆಯಲ್ಲಿ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಲಿದೆ ಎಂಬ ವದಂತಿ ನಡುವೆಯೇ ಈ ಬೆಳವಣಿಗೆ ನಡೆದಿದೆ.

68 ಸದಸ್ಯ ಬಲದ ಹಿಮಾಚಲಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ 40, ಬಿಜೆಪಿಯ 25 ಶಾಸಕರಿದ್ದಾರೆ. ಉಳಿದ 3 ಕ್ಷೇತ್ರಗಳಲ್ಲಿ ಪಕ್ಷೇತರ ಶಾಸಕರಿದ್ದಾರೆ.

ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರು ಆರೋಗ್ಯ ಇಲಾಖೆಗೆ ಸಂಬಂಧಿಸಿದ ನಿರ್ಣಯವೊಂದರಲ್ಲಿ ನಮ್ಮ ಮಾತಿಗೆ ಮನ್ನಣೆ ನೀಡಲಿಲ್ಲ. ನಾವು ಪರಿಸ್ಥಿತಿಯನ್ನು ರಾಜ್ಯಪಾಲರಿಗೆ ವಿವರಿಸಲು ಬಂದಿದ್ದೇವೆ ಎಂದು ಠಾಕೂರ್, ರಾಜ್ಯಪಾಲರ ಭೇಟಿಗೂ ಮೊದಲು ಸುದ್ದಿಗಾರರಿಗೆ ತಿಳಿಸಿದರು.

ಮಾರ್ಷಲ್‌ಗಳು ನಮ್ಮ ಜೊತೆ ದುರ್ವರ್ತನೆ ತೋರಿದ್ದಾರೆ. ಸ್ಪೀಕರ್ ಪೀಠದ ಬಳಿ ತೆರಳಿ ಪ್ರತಿಭಟಿಸಲು ಮುಂದಾಗಿದ್ದ ಬಿಜೆಪಿ ಸದಸ್ಯರ ಮೇಲೆ ಬಲಪ್ರಯೋಗ ಮಾಡಲಾಗಿದೆ ಎಂದು ದೂರಿದ್ದಾರೆ.

ಮಂಗಳವಾರ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭಿಷೇಕ್‌ ಮನು ಸಿಂಘ್ವಿ ಮತ್ತು ಬಿಜೆಪಿಯ ಹರ್ಷ ಮಹಾಜನ್‌ ನಡುವೆ ಪೈಪೋಟಿ ಇತ್ತು. ಇಬ್ಬರೂ 34–34ರಲ್ಲಿ ಸಮಬಲ ಸಾಧಿಸಿದ್ದರು. ಚೀಟಿ ಎತ್ತಿದಾಗ ಅದೃಷ್ಟ ಮಹಾಜನ್‌ಗೆ ಒಲಿಯಿತು.

ಕಾಂಗ್ರೆಸ್‌ನ ಐವರು ಶಾಸಕರನ್ನು ಬಿಜೆಪಿ ‘ಅಪಹರಣ’ ಮಾಡಿದೆ ಎಂದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್‌ ಸುಖು ಆರೋಪಿಸಿದ್ದರು. ‘ಬಿಜೆಪಿಯವರು ಸಿಆರ್‌ಪಿಎಫ್‌ ಮತ್ತು ಹರಿಯಾಣ ಪೊಲೀಸರ ನೆರವಿನಿಂದ ಹರಿಯಾಣದ ಪಂಚಕುಲಾಕ್ಕೆ ಕರೆದೊಯ್ದಿದ್ದಾರೆ ಎಂದು ದೂರಿದ್ದರು. ಕಾಂಗ್ರೆಸ್‌ ಶಾಸಕ ಸುಧೀರ್‌ ಶರ್ಮಾ, ಒಬ್ಬ ಪಕ್ಷೇತರ ಶಾಸಕ ಮತ್ತು ಬಿಜೆಪಿಯ ಕೆಲವು ಶಾಸಕರು ಪಂಚಕುಲಾದ ಅತಿಥಿಗೃಹ ವೊಂದಕ್ಕೆ ತೆರಳುತ್ತಿರುವ ವಿಡಿಯೊ ಕೂಡಾ ಹರಿದಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT