ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರೆ ಹೆಸರಲ್ಲಿ ಹೊಣೆಯಿಂದ ನುಣುಚಿಕೊಳ್ಳಬೇಡಿ: ಬಾಂಬೆ ಹೈಕೋರ್ಟ್

ಆಸ್ಪತ್ರೆಗಳಲ್ಲಿ ಸಾವು: ‘ಮಹಾ’ ಸರ್ಕಾರಕ್ಕೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್
Published 6 ಅಕ್ಟೋಬರ್ 2023, 14:03 IST
Last Updated 6 ಅಕ್ಟೋಬರ್ 2023, 14:03 IST
ಅಕ್ಷರ ಗಾತ್ರ

ಮುಂಬೈ: ‘ಸರ್ಕಾರವಾಗಿ ನೀವು ಸಮಸ್ಯೆಗಳತ್ತ ಬೊಟ್ಟು ಮಾಡಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ. ನಿಮ್ಮ ಜವಾಬ್ದಾರಿಯನ್ನು ಖಾಸಗಿಯವರ ಮೇಲೆ ಹಾಕಬಾರದು’ ಎಂದು ಮಹಾರಾಷ್ಟ್ರ ಸರ್ಕಾರವನ್ನು ಉದ್ದೇಶಿಸಿ ಬಾಂಬೆ ಹೈಕೋರ್ಟ್‌ ಶುಕ್ರವಾರ ಹೇಳಿದೆ.

ರಾಜ್ಯದ ಮೂರು ಪ್ರತ್ಯೇಕ ಆಸ್ಪತ್ರೆಗಳಲ್ಲಿ ಇತ್ತೀಚೆಗೆ ಸಂಭವಿಸಿದ ಸಾವುಗಳ ಹಿನ್ನೆಲೆಯಲ್ಲಿ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ವೇಳೆ, ಮುಖ್ಯನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ಆರೀಫ್‌ ಡಾಕ್ಟರ್‌ ಅವರಿದ್ದ ವಿಭಾಗೀಯ ನ್ಯಾಯಪೀಠವು ರಾಜ್ಯ ಸರ್ಕಾರದತ್ತ ಚಾಟಿ ಬೀಸಿತು.

ನಾಂದೇಡ್, ನಾಗ್ಪುರ ಹಾಗೂ ಛತ್ರಪತಿ ಸಂಭಾಜಿನಗರದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಮವಾರದಿಂದ ಬುಧವಾರದ ವರೆಗೆ 80ಕ್ಕೂ ಹೆಚ್ಚು ರೋಗಿಗಳು ಮೃತಪಟ್ಟಿದ್ದರು.

ವಿಚಾರಣೆ ಆರಂಭಗೊಂಡಾಗ, ಅಡ್ವೊಕೇಟ್‌ ಜನರಲ್ ಬೀರೇಂದ್ರ ಸರಾಫ್‌, ‘ಸಾವುಗಳು ವರದಿಯಾಗಿರುವ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳು, ಉಪಕರಣಗಳು ಇವೆ. ಬಹಳ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಂದ ಕರೆತಂದು ಈ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ರೋಗಿಗಳೇ ಮೃತಪಟ್ಟಿದ್ದಾರೆ‘ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

‘ಕೆಲ ಸಮಸ್ಯೆಗಳಿರುವುದನ್ನು ನಿರಾಕರಿಸುವಂತಿಲ್ಲ. ಆದರೆ, ಈ ವಿಷಯದಲ್ಲಿ ಸಂಬಂಧಪಟ್ಟ ಆಸ್ಪತ್ರೆಗಳು ನಿರ್ಲಕ್ಷ್ಯ ತೋರಿದಂತೆ ಕಾಣುತ್ತಿಲ್ಲ. ಅಷ್ಟೊಂದು ಸಂಖ್ಯೆಯ ರೋಗಿಗಳು ಮೃತಪಟ್ಟಿರುವುದು ದುರದೃಷ್ಟಕರ‘ ಎಂದು ಸರಾಫ್‌ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಆರೋಗ್ಯ ಸೇವೆಯನ್ನು ಬಲಪಡಿಸುವುದು ಹೇಗೆ? ಎಲ್ಲ ಸೌಲಭ್ಯಗಳು ಕಾಗದದ ಮೇಲೆ ಮಾತ್ರ ಇವೆ. ಇವುಗಳು ಜನರಿಗೆ ತಲುಪದಿದ್ದರೆ ಏನೂ ಪ್ರಯೋಜನವಿಲ್ಲ. ಕೇವಲ ಔಷಧಗಳು, ಉಪಕರಣಗಳಿಗೆ ಸಂಬಂಧಿಸಿ ಈ ಮಾತು ಹೇಳುತ್ತಿಲ್ಲ. ರಾಜ್ಯದ ಆರೋಗ್ಯ ವ್ಯವಸ್ಥೆಯ ಸ್ಥಿತಿಯೇ ಹೀಗಿದೆ’ ಎಂದು ಹೇಳಿತು.

‘ರಾಜ್ಯ ಸರ್ಕಾರ ಉತ್ತಮ ನೀತಿಗಳನ್ನು ರೂಪಿಸಿದೆ; ಅವುಗಳನ್ನು ಅನುಷ್ಠಾನಗೊಳಿಸಿಲ್ಲ. ಇಷ್ಟೊಂದು ಪ್ರಮಾಣದಲ್ಲಿ ಸಾವುಗಳು ಸಂಭವಿಸುವಂತಹ ಪರಿಸ್ಥಿತಿ ಹೇಗೆ ನಿರ್ಮಾಣವಾಯಿತು? ಏನಾಯಿತು’ ಎಂದು ನ್ಯಾಯಮೂರ್ತಿ ಆರೀಫ್‌ ಡಾಕ್ಟರ್‌ ಕೇಳಿದರು.

‘ಸಣ್ಣ ಹಾಗೂ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ದಾಖಲಾದ ರೋಗಿಗಳ ಸ್ಥಿತಿ ಗಂಭೀರವಾದ ಕೂಡಲೇ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ಕಳಿಸುತ್ತಾರೆ. ನಾಂದೇಡ್‌ ಮತ್ತು ಛತ್ರಪತಿ ಸಂಭಾಜಿನಗರ ಆಸ್ಪತ್ರೆಗಳಲ್ಲಿ ಮೃತಪಟ್ಟ ಬಹುತೇಕ ರೋಗಿಗಳನ್ನು ಗಂಭೀರ ಸ್ಥಿತಿಯಲ್ಲಿ ಈ ಆಸ್ಪತ್ರೆಗಳಿಗೆ ಕರೆ ತರಲಾಗಿತ್ತು. ಬಹ‌ಳಷ್ಟು ಸಂಖ್ಯೆಯ ರೋಗಿಗಳು ಈ ಆಸ್ಪತ್ರೆಗಳಿಗೆ ದಾಖಲಾದ ಒಂದು ದಿನದೊಳಗೇ ಮೃತಪಟ್ಟಿದ್ದಾರೆ’ ಎಂದು ಸರಾಫ್‌ ವಿವರಿಸಿದರು.

ನ್ಯಾಯಪೀಠವು ಅಡ್ವೊಕೇಟ್‌ ಜನರಲ್ ಸರಾಫ್‌ ಅವರ ವಿವರಣೆಯನ್ನು ಒಪ್ಪಿದರೂ, ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಅನುದಾನ ಹಂಚಿಕೆ ಕಡಿಮೆಯಾಗಿರುವುದು, ಹುದ್ದೆಗಳು ಭರ್ತಿಯಾಗದೇ ಉಳಿದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿತು.

ಮಂಜೂರಾದ ಹಾಗೂ ಖಾಲಿ ಇರುವ ಹುದ್ದೆಗಳು, ಔಷಧಗಳ ಬೇಡಿಕೆ–ದಾಸ್ತಾನುಗಳ ವಿವರ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಕ್ಕಾಗಿ ಕಳೆದ ಆರು ತಿಂಗಳಲ್ಲಿ ಕೈಗೊಂಡ ಕ್ರಮಗಳ ಕುರಿತ ವಿವರಗಳನ್ನು ಒಳಗೊಂಡ ಪ್ರಮಾಣಪತ್ರವನ್ನು ಮುಂದಿನ ವಿಚಾರಣೆ ನಡೆಯುವ ಅಕ್ಟೋಬರ್‌ 30 ಒಳಗಾಗಿ ಸಲ್ಲಿಸುವಂತೆ ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಔಷಧ ಇಲಾಖೆಗಳ ಪ್ರಧಾನ ಆಯುಕ್ತರಿಗೆ ‌ನ್ಯಾಯಪೀಠ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT