ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎ ಅವಧಿಯಲ್ಲಿ 6 ಸಲ ನಿರ್ದಿಷ್ಟ ದಾಳಿ ಮಾಡಲಾಗಿತ್ತು ಎಂಬುದು ಸುಳ್ಳು –ಸಿಂಗ್

Last Updated 4 ಮೇ 2019, 13:31 IST
ಅಕ್ಷರ ಗಾತ್ರ

ನವದೆಹಲಿ: ‘ಯುಪಿಎ ಅವಧಿಯಲ್ಲಿ ಆರು ಬಾರಿ ನಿರ್ದಿಷ್ಟ ದಾಳಿ ಮಾಡಲಾಗಿತ್ತು’ ಎಂದು ಕಾಂಗ್ರೆಸ್‌ ನೀಡಿದ್ದ ಹೇಳಿಕೆಗೆ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಹಾಗೂ ವಿದೇಶಾಂಗ ಇಲಾಖೆ ರಾಜ್ಯ ಖಾತೆ ಸಚಿವ ಜನರಲ್‌ ವಿಕೆ ಸಿಂಗ್‌ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್‌ ಪಕ್ಷವು ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.

ಉತ್ತರ ಪ್ರದೇಶದ ಗಾಜಿಯಾಬಾದ್‌ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಿಂಗ್‌ ಟ್ವಿಟರ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ. 2008ರಿಂದ 2014ರ ಅವಧಿಯಲ್ಲಿ ಆರು ಬಾರಿ ದಾಳಿ ಮಾಡಿರುವುದಾಗಿ ಹೇಳುವ ಕಾಂಗ್ರೆಸ್‌ ಸೂಕ್ತ ಸಾಕ್ಷ್ಯ ಒದಗಿಸಲಿ ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್‌ ಹಿರಿಯ ನಾಯಕ ರಾಜೀವ್‌ ಶುಕ್ಲಾ ಅವರು ಗುರುವಾರ ನಡೆದ ಪ್ರತ್ರಿಕಾ ಗೋಷ್ಟಿಯಲ್ಲಿ ಮಾತನಾಡುತ್ತ, ಯುಪಿಎ ಅವಧಿಯಲ್ಲಿ ಆರು ಬಾರಿ ನಿರ್ದಿಷ್ಟ ದಾಳಿ ನಡೆಸಲಾಗಿದೆ ಎಂದು ಹೇಳಿದ್ದರು. ಜೊತೆಗೆ ಆರು ದಿನಾಂಕಗಳನ್ನೂ ಉಲ್ಲೇಖಿಸಿದ್ದರು. ಅದರಂತೆ ಮೊದಲ ದಾಳಿಯನ್ನು ಜಮ್ಮು ಕಾಶ್ಮೀರದ ಪೂಂಚ್‌ ಗಡಿ ಪ್ರದೇಶದಲ್ಲಿರುವ ಭಟ್ಟಲ್‌ ಸೆಕ್ಟರ್‌ನಲ್ಲಿ 2008ರ ಜೂನ್‌ 19ರಂದು ನಡೆಸಲಾಗಿತ್ತು. ಎರಡನೇ ದಾಳಿ, ನೀಲಂ ನದಿ ಕಣಿವೆ ಕೇಲ್‌ಪ್ರದೇಶದಲ್ಲಿರುವ ಶಾರದಾ ಸೆಕ್ಟರ್‌ನಲ್ಲಿ 2011ರ ಆಗಸ್ಟ್‌ 30 ಮತ್ತು ಸೆಪ್ಟೆಂಬರ್‌ 1ರ ನಡುವೆ ನಡೆದಿತ್ತು. ಮೂರನೇ ದಾಳಿಯನ್ನು ಸವಾನಾ ಪಾತ್ರ ಚೆಕ್‌ಪೋಸ್ಟ್‌ ಬಳಿ 2013ರ ಜನವರಿ 6ರಂದು ಸಂಘಟಿಸಲಾಗಿತ್ತು. ನಝಾಪಿರ್‌ ಪ್ರದೇಶದಲ್ಲಿ ಜುಲೈ 27, 28ರಂದು ನಾಲ್ಕನೇ ದಾಳಿ ನಡೆಸಿದ್ದ ಸೇನೆ, ನೀಲಂ ನದಿ ಕಣಿವೆ ಪ್ರದೇಶದಲ್ಲಿ 2013ರ ಆಗಸ್ಟ್‌ 6ರಂದು ಇನ್ನೊಮ್ಮೆ ದಾಳಿ ನಡೆಸಿತ್ತು. ಶುಕ್ಲಾ ಹೇಳುವಂತೆ ಕೊನೆಯ ದಾಳಿ ನಡೆದದ್ದು 2014ರ ಜನವರಿ 14ರಂದು.

ಈ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಸಿಂಗ್‌, ‘ಕಾಂಗ್ರೆಸ್‌ಗೆ ಸುಳ್ಳು ಹೇಳುವ ಚಾಳಿ ಇದೆ. ನಾನು ಸೇನೆಯ ಮುಖ್ಯಸ್ಥನಾಗಿದ್ದ ಅವಧಿಯಲ್ಲಿ ನಡೆದಿರುವುದಾಗಿ ನೀವು ಹೇಳುತ್ತಿರುವುದು ಯಾವ ನಿರ್ದಿಷ್ಟ ದಾಳಿಯ ಬಗೆಗೆ ಎಂದು ತಿಳಿಸುವಿರೇ? ಇಂತಹ ಮತ್ತೊಂದು ಕಥೆಯನ್ನು ಸೃಷ್ಟಿಸಲು ನೀವು ಕೆಲ ಕೂಪ್ಟಾ(Coupta)ಗಳನ್ನು ನೇಮಿಸಿಕೊಂಡಿರುವ ಬಗ್ಗೆ ನನಗೆ ಖಾತರಿಯಿದೆ’ ಎಂದು ಟ್ವೀಟಿಸಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರೂ ತಮ್ಮ ಅವಧಿಯಲ್ಲಿ ಹಲವು ಸಲ ನಿರ್ದಿಷ್ಟದಾಳಿಗಳನ್ನು ನಡೆಸಲಾಗಿತ್ತು ಎಂದು ಹೇಳಿಕೊಂಡಿದ್ದರು.

‘ಹಲವು ನಿರ್ದಿಷ್ಟ ದಾಳಿಗಳನ್ನು ನಮ್ಮ ಅಧಿಕಾರ ಅವಧಿಯಲ್ಲಿ ನಡೆಸಿದ್ದೇವೆ. ನಮ್ಮ ಪ್ರಕಾರ ಸೇನಾ ಕಾರ್ಯಾಚರಣೆಗಳು ಭಾರತ ವಿರೋಧಿ ಪಡೆಗಳನ್ನು ಹಿಮ್ಮೆಟ್ಟಿಸುವುದಾಗಿತ್ತೇ ವಿನಃ ಮತಗಳಿಕೆಗಾಗಿನ ಅಭ್ಯಾಸಗಳಲ್ಲ’ ಎಂದು ಮನಮೋಹನ್‌ ಸಿಂಗ್‌ ಅಭಿಪ್ರಾಯ ಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT