ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎನ್‌ಎಸ್ ವಿಕ್ರಮಾದಿತ್ಯ, ವಿಕ್ರಾಂತ್‌: ನೌಕಾಪಡೆಯಿಂದ ಯಶಸ್ವಿ ಪೂರ್ಣ ತಾಲೀಮು

ದೇಶಿಯ ‘ಐಎನ್‌ಎಸ್ ವಿಕ್ರಮಾದಿತ್ಯ’, ‘ಐಎನ್‌ಎಸ್ ವಿಕ್ರಾಂತ್‌’ ನೌಕಾವಾಹಕಗಳ ಜಂಟಿ ಕಾರ್ಯಾಚರಣೆ, 35 ಯುದ್ಧ ವಿಮಾನಗಳ ಬಳಕೆ
Published 10 ಜೂನ್ 2023, 16:22 IST
Last Updated 10 ಜೂನ್ 2023, 16:22 IST
ಅಕ್ಷರ ಗಾತ್ರ

ನವದೆಹಲಿ/ಕಾರವಾರ: ಗಡಿಯಲ್ಲಿ ಚೀನಾ ಜೊತೆಗಿನ ಉದ್ವಿಗ್ನ ಸ್ಥಿತಿಯ ನಡುವೆಯೇ ಭಾರತೀಯ ನೌಕಾಪಡೆಯು ಇದೇ ಮೊದಲ ಬಾರಿಗೆ ತನ್ನ ವ್ಯಾಪ್ತಿಯ ಹಿಂದೂ ಮಹಾಸಾಗರದಲ್ಲಿ ಯುದ್ಧವಿಮಾನಗಳ ನೌಕಾವಾಹಕಗಳಾದ ‘ಐಎನ್ಎಸ್‌ ವಿಕ್ರಮಾದಿತ್ಯ’ ಮತ್ತು ‘ಐಎನ್‌ಎಸ್‌ ವಿಕ್ರಾಂತ್’ ಒಳಗೊಂಡಂತೆ ಪೂರ್ಣಪ್ರಮಾಣದ ಅಭ್ಯಾಸ ನಡೆಸಿದ್ದು, ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ಮಿಗ್‌–29ಕೆ ಯುದ್ಧ ವಿಮಾನಗಳು, ಹೊಸದಾಗಿ ವಾಯುಪಡೆಗೆ ಸೇರಿರುವ ಎಂಎಚ್‌60ಆರ್, ಈಗಾಗಲೇ ಬಳಕೆಯಲ್ಲಿರುವ ಕಾಮೊವ್‌, ಸೀ ಕಿಂಗ್‌, ಚೇತಕ್‌, ದೇಶೀಯವಾಗಿ ತಯಾರಿಸಲಾದ ಹಗುರ ಯುದ್ಧವಿಮಾನ ಒಳಗೊಂಡಂತೆ ಸುಮಾರು 35 ಯುದ್ಧವಿಮಾನಗಳನ್ನು ಹೊತ್ತ ಎರಡೂ ನೌಕಾವಾಹಕಗಳು ಸಮುದ್ರದಲ್ಲಿ ಸಂಚರಿಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದವು.

ಐಎನ್‌ಎಸ್‌ ವಿಕ್ರಮಾದಿತ್ಯ ಮತ್ತು ಐಎನ್‌ಎಸ್‌ ವಿಕ್ರಾಂತ್ ಈ ತಾಲೀಮಿನ ಕೇಂದ್ರ ಬಿಂದುಗಳಾಗಿದ್ದವು. ಸಮುದ್ರದಲ್ಲಿ ತೇಲುವ ಯುದ್ಧನೆಲೆಯಾಗಿ ಯುದ್ಧ ವಿಮಾನಗಳು ಆಗಸಕ್ಕೆ ಚಿಮ್ಮಲು ವೇದಿಕೆಯಾದವು.

‘ಈ ಎರಡೂ ಯುದ್ಧವಿಮಾನಗಳ ವಾಹಕಗಳನ್ನು ಸಮುದ್ರದಲ್ಲಿ ಯಾವುದೇ ಭಾಗದಲ್ಲಿ ನಿಯೋಜಿಸಬಹುದು. ಬಾನಂಗಳದಲ್ಲಿ ಎದುರಾಗಬಹುದಾದ ಯಾವುದೇ ರೀತಿಯ ಅಪಾಯ ಎದುರಿಸಲು, ಸುಸ್ಥಿರ ವಾಯು ಸಂಚಾರ ನಿರ್ವಹಣೆಗೆ ಪೂರಕವಾಗಿರಲಿದ್ದು, ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಲು ಸಹಕಾರಿಯಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಇದರ ಜೊತೆಗೆ ಸಮುದ್ರ ವಲಯದಲ್ಲಿ ಸಂಘಟಿತ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಲು ಭಾರತೀಯ ನೌಕಾಪಡೆಯು ಯಾವುದೇ ರೀತಿಯಲ್ಲಿ ನೆರವಾಗಲು ಸನ್ನದ್ಧವಾಗಿದೆ ಎಂಬ ಸಂದೇಶವನ್ನು ಭಾರತವು ತನ್ನ ಸ್ನೇಹಪರ ರಾಷ್ಟ್ರಗಳಿಗೆ ನೀಡಿದಂತಾಗಿದೆ ಎಂದರು.

ಆದರೆ, ಎರಡೂ ಯುದ್ಧವಿಮಾನಗಳ ವಾಹಕವು ಸೇರಿದಂತೆ ಯುದ್ಧವಿಮಾನಗಳ ತಾಲೀಮನ್ನು ಯಾವ ದಿನಾಂಕದಂದು ನಡೆಸಲಾಯಿತು ಎಂದು ನಿರ್ದಿಷ್ಟವಾಗಿ ನೌಕಾಪಡೆಯು ತಿಳಿಸಿಲ್ಲ.

‘ಈ ತಾಲೀಮು ಭಾರತದ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡುವಲ್ಲಿ ನೌಕಾಪಡೆಯ ಬದ್ಧತೆಯನ್ನು ಒತ್ತಿಹೇಳುವ ಅಸಾಧಾರಣ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಈ ಸಮರಾಭ್ಯಾಸವು ಭಾರತೀಯ ನೌಕಾಪಡೆಯ ಕಡಲ ಭದ್ರತೆಯನ್ನು ಹೆಚ್ಚಿಸುವ ಮತ್ತು ಹಿಂದೂ ಮಹಾಸಾಗರ ಹಾಗೂ ಅದರಾಚೆಗೂ ತನ್ನ ಸಾಮರ್ಥ್ಯ ಪ್ರದರ್ಶನದ ದಿಸೆಯಲ್ಲಿ ಮಹತ್ವದ ಮೈಲಿಗಲ್ಲು ಆಗಿದೆ’ ಎಂದು ಭಾರತೀಯ ನೌಕಾಪಡೆಯ ವಕ್ತಾರ, ಕಮಾಂಡರ್ ವಿವೇಕ್ ಮಧ್ವಲ್ ಹೇಳಿದ್ದಾರೆ. 

ರಾಷ್ಟ್ರೀಯ ಹಿತಾಸಕ್ತಿಗಳ ರಕ್ಷಣೆ, ಪ್ರಾದೇಶಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಮತ್ತು ಜಲಪ್ರದೇಶದಲ್ಲಿ ಪಾಲುದಾರಿಕೆಯನ್ನು ಪೋಷಿಸುವುದಕ್ಕೆ ಭಾರತವು ಬದ್ಧವಾಗಿದೆ ಎಂಬುದನ್ನು ಈ ಕವಾಯತು ತೋರಿಸಿಕೊಟ್ಟಿದೆ ಎಂದು ಅವರು ಹೇಳಿದ್ದಾರೆ.

ದೇಶಿಯವಾಗಿ ನಿರ್ಮಿಸಲಾಗಿರುವ ಐಎನ್‌ಎಸ್ ವಿಕ್ರಾಂತ್ ಅನ್ನು ಕಳೆದ ವರ್ಷದ ‌‌ಸೆಪ್ಟೆಂಬರ್‌ನಲ್ಲಿ ನೌಕಾಪಡೆಗೆ ಸೇರ್ಪಡೆ ಮಾಡಿದ ಬಳಿಕ ಏಕಕಾಲಕ್ಕೆ ಎರಡರೂ ವಿಮಾನವಾಹಕ ನೌಕೆಗಳನ್ನು ಬಳಸಿ ನಡೆಸಿದ ಮೊದಲ ತಾಲೀಮು ಇದಾಗಿದೆ. 

ಭದ್ರತೆ: ಪಾರುಪತ್ಯ ಹೊಂದಲು ನೌಕಾಪಡೆ ಒತ್ತು

ನವದೆಹಲಿ: ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನ ಸ್ಥಿತಿ ಇರುವಂತೆಯೇ ಭಾರತದ ನೌಕಾಪಡೆಯ ಈ ತಾಲೀಮು ಗಮನಸೆಳೆದಿದೆ. ಗಡಿಯಲ್ಲಿ ವಿವಾದಿತ ಪ್ರದೇಶದಲ್ಲಿ ಉಭಯ ರಾಷ್ಟ್ರಗಳು ಹೆಚ್ಚಿನ ಸೇನಾ ತುಕಡಿಗಳನ್ನು ನಿಯೋಜಿಸಿವೆ.

ಇಂತಹ ಸಂದರ್ಭದಲ್ಲಿ ನೌಕಾಪಡೆಯು ಕಡಲ ವಲಯದಲ್ಲಿ ಭದ್ರತೆಯನ್ನು ಒದಗಿಸುವ ಪ್ರಬಲ ರಾಷ್ಟ್ರವಾಗಿ ತನ್ನ ಸಾಮರ್ಥ್ಯ ಕಾಯ್ದುಕೊಳ್ಳಲು ಒತ್ತು ನೀಡಿದೆ. ಕಡಲ ಮಾರ್ಗದಲ್ಲಿನ ಆಯಕಟ್ಟಿನ ಸ್ಥಳಗಳಲ್ಲಿ ಕಣ್ಗಾವಲನ್ನು ಹೆಚ್ಚಿಸಿದೆ. 

ಈ ವಿಷಯದಲ್ಲಿ ಚೀನಾದ ಪೀಪಲ್ಸ್‌ ಲಿಬರೇಷನ್ ಆರ್ಮಿಯ ನೌಕಾಪಡೆಯು ಪ್ರಬಲ ಸ್ಪರ್ಧೆಯನ್ನು ಒಡ್ಡಿದ್ದು, ತೇಲುವ ಯುದ್ಧನೆಲೆಗಳನ್ನು ನಿರ್ಮಾಣ ಮಾಡಲು ಹೆಚ್ಚಿನ ಒತ್ತು ನೀಡಿದೆ.

ಚೀನಾ 2019ರ ಡಿಸೆಂಬರ್‌ನಲ್ಲಿ ದೇಶೀಯವಾಗಿ ನಿರ್ಮಸಿದ್ದ ಮೊದಲ ಯುದ್ಧವಿಮಾನ ವಾಹಕ ‘ಶಾನ್‌ಡೊಂಗ್’ ಕಾರ್ಯಾರಂಭಕ್ಕೆ ಚಾಲನೆ ನೀಡಿತು.  2017ರಲ್ಲಿ ನಿರ್ಮಾಣ ಆರಂಭಿಸಿದ್ದು, 2018–19ನೇ ಸಾಲಿನಲ್ಲಿ ಬಹುಹಂತದಲ್ಲಿ ಪ್ರಯೋಗ ನಡೆಸಿತ್ತು.

ಚೀನಾದ ಎರಡನೇ ಯುದ್ಧವಿಮಾನಗಳ ವಾಹಕ 2024ರಲ್ಲಿ ಕಾರ್ಯಾರಂಭ ಮಾಡುವ ಸಾಧ್ಯತೆಯಿದ್ದು, ಇದು 85 ಸಾವಿರದಿಂದ 1 ಲಕ್ಷ ಟನ್‌ ತೂಕ ಸಾಗಣೆಯ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. ಮೂರನೇ ವಾಹಕ ಅಭಿವೃದ್ಧಿಗೂ ಚಾಲನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT