ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'INDIA' ಮಾಧ್ಯಮಗೋಷ್ಠಿ: ಕೇಜ್ರಿವಾಲ್, ಮಮತಾ, ಉದ್ಧವ್ ಠಾಕ್ರೆ ಹೇಳಿದ್ದೇನು?

Published 18 ಜುಲೈ 2023, 13:02 IST
Last Updated 18 ಜುಲೈ 2023, 13:02 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಲು ತಂತ್ರಗಾರಿಕೆಯಲ್ಲಿ ನಿರತವಾಗಿರುವ ವಿರೋಧ ಪಕ್ಷಗಳು, ತಮ್ಮ ಮೈತ್ರಿಕೂಟವನ್ನು 'INDIA'ಎಂದು ಕರೆದುಕೊಂಡಿವೆ.

ಸಭೆ ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ‘INDIA‘ದ ವಿವಿಧ ನಾಯಕರು ಮಾತನಾಡಿದರು. ಈ ಸಭೆಯಲ್ಲಿ ಸೋನಿಯಾ ಗಾಂಧಿ ಸೇರಿದಂತೆ ಎಲ್ಲ 26 ಪಕ್ಷಗಳ ನಾಯಕರು ಹಾಜರಿದ್ದರು.

ಯಾವ ನಾಯಕರು ಏನು ಮಾತನಾಡಿದರು ಎಂಬ ಮಾಹಿತಿ ಇಲ್ಲಿದೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್...

ಜನರು ನರೇಂದ್ರ ಮೋದಿಗೆ ಬಹುಮತ ಕೊಟ್ಟು ಗೆಲ್ಲಿಸಿದ್ದರು.‌ ಆದರೆ ಒಂಬತ್ತು ವರ್ಷದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ನಾಶ ಮಾಡಿದರು.‌ ದೇಶದಲ್ಲಿ ಎಲ್ಲವನ್ನೂ ಮಾರಾಟಕ್ಕೆ ಇಟ್ಟಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದರು.

ರೈಲ್ವೇ, ವಿಮಾನ ನಿಲ್ದಾಣ, ಭೂಮಿ ಎಲ್ಲವನ್ನೂ ಮಾರಾಟ ಮಾಡಿದ್ದಾರೆ.‌ ಇಂದು ದೇಶದ ಎಲ್ಲಾ ವರ್ಗದ ಜನರು ದುಖಃದಲ್ಲಿದ್ದಾರೆ.‌ ಈ ದೇಶವನ್ನು ಉಳಿಸಲು ನಾವು ಒಂದಾಗಿದ್ದೇವೆ ಎಂದು ಕೇಜ್ರಿವಾಲ್ ಹೇಳಿದರು.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ...

ಇವತ್ತಿನ ಸಭೆ ಯಶಸ್ವಿಯಾಗಿದೆ‌, ಮುಂದಿನ ದಿನಗಳಲ್ಲಿ ಎಲ್ಲಾ ಸಮುದಾಯಗಳ ಪರವಾಗಿ ಕೆಲಸ ಮಾಡುತ್ತೇವೆ. ದಲಿತ, ಅಲ್ಪಸಂಖ್ಯಾತ, ಹಿಂದೂ, ಕ್ರೈಸ್ತ ಎಲ್ಲರ ಪರವಾಗಿ ಕೆಲಸ ಮಾಡುತ್ತೇವೆ. ಸರ್ಕಾರವನ್ನ ಬೀಳಿಸುವುದು, ಶಾಸಕರನ್ನು ಖರೀದಿಸುವುದೇ ಬಿಜೆಪಿ ಗುರಿಯಾಗಿದೆ. ಎನ್‌ಡಿಎ ಇಂಡಿಯಾವನ್ನು ಚಾಲೆಂಜ್ ಮಾಡುತ್ತಾ? ಎಂದು ಪ್ರಶ್ನೆ ಮಾಡಿದರು.

ನಾವು ನಮ್ಮ ತಾಯಿ ನಾಡನ್ನು ಪ್ರೀತಿಸುತ್ತೇವೆ‌‌, ಜನರಿಗಾಗಿ ದೇಶಕ್ಕಾಗಿ ನಾವು ಕೆಲಸ ಮಾಡುತ್ತೇವೆ.‌ ಮುಂದಿನ ನಮ್ಮ ಎಲ್ಲಾ ಹೋರಾಟ ಇಂಡಿಯಾ ಹೆಸರಿನಲ್ಲಿ‌ ನಡೆಯಲಿದೆ‌ ನಮ್ಮನ್ನು ಎದುರಿಸಲು ಸಾಧ್ಯವಾಗುವುದೇ? ನಾವು ಭಾರತವನ್ನು ಉಳಿಸಬೇಕಿದೆ. ಬಿಜೆಪಿ ದೇಶವನ್ನು ಮಾರಾಟ ಮಾಡಲು ಮುಂದಾಗಿದೆ. ಪ್ರಜಾಪ್ರಭುತ್ವವನ್ನು ಖರೀದಿಸುವ ಪ್ರಯತ್ನ ನಡೆಸುತ್ತಿದೆ, ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡುತ್ತಿದೆ.

ಮುಂದಿನ ದಿನಗಳಲ್ಲಿ ಇಂಡಿಯಾಗೆ ಗೆಲುವಾಗುತ್ತದೆ ಹಾಗೂ ಬಿಜೆಪಿಗೆ ಸೋಲಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.

ಶಿವಸೇನೆ ನಾಯಕ ಉದ್ಧವ್ ಠಾಕ್ರೆ

ಬೆಂಗಳೂರಿನಲ್ಲಿ ನಡೆದ ಎರಡನೇ ಸಭೆ ಯಶಸ್ವಿಯಾಗಿದೆ.‌ ರಾಜಕೀಯದಲ್ಲಿ ವಿಭಿನ್ನ ವಿಚಾರಧಾರೆಗಳು ಸಹಜ.‌ ಅದೇ ಪ್ರಜಾಪ್ರಭುತ್ವದ ಸೌಂದರ್ಯ.‌ ಈ ದೇಶ ನಮ್ಮ ಕುಟುಂಬ, ಅದನ್ನು‌ ಉಳಿಸಲು ಹೋರಾಟ ಮಾಡುತ್ತೇವೆ ಎಂದು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಹೇಳಿದರು.

ದೇಶದ ಸ್ವಾತಂತ್ರ್ಯ ಆಪತ್ತಿನಲ್ಲಿದೆ, ಅದನ್ನು ನಾವು ಉಳಿಸಬೇಕಾಗಿದೆ. ಒಂದು ಪಕ್ಷ ಮಾತ್ರ ದೇಶವಲ್ಲ, ಇಡೀ ಜನರು ದೇಶವಾಗಿದ್ದಾರೆ ಎಂದು ಠಾಕ್ರೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT