ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ ರಕ್ಷಣೆ: ತೀವ್ರಗಾಮಿ ಸಶಸ್ತ್ರ ಗುಂಪಿನಿಂದ ‘ಪ್ರತಿಜ್ಞಾವಿಧಿ’ ಬೋಧನೆ

ಮೈತೇಯಿ ಬುಡಕಟ್ಟಿಗೆ ಸೇರಿದ 37 ಶಾಸಕರು, ಇಬ್ಬರು ಸಂಸದರಿಂದ ಸ್ವೀಕಾರ
Published 24 ಜನವರಿ 2024, 20:23 IST
Last Updated 24 ಜನವರಿ 2024, 20:23 IST
ಅಕ್ಷರ ಗಾತ್ರ

ಗುವಾಹಟಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ‘ಅರಾಮಬಾಯಿ ತೆಂಗೋಲ್’ ಎಂಬ ಸಶಸ್ತ್ರ ತೀವ್ರಗಾಮಿಗಳ ಸಂಘಟನೆ, ಮಣಿಪುರ ರಾಜ್ಯ ರಕ್ಷಣೆ ಮಾಡುವುದಕ್ಕೆ ಸಂಬಂಧಿಸಿ ಮೈತೇಯಿ ಬುಡಕಟ್ಟಿಗೆ ಸೇರಿದ 39 ಶಾಸಕರು ಹಾಗೂ ಇಬ್ಬರು ಸಂಸದರಿಗೆ ಬುಧವಾರ ‘ಪ್ರತಿಜ್ಞಾವಿಧಿ’ ಬೋಧಿಸಿದೆ.

ಮಣಿಪುರ ರಾಜಧಾನಿ ಇಂಫಾಲ್‌ನಲ್ಲಿರುವ ಐತಿಹಾಸಿಕ ಕಂಗ್ಲಾ ಕೋಟೆಯಲ್ಲಿ ಈ ‘ಪ್ರತಿಜ್ಞಾ ವಿಧಿ’ ಬೋಧಿಸುವ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಮುದಾಯದ ಎಲ್ಲ 40 ಶಾಸಕರು ಹಾಗೂ ಸಂಸದರಿಗೆ ಸಂಘಟನೆಯು ಸೂಚನೆ ನೀಡಿತ್ತು.

ಆದರೆ, ಮುಖ್ಯಮಂತ್ರಿ ಬೀರೇನ್‌ ಸಿಂಗ್‌ ಹಾಗೂ ಮತ್ತೊಬ್ಬ ಶಾಸಕ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಉಳಿದವರು ಪ್ರತಿಜ್ಞೆ ಸ್ವೀಕರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರತಿಜ್ಞಾವಿಧಿ ಕಾರ್ಯಕ್ರಮದ ಚಿತ್ರಗಳನ್ನು ಸಂಘಟನೆಯು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದೆ. ಸಂಘಟನೆಯ ಬೇಡಿಕೆಗಳನ್ನು ಒಳಗೊಂಡ ಪತ್ರಕ್ಕೆ ಮುಖ್ಯಮಂತ್ರಿ ಬೀರೇನ್‌ ಸಿಂಗ್, ಹಿರಿಯ ಸಚಿವ ವಿಶ್ವಜಿತ್ ಸಿಂಗ್‌ ಸೇರಿದಂತೆ 39 ಶಾಸಕರು, ಇಬ್ಬರು ಸಂಸದರು ಸಹಿ ಹಾಕಿರುವುದು ಈ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಕಾಣಿಸುತ್ತದೆ.

‘ಮುಖ್ಯಮಂತ್ರಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ, ಪತ್ರಕ್ಕೆ ಸಹಿ ಹಾಕಿದ್ದಾರೆ’ ಎಂದು ಮೂಲಗಳು ಹೇಳಿವೆ.

ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಡಿಯೊವನ್ನು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಲಾಗಿದೆ. ಸಂಘಟನೆಯ ಸದಸ್ಯರು ಬೋಧಿಸಿದಂತೆ ಶಾಸಕರು ಹಾಗೂ ಸಂಸದರು ಪ್ರತಿಜ್ಞಾವಿಧಿ ಉಚ್ಚರಿಸುತ್ತಿರುವ ದೃಶ್ಯಗಳು ವಿಡಿಯೊದಲ್ಲಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಒಕ್ರಮ್ ಇಬೋಬಿ ಸಿಂಗ್, ವಿದೇಶಾಂಗ ಖಾತೆ ರಾಜ್ಯ ಸಚಿವ ಆರ್‌.ಕೆ.ಸಿಂಗ್, ರಾಜ್ಯಸಭಾ ಸದಸ್ಯ ಲೀಶೆಂಬಾ ಸನಾಜೋಬಾ ಪ್ರತಿಜ್ಞೆ ಸ್ವೀಕರಿಸಿದ ಪ್ರಮುಖರು. ಬಹುತೇಕ ಶಾಸಕರು ಬಿಜೆಪಿಗೆ ಸೇರಿದವರಾಗಿದ್ದಾರೆ.

ಆತಂಕ: ‘ಸಂಘಟನೆಯು ಪ್ರತಿಜ್ಞಾ ವಿಧಿ ಬೋಧಿಸಿದ ಈ ಬೆಳವಣಿಗೆಯಿಂದ ನಾವು ಗಾಬರಿಗೊಂಡಿದ್ದೇವೆ’ ಎಂದು ಕುಕಿ ಬುಡಕಟ್ಟು ಗುಂಪುಗಳು ಹೇಳಿವೆ.

‘ಮಣಿಪುರದಲ್ಲಿ ಕಳೆದ ವರ್ಷ ಮೇನಲ್ಲಿ ಆರಂಭವಾದ ಹಿಂಸಾಚಾರದಲ್ಲಿ ಕುಕಿ ಸಮುದಾಯದವರ ಹತ್ಯೆಯಲ್ಲಿ ಅರಾಮಬಾಯಿ ತೆಂಗೋಲ್‌ ಸಂಘಟನೆಯ ಪಾತ್ರ ಇತ್ತು’ ಎಂದೂ ಕುಕಿ ಗುಂಪುಗಳು ಹೇಳಿವೆ.

‘ಸಂಘಟನೆಯ ಮುಖ್ಯಸ್ಥ ಕೋರೌಂಗ್‌ಬನ್ ಖುಮಾನ್ ಕಾರ್ಯಕ್ರಮ ನಡೆದ ಸ್ಥಳಕ್ಕೆ ಬಂದಾಗ ಮಣಿಪುರ ಪೊಲೀಸರು ಹಾಗೂ ಕೇಂದ್ರೀಯ ಭದ್ರತಾ ಪಡೆಗಳ ಸಿಬ್ಬಂದಿ ಮೂಕಪ್ರೇಕ್ಷಕರಂತೆ ನಿಂತಿದ್ದರು’ ಎಂದೂ ಕುಕಿ ಗುಂಪುಗಳ ವೇದಿಕೆ ಐಟಿಎಲ್‌ಎಫ್‌ ಹೇಳಿದೆ.

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು ಎಂದೂ ಅದು ಒತ್ತಾಯಿಸಿದೆ. 

ಶಾಗೆ ಪತ್ರ: ಕುಕಿ–ಝೋ–ಮಾರ್ ಸಮುದಾಯಕ್ಕೆ ಸೇರಿದ 10 ಶಾಸಕರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಈ ಕುರಿತು ಪತ್ರ ಬರೆದಿದ್ದಾರೆ. ಮಣಿಪುರದಲ್ಲಿ ಕೂಡಲೇ ಆಫ್ಸ್‌ಪಾ ಮರು ಜಾರಿ ಮಾಡಬೇಕು, ಮೋರೆ ಪಟ್ಟಣದಿಂದ ರಾಜ್ಯ ಪೊಲೀಸರನ್ನು ವಾಪಸು ಕರೆಸಿಕೊಳ್ಳಬೇಕು ಎಂದು ಕೋರಿದ್ದಾರೆ.

‘ತೆಂಗೋಲ್‌’ ಬೇಡಿಕೆಗಳೇನು?

ಅರಾಂಬಾಯಿ ತೆಂಗೋಲ್‌ ಸಂಘಟನೆಯು ಕೆಲ ಬೇಡಿಕೆಗಳನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕರು ಹಾಗೂ ಸಂಸದರ ಮುಂದಿಟ್ಟಿದೆ ಎಂದು ಮೂಲಗಳು ಹೇಳಿವೆ.

ಮಣಿಪುರದ 35 ಶಾಸಕರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಸೋಮವಾರ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದ ಬೇಡಿಕೆಗಳಲ್ಲಿ ಸಂಘಟನೆ ಮುಂದಿಟ್ಟಿರುವ ಬೇಡಿಕೆಗಳು ಒಂದೇ ಆಗಿವೆ. ಸಂಘರ್ಷಕ್ಕೆ ಕೊನೆ ಹಾಡಲು ಈ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿದ್ದ ಶಾಸಕರು, ತಪ್ಪಿದಲ್ಲಿ ಮಣಿಪುರ ಜನರೊಂದಿಗೆ ಸಮಾಲೋಚಿಸಿ ಸೂಕ್ತ ಹೆಜ್ಜೆ ಇಡುವುದಾಗಿಯೂ ಹೇಳಿದ್ದರು.

ಸಂಘಟನೆಯ ಪ್ರಮುಖ ಬೇಡಿಕೆಗಳು ಹೀಗಿವೆ:

  • ಕಣಿವೆ ರಾಜ್ಯದಲ್ಲಿ ಕೈಗೊಂಡಿರುವ ಕಾರ್ಯಾಚರಣೆಯನ್ನು ನಿಲ್ಲಿಸಬೇಕು

  • ಕುಕಿ ಬಂಡುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು

  • ಕುಕಿಗಳಿಗೆ ನೀಡಿರುವ ಎಸ್‌ಟಿ ಸ್ಥಾನ ರದ್ದು ಮಾಡಬೇಕು

  • ಮಣಿಪುರ ಪ್ರವೇಶಿಸಿರುವ ವಿದೇಶಿಯರನ್ನು ಪತ್ತೆ ಹಚ್ಚುವುದಕ್ಕಾಗಿ ಎನ್‌ಆರ್‌ಸಿ ಜಾರಿಗೊಳಿಸಬೇಕು

  • ಅಸ್ಸಾಂ ರೈಫಲ್ಸ್‌ ತುಕಡಿಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT