ಗುವಾಹಟಿ: ‘ಮಿಯಾ ಮುಸ್ಲಿಮರು(ಬಂಗಾಳಿ ಭಾಷಿಕ ಮುಸ್ಲಿಮರು) ಅಸ್ಸಾಂ ವಶಪಡಿಸಿಕೊಳ್ಳಲು ಬಿಡುವುದಿಲ್ಲ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದರು.
ನಾಗಾಂವ್‌ನಲ್ಲಿ 14 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ವಿಷಯವಾಗಿ ರಾಜ್ಯದಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆ ಕುರಿತು ಚರ್ಚಿಸಲು ವಿಧಾನಸಭೆಯ ವಿರೋಧ ಪಕ್ಷಗಳು ಮಂಡಿಸಿದ ನಿಲುವಳಿ ಸೂಚನೆ ಕುರಿತು ಮಾತನಾಡಿದ ಶರ್ಮಾ, ‘ಜನಸಂಖ್ಯೆಯ ಬೆಳವಣಿಗೆ ಗಣನೆಗೆ ತೆಗೆದುಕೊಂಡರೆ ಅಪರಾಧಗಳ ಪ್ರಮಾಣ ಹೆಚ್ಚಿಲ್ಲ’ ಎಂದರು.
ಚರ್ಚೆ ವೇಳೆ ಪ್ರತಿಪಕ್ಷಗಳು ಶರ್ಮಾ ಅವರನ್ನು ‘ಪಕ್ಷಪಾತಿ’ ಎಂದು ಆರೋಪಿಸಿದ್ದು, ‘ಹೌದು.. ನಾನು ಪಕ್ಷಪಾತಿ... ಅದರ ಬಗ್ಗೆ ನೀವು ಏನು ಮಾಡಬಹುದು? ಕೆಳ ಅಸ್ಸಾಂ ಜನರು ಮೇಲಿನ ಅಸ್ಸಾಂಗೆ ಯಾಕೆ ಹೋಗುತ್ತಾರೆ? ಅದರಿಂದ ಮಿಯಾ ಮುಸ್ಲಿಮರು ಅಸ್ಸಾಂ ಅನ್ನು ವಶಪಡಿಸಿಕೊಳ್ಳಬಹುದೇ? ನಾನು ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ’ ಎಂದು ಶರ್ಮಾ ತಿರುಗೇಟು ನೀಡಿದರು.
ಈ ವಿಚಾರವಾಗಿ ವಿಪಕ್ಷಗಳ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಸ್ಪೀಕರ್ ಬಿಸ್ವಜಿತ್ ದೈಮರಿ ಅವರು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.