ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

TN|ಮತ್ತೆ ಸ್ಟಾಲಿನ್ ಸಂಪುಟ ಸೇರಿದ ಬಾಲಾಜಿ; ಹಿಂದೆ ಹೊಂದಿದ್ದ ಖಾತೆಯೇ ಮರು ಹಂಚಿಕೆ

ಉಪ ಮುಖ್ಯಮಂತ್ರಿಯಾಗಿ ಬಡ್ತಿ ಪಡೆದ ಉದಯನಿಧಿ
Published : 29 ಸೆಪ್ಟೆಂಬರ್ 2024, 10:21 IST
Last Updated : 29 ಸೆಪ್ಟೆಂಬರ್ 2024, 10:21 IST
ಫಾಲೋ ಮಾಡಿ
Comments

ಚೆನ್ನೈ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮೂರು ದಿನಗಳ ಹಿಂದೆಯಷ್ಟೇ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿರುವ ಡಿಎಂಕೆ ನಾಯಕ ವಿ. ಸೆಂಥಿಲ್‌ ಬಾಲಾಜಿ ಅವರು ತಮಿಳುನಾಡಿನ ಸಚಿವರಾಗಿ ಭಾನುವಾರ ಪ್ರಮಾಣವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತಮಿಳುನಾಡಿನ ರಾಜ್ಯಪಾಲ ಆರ್‌.ಎನ್‌.ರವಿ ಅವರು ಅಧಿಕಾರ ಮತ್ತು ಗೋಪ್ಯತೆ ಬೋಧಿಸಿದರು.

ಸೆಂಥಿಲ್ ಅವರಲ್ಲದೆ ಡಿಎಂಕೆ ಶಾಸಕರಾದ ಆರ್‌.ರಾಜೇಂದ್ರನ್‌, ಗೋವಿ ಚೆಝಿಯಾನ್‌ ಮತ್ತು ಎಸ್‌.ಎಂ.ನಾಸರ್‌ ಅವರೂ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಖಾತೆ ಹಂಚಿಕೆ: ಸೆಂಥಿಲ್‌ ಅವರು ಬಂಧನಕ್ಕೂ ಮುನ್ನ ಹೊಂದಿದ್ದ ಇಂಧನ ಮತ್ತು ಅಬಕಾರಿ ಖಾತೆಗಳನ್ನೇ ಅವರಿಗೆ ಮುಖ್ಯಮಂತ್ರಿ ಸ್ಟಾಲಿನ್‌ ಹಂಚಿಕೆ ಮಾಡಿದ್ದಾರೆ. ರಾಜೇಂದ್ರನ್‌ ಅವರಿಗೆ ಪ್ರವಾಸೋದ್ಯಮ, ಚೆಝಿಯಾನ್‌ ಅವರಿಗೆ ಉನ್ನತ ಶಿಕ್ಷಣ, ನಾಸರ್‌ ಅವರಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಖಾತೆಗಳನ್ನು ವಹಿಸಲಾಗಿದೆ.

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಉಪ ಮುಖ್ಯಮಂತ್ರಿಯಾಗಿ ಶನಿವಾರ ರಾತ್ರಿ ಬಡ್ತಿ ಪಡೆದ ಉದಯನಿಧಿ ಸ್ಟಾಲಿನ್‌ ಮತ್ತು ಇತರ ಕೆಲ ಸಚಿವರು ಸಮಾರಂಭದಲ್ಲಿ ಹಾಜರಿದ್ದರು.

ಸಂಪುಟದಿಂದ ಮೂವರು ಹೊರಕ್ಕೆ: ಟಿ. ಮನೋ ತಂಗರಜ್‌, ಕೆ.ಎಸ್‌.ಮಸ್ತಾನ್‌ ಮತ್ತು ಕೆ. ರಾಮಚಂದ್ರನ್‌ ಅವರನ್ನು ಶನಿವಾರ ಸಚಿವ ಸ್ಥಾನದಿಂದ ಕೈಬಿಟ್ಟ ಸ್ಟಾಲಿನ್‌, ಸೆಂಥಿಲ್‌ ಸೇರಿ ನಾಲ್ವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಶಿಫಾರಸು ಮಾಡಿದ್ದರು.

ನೌಕರಿಗಾಗಿ ಹಣ ಹಗರಣದ ಜೊತೆ ನಂಟು ಹೊಂದಿದ್ದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಸೆಂಥಿಲ್‌ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಕಳೆದ ವರ್ಷ ಜೂನ್‌ 14ರಂದು ಬಂಧಿಸಿತ್ತು.

‘ದೊಡ್ಡ ಜವಾಬ್ದಾರಿ’: ಉಪ ಮುಖ್ಯಮಂತ್ರಿಯಾಗಿ ಬಡ್ತಿ ಪಡೆದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಉದಯನಿಧಿ, ‘ಇದು ಖಾತೆಯಲ್ಲ, ದೊಡ್ಡ ಜವಾಬ್ದಾರಿ. ರಾಜ್ಯ ಮತ್ತು ಪಕ್ಷಕ್ಕಾಗಿ ಕಟಿಬದ್ದವಾಗಿ ದುಡಿಯುವುದನ್ನು ಮುಂದುವರಿಸುತ್ತೇನೆ’ ಎಂದರು.

ಕುಟುಂಬ ರಾಜಕಾರಣದ ಕುರಿತು ವಿರೋಧಪಕ್ಷಗಳು ಮಾಡುತ್ತಿರುವ ಟೀಕೆಯ ಬಗ್ಗೆ ಕೇಳಿದ ಪ್ರಶ್ನೆಗೆ, ‘ನನ್ನ ಬಡ್ತಿ ಕುರಿತು ವಿವಿಧ ವಲಯಗಳಿಂದ ಬರುವ ಶುಭಾಶಯಗಳ ಜತೆಗೆ ಟೀಕೆಗಳನ್ನೂ ನಾನು ಸ್ವೀಕರಿಸುತ್ತೇನೆ’ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT