ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇರಳ ಶಾಲಾ ಪಠ್ಯದಲ್ಲಿ ಪುರುಷನ ಅಡುಗೆಯ ಅಧ್ಯಾಯ

Published 4 ಜೂನ್ 2024, 23:42 IST
Last Updated 4 ಜೂನ್ 2024, 23:42 IST
ಅಕ್ಷರ ಗಾತ್ರ

ತಿರುವನಂತಪುರ: ಮಕ್ಕಳಲ್ಲಿ ಲಿಂಗ ಸಮಾನತೆ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಕೇರಳ ಸರ್ಕಾರವು ಪುರುಷರು ಅಡುಗೆ ಮಾಡುವ ಹಾಗೂ ಅಡುಗೆ ಕೋಣೆಯಲ್ಲಿ ಕೆಲಸ ಮಾಡುವಂತಹ ದೃಶ್ಯ ಸಹಿತ ಪಾಠವನ್ನು ಶಾಲಾ ಪಠ್ಯ ಪುಸ್ತಕಗಳಲ್ಲಿ ಪರಿಚಯಿಸಿದೆ. 

ಶಿಕ್ಷಣ ಸಚಿವ ವಿ. ಶಿವಕುಟ್ಟಿ ಅವರು ಮೂರನೇ ತರಗತಿಯ ಪಠ್ಯಪುಸ್ತಕದಲ್ಲಿ ಪತಿಯು ಅಡುಗೆ ಮಾಡುತ್ತಿರುವ ದೃಶ್ಯವಿರುವ ಪಾಠದ ಚಿತ್ರವನ್ನು ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಮಹಿಳೆ ಮಾತ್ರವೇ ಅಡುಗೆ ಕೋಣೆಯಲ್ಲಿ ಕೆಲಸ ಮಾಡಬೇಕು ಮತ್ತು ಆಕೆಯೇ ಮನೆಯ ಎಲ್ಲರಿಗೂ ಊಟ ತಯಾರಿಸಬೇಕು ಎಂಬ ಸಾಮಾನ್ಯ ಮನಃಸ್ಥಿತಿ ಮತ್ತು ಚಿತ್ರಣವನ್ನು ಬದಲಿಸಿ, ಪುರುಷರು ಕೂಡ ಅಡುಗೆ ಮಾಡಬಹುದು ಹಾಗೂ ಇದು ಯಾವುದೇ ಲಿಂಗ ಆಧಾರಿತ ಕೆಲಸವಲ್ಲ ಎಂಬುದನ್ನು ಮಕ್ಕಳಲ್ಲಿ ಮೂಡಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಲಿಂಗ ತಾರತಮ್ಯ ಹೋಗಲಾಡಿಸಲು ಕೇರಳದ ಸಿಪಿಎಂ ಸರ್ಕಾರ ಕೈಗೊಂಡಿರುವ ಮತ್ತೊಂದು ಕ್ರಮ ಇದಾಗಿದ್ದು, ಈಗಾಗಲೇ ಕೇವಲ ಗಂಡು ಮಕ್ಕಳ ಮತ್ತು ಕೇವಲ ಹೆಣ್ಣುಮಕ್ಕಳ ಬೇರೆ ಬೇರೆ ಶಾಲೆಗಳನ್ನು ಒಟ್ಟುಗೂಡಿಸಿ ಇಬ್ಬರೂ ಒಂದೆಡೆ ಶಿಕ್ಷಣ ಪಡೆಯುವಂತೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ. 

ಮಲಯಾಳ ಮಾಧ್ಯಮ ಪಠ್ಯಪುಸ್ತಕದಲ್ಲಿ ಪತಿಯು ಅಡುಗೆ ಕೋಣೆಯ ನೆಲದಲ್ಲಿ ಕುಳಿತು ತೆಂಗಿನಕಾಯಿ ತುರಿಯುತ್ತಿರುವ ಚಿತ್ರವಿದ್ದರೆ, ಇಂಗ್ಲಿಷ್‌ ಮಾಧ್ಯಮ ಪುಸ್ತಕದಲ್ಲಿ ಪತಿಯು ಮಕ್ಕಳಿಗಾಗಿ ಅಡುಗೆ ಕೋಣೆಯಲ್ಲಿ ತಿಂಡಿ ತಯಾರು ಮಾಡುತ್ತಿರುವ ಚಿತ್ರವಿದೆ. ಮಕ್ಕಳೂ ಸೇರಿದಂತೆ ಇತರ ಕುಟುಂಬ ಸದಸ್ಯರು ಸಹ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿರುವುದನ್ನು ತೋರಿಸಲಾಗಿದೆ.

ಪಾಠದ ಬಳಿಕ ಮಕ್ಕಳು ತಮ್ಮ ಮನೆಯ ಅಡುಗೆ ಕೋಣೆಯಲ್ಲಿ ಕಂಡುಬರುವ ಚಟುವಟಿಕೆಗಳ ಬಗ್ಗೆ ತಮ್ಮ ಅವಲೋಕನಗಳನ್ನು ಬರೆಯುವಂತೆ ಸೂಚಿಸಲಾಗಿದೆ. 

ಕೇರಳ ಪಠ್ಯ ಪುಸ್ತಕಗಳಲ್ಲಿ ಪತಿ ಅಡುಗೆ ಮಾಡುವ ದೃಶ್ಯ ಲಿಂಗ ಸಮಾನತೆಗೆ ಸರ್ಕಾರದ ನೂತನ ಕ್ರಮ  ಪಾಠದ ಚಿತ್ರ ಬಿಡುಗಡೆ ಮಾಡಿದ ಶಿಕ್ಷಣ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT