ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

J&K Election: ಪಾಕಿಸ್ತಾನದಿಂದ ಬಂದ ನಿರಾಶ್ರಿತರಿಗೆ ಮೊದಲ ಬಾರಿಗೆ ಮತದಾನದ ಹಕ್ಕು

Published : 24 ಸೆಪ್ಟೆಂಬರ್ 2024, 15:12 IST
Last Updated : 24 ಸೆಪ್ಟೆಂಬರ್ 2024, 15:12 IST
ಫಾಲೋ ಮಾಡಿ
Comments

ಶ್ರೀನಗರ: ಪಾಕಿಸ್ತಾನದಿಂದ ವಲಸೆ ಬಂದ ಸಾವಿರಾರು ನಿರಾಶ್ರಿತ ಕುಟುಂಬಗಳು, ಅದರಲ್ಲೂ ಹೆಚ್ಚಾಗಿ ಹಿಂದೂಗಳು, ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮತ ಚಲಾಯಿಸಲು ಸಿದ್ಧರಾಗಿದ್ದಾರೆ. 

ಪಶ್ಚಿಮ ಪಾಕಿಸ್ತಾನ ನಿರಾಶ್ರಿತರು (ಡಬ್ಲ್ಯುಪಿಆರ್‌) ಎಂದು ಕರೆಯಲಾಗುವ ಈ ಕುಟುಂಬಗಳು 1947ರ ದೇಶ ವಿಭಜನೆಯ ನಂತರ ಈಗ ಪಾಕಿಸ್ತಾನವಾಗಿರುವ ಪಶ್ಚಿಮ ಪಂಜಾಬ್‌ನಿಂದ ವಲಸೆ ಬಂದಿದ್ದವು. ಜಮ್ಮುವಿನ ಗಡಿ ಪ್ರದೇಶಗಳಲ್ಲಿ ನೆಲೆಸಿರುವ ಡಬ್ಲ್ಯುಪಿಆರ್‌ಗಳು ಈ ಹಿಂದೆ ಸಂಸತ್ತಿನ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದವು. ಆದರೆ, ವಿಧಾನಸಭೆ ಚುನಾವಣೆಗಳಲ್ಲಿ ಮತ ಚಲಾಯಿಸುವ ಹಕ್ಕು ಸಿಕ್ಕಿರಲಿಲ್ಲ. ಸಂವಿಧಾನದ ವಿಧಿ 370ರಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್‌ನಲ್ಲಿ ರದ್ದುಗೊಳಿಸಿದ ನಂತರ ಈ ಕುಟುಂಬಗಳಿಗೆ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಸಿಕ್ಕಿದೆ. 

2020ರ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯಲ್ಲಿ ಡಬ್ಲ್ಯುಪಿಆರ್‌ಗಳು ತಮ್ಮ ಮತದಾನದ ಹಕ್ಕನ್ನು ಮೊದಲ ಬಾರಿಗೆ ಚಲಾಯಿಸಿದ್ದವು. ಇಷ್ಟೇ ಅಲ್ಲದೆ, ಸರ್ಕಾರ ಈ ನಿರಾಶ್ರಿತರಿಗೆ ನಿವಾಸಿ ಪ್ರಮಾಣ ಪತ್ರ ನೀಡಿದ್ದಲ್ಲದೆ, ಪ್ರತಿ ಕುಟುಂಬಕ್ಕೆ ₹5 ಲಕ್ಷ ನೆರವು ಕೂಡ ನೀಡಿತ್ತು.  

ಅಧಿಕೃತ ಮಾಹಿತಿ ಪ್ರಕಾರ, 1947ರಲ್ಲಿ ಜಮ್ಮುವಿನಲ್ಲಿ 5,764 ಡಬ್ಲ್ಯುಪಿಆರ್ ಕುಟುಂಬಗಳಿದ್ದವು. ಈಗ 20,000 ಕುಟುಂಬಗಳಿವೆ. ಡಬ್ಲ್ಯುಪಿಆರ್ ಸಮುದಾಯದ ಅನೇಕರಿಗೆ, ಮತದಾನದ ಹಕ್ಕು ಸಿಕ್ಕಿರುವುದು ಸಂಭ್ರಮ ಉಂಟು ಮಾಡಿದೆ. 

‘ಈ ಮೈಲಿಗಲ್ಲನ್ನು ನಮ್ಮ ಸಾಂಪ್ರದಾಯಿಕ ತಿನಿಸುಗಳಾದ ಪುರಿ-ಹಲ್ವಾ ಮತ್ತು ಸಿಹಿತಿಂಡಿಗಳೊಂದಿಗೆ ಸಂಭ್ರಮಿಸಲು ಯೋಜಿಸಿದ್ದೇವೆ’ ಎಂದು ಡಬ್ಲ್ಯುಪಿಆರ್‌ ಕ್ರಿಯಾ ಸಮಿತಿ ಅಧ್ಯಕ್ಷರಾದ ಲಾಭು ರಾಮ್ ಹೇಳಿದ್ದಾರೆ.

‘ಈಗ ಪ್ರಜಾಪ್ರಭುತ್ವವನ್ನು ಬಲಪಡಿಸುವುದಾಗಿ ಹೇಳಿಕೊಳ್ಳುವವರು, ಮೂಲಭೂತವಾದ ಪ್ರಜಾಸತ್ತಾತ್ಮಕ ಹಕ್ಕನ್ನು ನಮ್ಮಿಂದ ಕಸಿದುಕೊಂಡಿದ್ದರು. ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಧಿಕಾರವಿಲ್ಲದೆ ನಾವು ಎರಡನೇ ದರ್ಜೆಯ ನಾಗರಿಕರಾಗಿ ಇದುವರೆಗೆ ಬದುಕಿದ್ದೇವು’ ಎಂದು ಡಬ್ಲ್ಯುಪಿಆರ್‌ ಸದಸ್ಯ ದೇಸ್ ರಾಜ್ ಪ್ರತಿಕ್ರಿಯಿಸಿದ್ದಾರೆ.

ಡಬ್ಲ್ಯುಪಿಆರ್‌ ಸಮುದಾಯವನ್ನು ಮತ್ತಷ್ಟು ಸಬಲೀಕರಣಗೊಳಿಸಲು, ಎರಡು ವಿಧಾನಸಭಾ ಸ್ಥಾನಗಳನ್ನು ಇವರಿಗಾಗಿ ಮೀಸಲಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT