ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿಶ್ವಾಸ ಚರ್ಚೆಗೂ ಮುನ್ನ ಮಣಿಪುರಕ್ಕೆ ಭೇಟಿ ನೀಡಲಿರುವ ಇಂಡಿಯಾ ಒಕ್ಕೂಟದ ನಾಯಕರು

Published 27 ಜುಲೈ 2023, 11:17 IST
Last Updated 27 ಜುಲೈ 2023, 11:17 IST
ಅಕ್ಷರ ಗಾತ್ರ

ನವದೆಹಲಿ: ಮಣಿ‍ಪುರ ಹಿಂಸಾಚಾರ ಸಂಬಂಧ ಪ್ರಧಾನಿ ಮೋದಿ ಸಂಸತ್‌ನಲ್ಲಿ ಪ್ರತಿಕ್ರಿಯೆ ನೀಡಬೇಕು ಎಂದು ಒತ್ತಾಯಿಸಿರುವ ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ‘ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನೂ ಮಂಡಿಸಿದೆ. ನಿರ್ಣಯವನ್ನು ಲೋಕಸಭೆ ಸ್ಪೀಕರ್ ಒಪ್ಪಿಕೊಂಡಿದ್ದಾರೆ.

ಈ ಮಧ್ಯೆ ಮಣಿಪುರದಲ್ಲಿನ ಪರಿಸ್ಥಿತಿ ಅವಲೋಕಿಸಲು ಇದೇ ತಿಂಗಳಿನ ಅಂತ್ಯದಲ್ಲಿ ‘ಇಂಡಿಯಾ‘ ಒಕ್ಕೂಟ ಪ್ರತಿನಿಧಿಗಳ ತಂಡ ಅಲ್ಲಿಗೆ ಭೇಡಿ ನೀಡಲಿದೆ.

ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಮುಂದಿನ ವಾರ ಲೋಕಸಭೆಯಲ್ಲಿ ಚರ್ಚೆಗೆ ಬರಲಿದೆ. ಅದಕ್ಕೂ ಮುನ್ನ ಮಣಿಪುರಕ್ಕೆ ತೆರಳಿ, ಅಲ್ಲಿನ ಸ್ಥಿತಿಗತಿಗಳನ್ನು ಅವಲೋಕನ ಮಾಡಿ, ಪ್ರಾಥಮಿಕ ಮಾಹಿತಿಯನ್ನು ಪಡೆಯಲು ಮುಂದಾಗಿದೆ.

ಈ ಮೊದಲು ಎನ್‌ಡಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕಳುಹಿಸುವ ನಿರ್ಧಾರ ಮಾಡಲಾಗಿತ್ತು. ಆದರೆ ಅದು ಕಷ್ಟಸಾಧ್ಯವಾಗಿದ್ದರಿಂದ ಸಂಸದರ ನಿಯೋಗವನ್ನು ಕಳುಹಿಸಿಕೊಡಲು ನಿರ್ಧರಿಸಲಾಗಿದೆ.

ಸಂಸದರ ಈ ತಂಡವು ಹಿಂಸಾಚಾರ ಪೀಡಿತ ಪ್ರದೇಶಗಳಿಗೆ, ನಿರಾಶ್ರಿತ ಶಿಬಿರಗಳಿಗೆ ಭೇಟಿ ನೀಡಲಿದೆ. ಅಲ್ಲದೇ ವಿವಿಧ ಸಮುದಾಯಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಿದೆ.

ಜುಲೈ 29 ಹಾಗೂ 30 ರಂದು ನಿಯೋಗವು ಮಣಿ‍ಪುರಕ್ಕೆ ಭೇಟಿ ನೀಡಲಿದೆ.

ತೃಣಮೂಲ ಕಾಂಗ್ರೆಸ್‌ನ ಸುಶ್ಮಿತಾ ದೇವ್‌, ಎನ್‌ಸಿಪಿಯ ವಂದನಾ ಚವಾಣ್‌, ಜೆಎಂಎಂನ ಮೊಹುವಾ ಮಜ್‌ಹೀ ಈ ನಿಯೋಗದಲ್ಲಿ ಇರಲಿದ್ದಾರೆ.

‘ಮಣಿಪುರದ ಜನರಿಗೆ ನಾವು ಸೂಕ್ಷ್ಮತೆ ಹಾಗೂ ಸಹಾನುಭೂತಿಯನ್ನು ತೋರಿಸಬೇಕಿದೆ. ನಮ್ಮ ಇಂಡಿಯಾ ನಿಯೋಗವು ಕಣಿವೆ ಹಾಗೂ ಗುಡ್ಡಗಾಡು ಪ್ರದೇಶಕ್ಕೆ ಭೇಟಿ ನೀಡಲಿದೆ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರಿಕ್‌ ಒಬ್ರಿಯಾನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT