ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಮಾಚಲ: ಪರೀಕ್ಷಾ ಹಂತದಲ್ಲೇ ಜಲ ವಿದ್ಯುತ್‌ ಸ್ಥಾವರದಲ್ಲಿ ದೋಷ

ಹೊಸ ಯೋಜನೆಗಳಿಗೆ ಅನುಮತಿ ನೀಡದಂತೆ ಪರಿಸರವಾದಿಗಳ ಬೇಡಿಕೆ
Published 14 ಮೇ 2024, 15:18 IST
Last Updated 14 ಮೇ 2024, 15:18 IST
ಅಕ್ಷರ ಗಾತ್ರ

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ 25 ಮೆಗಾವಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಲುಂಬಾಡುಗ್‌ ಜಲ ವಿದ್ಯುತ್‌ ಯೋಜನೆಯಲ್ಲಿ ಪರೀಕ್ಷಾ ಹಂತದಲ್ಲೇ ದೋಷ ಕಂಡುಬಂದಿದೆ. ಮೇ 10ರಂದು ಸ್ಥಾವರದ ಪೆನ್‌ಸ್ಟಾಕ್‌ನಲ್ಲಿ (ಜಲಚಕ್ರಕ್ಕೆ ನೀರು ಪಂಪ್‌ ಮಾಡುವ ಪೈಪ್‌) ಸೋರಿಕೆ ಕಂಡುಬಂದಿದೆ. ಇದರಿಂದಾಗಿ ಕಾಂಗ್ರಾ ಜಿಲ್ಲೆಯ ಮುಲ್ತಾನ್‌ ಗ್ರಾಮದಲ್ಲಿ ಆಸ್ತಿಪಾಸ್ತಿಗಳಿಗೆ ಗಮನಾರ್ಹ ಹಾನಿಯಾಗಿದೆ ಎಂದು ಪರಿಸರವಾದಿಗಳ ಸತ್ಯಶೋಧನಾ ತಂಡದಿಂದ ತಿಳಿದುಬಂದಿದೆ.

‘ಹಿಮಧಾರಾ ಎನ್ವಿರಾನ್ಮೆಂಟ್‌ ರಿಸರ್ಚ್‌ ಆ್ಯಂಡ್‌ ಕಲೆಕ್ಟಿವ್‌’ ತಂಡದ ಮೂವರು ಸದಸ್ಯರು ಕಳೆದ ಶನಿವಾರ ಆ ಪ್ರದೇಶಕ್ಕೆ ಭೇಟಿ ನೀಡಿ, ಹಾನಿ ಕುರಿತು ಸಾಕ್ಷ್ಯ ಸಂಗ್ರಹಿಸಿದ್ದಾರೆ.

ಸ್ಥಾವರದ ಪೆನ್‌ಸ್ಟಾಕ್‌ನಿಂದ ಕೆಸರು ಮಿಶ್ರಿತ ನೀರು ಚಿಮ್ಮಿ ಗ್ರಾಮದ 80 ಕುಟುಂಬಗಳ ಮೇಲೆ ಪರಿಣಾಮ ಬೀರಿದೆ. 25 ಮೆಗಾವಾಟ್‌ ಮತ್ತು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಹೊಸ ಜಲ ವಿದ್ಯುತ್‌ ಯೋಜನೆಗಳಿಗೆ ನಿಷೇಧ ಹೇರುವಂತೆ ಪರಿಸರವಾದಿಗಳು ಬೇಡಿಕೆಯಿಟ್ಟಿದ್ದಾರೆ. 

ಲುಂಬಾಡುಗ್‌ ನದಿಯ ಮೇಲೆ ನಿರ್ಮಿಸಲಾದ ಈ ಯೋಜನೆಯು ಬಿಯಾಸ್‌ ಹಾಗೂ ಅದರ ಉಪನದಿಗಳ 40 ಯೋಜನೆಗಳಲ್ಲೊಂದಾಗಿದೆ. ಇದರ 19 ಯೋಜನೆಗಳು ಭೂಗತ ಹಾಗೂ ಗಮನಾರ್ಹವಾದ ಉತ್ಖನನದೊಂದಿಗೆ 25 ಮೆಗಾವಾಟ್‌ ಮತ್ತು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯ ಹೊಂದಿವೆ.

ಮೇಘಾ ಎಂಜಿನಿಯರಿಂಗ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ನಿಂದ ಕಾರ್ಯಗತಗೊಳ್ಳುತ್ತಿರುವ ಯೋಜನೆಯಲ್ಲಿ ಆರಂಭದಲ್ಲೇ ಸೋರಿಕೆ ಕಂಡುಬಂದಿದೆ. ಸೋರಿಕೆಯ ಪ್ರಮಾಣ ಸಣ್ಣ ಪ್ರಮಾಣದಲ್ಲಿದ್ದು, ಸುರಕ್ಷತಾ ಪರಿಶೀಲನೆಯ ನಂತರ ಕಾರ್ಯಾರಂಭ ಮಾಡಲಾಗುವುದು ಎಂದು ಕಂಪನಿಯು ಜನರಿಗೆ ಭರವಸೆ ನೀಡಿದೆ. 

ಮೇ 10ರಂದು ನಡೆದ ಈ ಘಟನೆಯಿಂದಾಗಿ ಮುಲ್ತಾನ್‌ ಮಾರುಕಟ್ಟೆ ಮತ್ತು 4 ಹೆಕ್ಟೇರ್‌ ಕೃಷಿಭೂಮಿ ಮೇಲೆ ಪರಿಣಾಮ ಬೀರಿದ್ದು, ಈ ಪ್ರದೇಶದಲ್ಲಿ 6 ಅಡಿಗಳಷ್ಟು ಕೆಸರು ಆವರಿಸಿಕೊಂಡಿರುವುದನ್ನು ತಂಡ ಪತ್ತೆಹಚ್ಚಿದೆ. ಜಲಾಶಯ ಸಂಪೂರ್ಣವಾಗಿ ಬರಿದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರೂ ನೀರು ಸೋರಿಕೆ ಮುಂದುವರಿದಿದೆ ಎಂದು ತಂಡ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT