ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಮಾಚಲ: ಸರ್ಕಾರ ಉಳಿಸಿಕೊಳ್ಳಲು ‘ಕೈ’ ಹರಸಾಹಸ

Published 28 ಫೆಬ್ರುವರಿ 2024, 15:50 IST
Last Updated 28 ಫೆಬ್ರುವರಿ 2024, 15:50 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಅಭಿಷೇಕ್‌ ಮನು ಸಿಂಘ್ವಿ ಸೋತು ಮುಖಭಂಗ ಅನುಭವಿಸಿದ ಬಳಿಕ ಹಿಮಾಚಲ ಪ್ರದೇಶದಲ್ಲಿ ತನ್ನ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌ ಹರಸಾಹಸ ಪಡುತ್ತಿದೆ. 

ವಿಧಾನಸಭೆಯಿಂದ ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್ ಸೇರಿದಂತೆ ಬಿಜೆಪಿಯ 15 ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ಅದರ ಬೆನ್ನಲ್ಲೇ, ಬಜೆಟ್‌ಗೆ ಅಂಗೀಕಾರ ಪಡೆಯಲಾಗಿದೆ. ಅಡ್ಡ ಮತದಾನ ಮಾಡಿದ ಕಾಂಗ್ರೆಸ್‌ನ ಆರು ಶಾಸಕರನ್ನು ಅನರ್ಹಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ವಿಧಾನಸಭಾಧ್ಯಕ್ಷರ ಮುಂದೆ ಹಾಜರಾದ ಬಂಡಾಯ ಶಾಸಕರ ಪರ ವಕೀಲರು, ‘ಪಕ್ಷಾಂತರ ನಿಷೇಧ ಕಾನೂನು ರಾಜ್ಯಸಭಾ ಚುನಾವಣೆಗೆ ಅನ್ವಯಿಸುವುದಿಲ್ಲ’ ಎಂದು ಪ್ರತಿ‍ಪಾದಿಸಿದರು. ಷೋಕಾಸ್‌ ನೋಟಿಸ್‌ಗೆ ಉತ್ತರ ನೀಡಲು ಏಳು ದಿನಗಳ ಕಾಲಾವಕಾಶ ಕೋರಲಾಗಿದೆ ಎಂದು ತಿಳಿಸಿದರು. 

ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಲು ಹಾಗೂ ಅತೃಪ್ತ ಶಾಸಕರ ಮನವೊಲಿಸಲು ವೀಕ್ಷಕರಾದ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿಗಳಾದ ಭೂಪೇಶ್‌ ಬಘೇಲ್‌, ಭೂಪಿಂದರ್ ಸಿಂಗ್‌ ಹೂಡಾ ಅವರು ಶಿಮ್ಲಾಕ್ಕೆ ದೌಡಾಯಿಸಿದ್ದಾರೆ. ರಾಜ್ಯ ನಾಯಕರೊಂದಿಗೆ ವೀಕ್ಷಕರು ಸಮಾಲೋಚನೆ ನಡೆಸಿದ್ದಾರೆ. 

ಹಿಮಾಚಲ ಪ್ರದೇಶದ ಬೆಳವಣಿಗೆಗಳ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ. 

ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್‌ ಸುಖು ಕಾರ್ಯಶೈಲಿಯ ಬಗ್ಗೆ ಪ್ರಭಾವಿ ಸಚಿವ ವಿಕ್ರಮಾದಿತ್ಯ ಸಿಂಗ್‌ ಸೇರಿದಂತೆ ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆಗೆ ಹೈಕಮಾಂಡ್‌ ಮೇಲೆ ಒತ್ತಡ ಹೇರಿದ್ದಾರೆ. ಈ ನಡುವೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸುಖು ಸ್ಪಷ್ಟಪಡಿಸಿದ್ದಾರೆ. ಉತ್ತರ ಭಾರತದಲ್ಲಿ ಆಡಳಿತದಲ್ಲಿರುವ ಏಕೈಕ ಸರ್ಕಾರವನ್ನು ಉಳಿಸಿಕೊಳ್ಳಲು ಪಕ್ಷವು ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಸಿದ್ಧವಾಗಿದೆ ಎಂಬ ಸಂದೇಶವನ್ನು ಹೈಕಮಾಂಡ್‌ ರವಾನಿಸಿದೆ. ಪಕ್ಷದ ವೀಕ್ಷಕರು ಎಲ್ಲ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಗುರುವಾರ ಸಂಜೆಯೊಳಗೆ ಹೈಕಮಾಂಡ್‌ಗೆ ವರದಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. 

ಬಿಜೆಪಿ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. ಬಜೆಟ್‌ ಅಧಿವೇಶನದ ಸಂದರ್ಭದಲ್ಲಿ ಗದ್ದಲ ಎಬ್ಬಿಸಿದ ಆರೋಪದಲ್ಲಿ 15 ಶಾಸಕರನ್ನು ವಿಧಾನಸಭಾಧ್ಯಕ್ಷರು ಅಮಾನತು ಮಾಡಿದರು. ವಿರೋಧ ಪಕ್ಷದ ಉಳಿದ ಶಾಸಕರು ಸಭಾತ್ಯಾಗ ಮಾಡಿದರು. ಆ ಬಳಿಕ ಬಜೆಟ್‌ಗೆ ಅಂಗೀಕಾರ ಪಡೆಯಲಾಯಿತು. ಈ ಮೂಲಕ, ಬುಧವಾರದ ಮಟ್ಟಿಗೆ ಸರ್ಕಾರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಯಿತು. 

‘ಹಿಮಾಚಲ ಪ್ರದೇಶದಲ್ಲಿ ಜನಾದೇಶಕ್ಕೆ ದ್ರೋಹ ಬಗೆಯಲು ಪಕ್ಷ ಬಿಡುವುದಿಲ್ಲ. ಸರ್ಕಾರ ಉಳಿಸಿಕೊಳ್ಳಲು ಕೆಲವು ಕಠಿಣ ಕ್ರಮ ಕೈಗೊಳ್ಳಲು ಪಕ್ಷ ಹಿಂಜರಿಯುವುದಿಲ್ಲ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಸುದ್ದಿಗಾರರಿಗೆ ತಿಳಿಸಿದರು. 

68 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ 40 ಸದಸ್ಯರನ್ನು ಹೊಂದಿದೆ. ಮೂವರು ಪಕ್ಷೇತರ ಶಾಸಕರು ಸರ್ಕಾರವನ್ನು ಬೆಂಬಲಿಸಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಆರು ಶಾಸಕರು ಅಡ್ಡ ಮತದಾನ ಮಾಡಿದ್ದರು. ಪಕ್ಷೇತರ ಶಾಸಕರು ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ್‌ ಅವರಿಗೆ ಮತ ಚಲಾಯಿಸಿದ್ದರು. ಇದರಿಂದಾಗಿ ಕಾಂಗ್ರೆಸ್‌ ಅಭ್ಯರ್ಥಿ ಸೋತಿದ್ದರು. 

ನಾನು ಹೋರಾಟಗಾರ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಿಲ್ಲ. ಆರು ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಲಾಗಿದೆ. ಕಾಂಗ್ರೆಸ್‌ ಸರ್ಕಾರವು ಐದು ವರ್ಷಗಳ ಕಾಲ ಸುಭದ್ರವಾಗಿರಲಿದೆ.
-ಸುಖ್ವಿಂದರ್ ಸಿಂಗ್ ಸುಖು ಮುಖ್ಯಮಂತ್ರಿ

ಸಚಿವ ಸ್ಥಾನಕ್ಕೆ ವಿಕ್ರಮಾದಿತ್ಯ ರಾಜೀನಾಮೆ 

ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್‌ ಅವರು ಸಚಿವ ಸ್ಥಾನಕ್ಕೆ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮನ್ನು ಅವಮಾನಿಸಲಾಗಿದ್ದು ಸುಖು ಸಂಪುಟದಲ್ಲಿ ಒಂದು ಗಂಟೆ ಮುಂದುವರಿಯುವುದು ಕಷ್ಟ ಎಂದೂ ಅವರು ಹೇಳಿದ್ದಾರೆ. 

ಅವರು ಮಾಜಿ ಮುಖ್ಯಮಂತ್ರಿ ದಿವಂಗತ ವೀರಭದ್ರ ಸಿಂಗ್‌ ಹಾಗೂ ಹಿಮಾಚಲ ಪ್ರದೇಶ ಕಾಂಗ್ರೆಸ್‌ ಮುಖ್ಯಸ್ಥೆ ಪ್ರತಿಭಾ ಸಿಂಗ್‌ ಅವರ ಪುತ್ರ. ‘ಕೆಲವು ಕಡೆಗಳಿಂದ ನನ್ನನ್ನು ಅವಮಾನಿಸುವ ಹಾಗೂ ದುರ್ಬಲಗೊಳಿಸುವ ಪ್ರಯತ್ನಗಳು ನಡೆದಿವೆ. ಇಷ್ಟರ ನಡುವೆಯೂ ಸರ್ಕಾರವನ್ನು ಬೆಂಬಲಿಸಿದ್ದೇನೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ’ರಾಜ್ಯದ ಬೆಳವಣಿಗೆಗಳ ಕುರಿತು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಾಯಕರಾದ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಮಾಹಿತಿ ನೀಡಿದ್ದೇನೆ. ಚೆಂಡು ಈಗ ಹೈಕಮಾಂಡ್‌ ಅಂಗಳದಲ್ಲಿದೆ. ಏನು ತಪ್ಪಾಗಿದೆ ಎಂಬುದ ಕುರಿತು ಕಾಂಗ್ರೆಸ್‌ ನಾಯಕರು ಯೋಚಿಸುವ ಅಗತ್ಯ ಇದೆ’ ಎಂದು ಅವರು ಹೇಳಿದರು. 

‘ವಿಕ್ರಮಾದಿತ್ಯ ಅವರ ರಾಜೀನಾಮೆ ಅಂಗೀಕರಿಸಿಲ್ಲ. ಅವರು ಕಿರಿಯ ಸಹೋದರ ಇದ್ದಂತೆ. ಅವರು ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದು ಅವುಗಳನ್ನು ಬಗೆಹರಿಸಲಾಗುವುದು’ ಎಂದು ಸುಖು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT