ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಲರಾ: ಬಾಯಿ ಮೂಲಕ ನೀಡುವ ಲಸಿಕೆ ಬಿಡುಗಡೆ

Published : 27 ಆಗಸ್ಟ್ 2024, 16:03 IST
Last Updated : 27 ಆಗಸ್ಟ್ 2024, 16:03 IST
ಫಾಲೋ ಮಾಡಿ
Comments

ಹೈದರಾಬಾದ್: ಲಸಿಕೆ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಭಾರತ್ ಬಯೋಟೆಕ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ (ಬಿಬಿಐಎಲ್‌), ಕಾಲರಾ ತಡೆಗೆ ಬಾಯಿ ಮೂಲಕ ನೀಡುವ ಲಸಿಕೆ ‘ಹಿಲ್‌ಕಾಲ್‌’ಅನ್ನು ಮಂಗಳವಾರ ಬಿಡುಗಡೆ ಮಾಡಿದೆ. ಸಿಂಗಪುರ ಮೂಲದ ಲಸಿಕೆ ಸಂಶೋಧನಾ ಸಂಸ್ಥೆ ‘ಹಿಲ್‌ಮನ್‌ ಲ್ಯಾಬೊರೆಟರೀಸ್’ನ ಪರವಾನಗಿ ಅಡಿಯಲ್ಲಿ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. 

ಪ್ರಸ್ತುತ, ಒಂದು ಔಷಧ ಕಂಪನಿ ಮಾತ್ರ ಕಾಲರಾ ತಡೆಗೆ ಬಾಯಿ ಮೂಲಕ ನೀಡುವ ಲಸಿಕೆಯನ್ನು ತಯಾರಿಸಿ, ವಿಶ್ವದಾದ್ಯಂತ ಪೂರೈಸುತ್ತಿದೆ. ಇದರ ಪರಿಣಾಮವಾಗಿ ವಾರ್ಷಿಕ ಸುಮಾರು 4 ಕೋಟಿ ಡೋಸ್‌ಗಳಷ್ಟು ಲಸಿಕೆಯ ಕೊರತೆ ಕಾಡುತ್ತಿದೆ. ಈ ಕೊರತೆಯನ್ನು ತಗ್ಗಿಸಲು, ಭಾರತ್ ಬಯೋಟೆಕ್ ಸಂಸ್ಥೆಯು ಹೈದರಾಬಾದ್ ಮತ್ತು ಭುವನೇಶ್ವರದಲ್ಲಿ ವಾರ್ಷಿಕ 20 ಕೋಟಿ ಡೋಸ್‌ ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಘಟಕಗಳನ್ನು ಸ್ಥಾಪಿಸಿದೆ. 

‘ಹಿಲ್‌ಕಾಲ್‌’ ಲಸಿಕೆಯನ್ನು ಆರಂಭದಲ್ಲಿ ಭಾರತ್‌ ಬಯೋಟೆಕ್‌ನ ಹೈದರಾಬಾದ್‌ನಲ್ಲಿರುವ ಘಟಕದಲ್ಲಿ ಉತ್ಪಾದಿಸಲಾಗುವುದು. ಅದು ವಾರ್ಷಿಕ 4.5 ಕೋಟಿ ಡೋಸ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಅಗತ್ಯ ಅನುಮೋದನೆಗಳ ಬಳಿಕ ಭುವನೇಶ್ವರದಲ್ಲಿರುವ ಘಟಕದಲ್ಲೂ ಉತ್ಪಾದನೆ ಪ್ರಾರಂಭಿಸಲಾಗುತ್ತದೆ. ಒಂದು ವರ್ಷಕ್ಕಿಂತ ಮೇಲಿನವರಿಗೆ ಈ ಲಸಿಕೆಯನ್ನು ತೆಗೆದುಕೊಳ್ಳಬಹುದು.

ಕಾಲರಾವನ್ನು ತಡೆಗಟ್ಟಲು ಸಾಧ್ಯವಿದ್ದು, ಚಿಕಿತ್ಸೆ ಪಡೆದರೆ ಸೋಂಕಿನಿಂದ ಚೇತರಿಸಿಕೊಳ್ಳಬಹುದು. ಆದರೂ 2021ರ ಬಳಿಕ ವಿಶ್ವದಾದ್ಯಂತ ಕಾಲರಾ ಪ್ರಕರಣಗಳು ಮತ್ತು ಅದರಿಂದಾಗಿ ಸತ್ತವರ ಸಂಖ್ಯೆ ಏರಿಕೆ ಕಂಡಿದೆ. 2023ರ ಆರಂಭದಿಂದ ಈ ವರ್ಷದ ಮಾರ್ಚ್‌ವರೆಗೆ 31 ದೇಶಗಳಲ್ಲಿ 8.24 ಲಕ್ಷ ಪ್ರಕರಣಗಳು ಮತ್ತು 5,900 ಸಾವುಗಳು ವರದಿಯಾಗಿವೆ.

‘ಲಸಿಕೆಯಿಂದ ಕಾಲರಾ ತಡೆ ಮತ್ತು ನಿಯಂತ್ರಣ ಸಾಧ್ಯ. ‘ಹಿಲ್‌ಕಾಲ್‌’ ಅಭಿವೃದ್ಧಿಪಡಿಸುವ ಮೂಲಕ ಕಾಲರಾ ತಡೆಗೆ ಜಾಗತಿಕವಾಗಿ ನಡೆಯುತ್ತಿರುವ ಪ್ರಯತ್ನದಲ್ಲಿ ನಾವೂ ಕೈಜೋಡಿಸಿದ್ದೇವೆ. ಹೈದರಾಬಾದ್‌ ಮತ್ತು ಭುವನೇಶ್ವರದಲ್ಲಿರುವ ನಮ್ಮ ಘಟಕಗಳು ಕಾಲರಾ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿ, ಪೂರೈಸಲಿದೆ’ ಎಂದು ಭಾರತ್‌ ಬಯೋಟೆಕ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ.ಕೃಷ್ಣ ಎಲ್ಲಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT