ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

'ಅಗ್ನಿಪಥ' ಯೋಜನೆಯಡಿ ನೇಮಕಾತಿ ಆರಂಭಿಸಿದ ವಾಯುಪಡೆ

Last Updated 24 ಜೂನ್ 2022, 12:41 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ವಾಯುಪಡೆಯು ಕೇಂದ್ರ ಸರ್ಕಾರದ ಹೊಸ ಯೋಜನೆ 'ಅಗ್ನಿಪಥ' ಅಡಿಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಶುಕ್ರವಾರ ಆರಂಭಿಸಿದೆ.

ಇಂದಿನಿಂದ (ಜೂನ್‌ 24) ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಜುಲೈ 5ರ ವರೆಗೆ ಅರ್ಜಿಸಲ್ಲಿಸಬಹುದಾಗಿದೆ. ಜುಲೈ 24ರಂದು ಆನ್‌ಲೈನ್‌ ಮೂಲಕ ಪರೀಕ್ಷೆ ನಡೆಯಲಿದೆ ಎಂದು ಪ್ರಕಟಣೆ ಹೊರಡಿಸಿದೆ.

ಆನ್‌ಲೈನ್‌ ಟೆಸ್ಟ್‌, ದೈಹಿಕ್ಷ ಕ್ಷಮತೆ ಪರೀಕ್ಷೆ (ಪಿಇಟಿ), ಹೊಂದಾಣಿಕೆ ಮಟ್ಟದ ಎರಡು ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

'1999ರ ಡಿಸೆಂಬರ್‌ 29 ಹಾಗೂ 2005ರ ಜೂನ್‌ 29ರ ನಡುವೆ ಜನಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಯು ಒಂದುವೇಳೆ ಆಯ್ಕೆ ಪ್ರಕ್ರಿಯೆಯ ಎಲ್ಲ ಹಂತಗಳನ್ನೂ ಪೂರ್ಣಗೊಳಿಸಿದರೆ, ದಾಖಲು ಮಾಡಿದ ದಿನಕ್ಕೆ ಗರಿಷ್ಠ ವಯೋಮಿತಿ 23 ವರ್ಷ' ಎಂದು ಐಎಎಫ್‌ ಪ್ರಕಟಣೆಯಲ್ಲಿ ತಿಳಿಸಿದೆ.

'1950ರ ವಾಯುಪಡೆ ಕಾಯ್ದೆ ಅಡಿಯಲ್ಲಿ ಅಗ್ನಿವೀರರನ್ನು ನಾಲ್ಕು ವರ್ಷಗಳ ಅವಧಿಗೆ ದಾಖಲಿಸಿಕೊಳ್ಳಲಾಗುತ್ತದೆ. ಅಗ್ನಿವೀರರಿಗೆ ವಾಯುಪಡೆಯಲ್ಲಿ ಸದ್ಯ ಇರುವ ಶ್ರೇಣಿಗಳಿಗಿಂತ ವಿಭಿನ್ನವಾದ ಶ್ರೇಣಿ ನೀಡಲಾಗುತ್ತದೆ. ನಾಲ್ಕು ವರ್ಷಗಳ ನಿಗದಿತ ಒಪ್ಪಂದದ ಅವಧಿಯನ್ನು ಮೀರಿ, ವಾಯುಪಡೆಯು ಅಗ್ನಿವೀರರನ್ನು ಮುಂದುವರಿಸುವುದಿಲ್ಲ' ಎಂದೂ ಸ್ಪಷ್ಟಪಡಿಸಿದೆ.

'ಅಗ್ನಿಪಥ' ಯೋಜನೆಯನ್ನುಜೂನ್‌ 14ರಂದು ಪ್ರಕಟಿಸಿದ್ದ ಕೇಂದ್ರ ಸರ್ಕಾರ,ಹದಿನೇಳೂವರೆ ವರ್ಷದಿಂದ 21 ವರ್ಷದೊಳಗಿನವರು ನೇಮಕಾತಿಗೆ ಅರ್ಹರು ಎಂದು ಹೇಳಿತ್ತು. ಆದರೆ, ಯೋಜನೆಗೆ ಪ್ರತಿಭಟನೆಗಳು ವ್ಯಕ್ತವಾದ ಬೆನ್ನಲ್ಲೇ,ಗರಿಷ್ಠ ವಯೋಮಿತಿಯನ್ನು ಪರಿಷ್ಕರಿಸಿ 23 ವರ್ಷಕ್ಕೆ ಹೆಚ್ಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT