ನವದೆಹಲಿ: ‘ಭಾರತ ಅಧ್ಯಕ್ಷ ಸ್ಥಾನದಲ್ಲಿರುವ ಜಿ–20 ಸಂಘಟನೆಯು ಜಾಗತಿಕವಾಗಿ ಸಹಕಾರ ವೃದ್ಧಿಗೆ ಹಾಗೂ ಒಡಕುಗಳನ್ನು ತೊಡೆದುಹಾಕಲು ಶ್ರಮಿಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
‘ಭಾರತವು ಜಿ–20 ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವುದು ಜನಾಂದೋಲನವೇ ಆಗಿದೆ. ದೇಶ–ದೇಶಗಳ ನಡುವಿನ ಗೋಡೆಗಳ ನಿವಾರಣೆ, ವಿಶ್ವದೆಲ್ಲೆಡೆ ಶಾಂತಿ ಸ್ಥಾಪನೆಯನ್ನು ಖಾತ್ರಿಪಡಿಸುವುದೇ ಈ ಹೊಣೆಗಾರಿಕೆಯ ಉದ್ದೇಶವಾಗಿದೆ’ ಎಂದು ಮೋದಿ ಪ್ರತಿಪಾದಿಸಿದ್ದಾರೆ.
ಮೋದಿ ಅವರು ಬರೆದಿರುವ ಲೇಖನ ವಿವಿಧ ದಿನಪತ್ರಿಕೆಗಳಲ್ಲಿ ಗುರುವಾರ ಪ್ರಕಟವಾಗಿದ್ದು, ಜಿ–20 ಅಧ್ಯಕ್ಷ ಸ್ಥಾನ ಸೇರಿದಂತೆ ಹಲವಾರು ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
‘ಜನವರಿಯಲ್ಲಿ ವರ್ಚುವಲ್ ಆಗಿ ಆಯೋಜಿಸಲಾಗಿದ್ದ ‘ವಾಯ್ಸ್ ಆಫ್ ಗ್ಲೋಬಲ್ ಸೌತ್ ಸಮಿಟ್’ನಲ್ಲಿ 125 ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಜಿ–20 ಅಧ್ಯಕ್ಷ ಸ್ಥಾನದಲ್ಲಿದ್ದುಕೊಂಡು ಭಾರತ ಕೈಗೊಂಡಿದ್ದ ಪ್ರಮುಖವಾದ ಉಪಕ್ರಮ ಅದಾಗಿತ್ತು’ ಎಂದು ಮೋದಿ ಹೇಳಿದ್ದಾರೆ.
‘ಭಾರತದ ಅಧ್ಯಕ್ಷತೆ ಅವಧಿಯಲ್ಲಿ ನಡೆದ ಸಭೆಗಳಲ್ಲಿ ಆಫ್ರಿಕಾದ ಹೆಚ್ಚು ದೇಶಗಳು ಪಾಲ್ಗೊಂಡಿರುವುದಲ್ಲದೇ, ಆಫ್ರಿಕಾ ರಾಷ್ಟ್ರಗಳನ್ನು ಜಿ–20 ಗುಂಪಿನ ಶಾಶ್ವತ ಸದಸ್ಯ ರಾಷ್ಟ್ರಗಳನ್ನಾಗಿ ಸೇರಿಸಿಕೊಳ್ಳುತ್ತಿರುವುದು ಭಾರತದ ಪ್ರಯತ್ನಕ್ಕೆ ಸಾಕ್ಷಿ’ ಎಂದು ಮೋದಿ ಅವರು ಲೇಖನದಲ್ಲಿ ವಿವರಿಸಿದ್ದಾರೆ.
‘ಜಿ–20 ಅಧ್ಯಕ್ಷ ಸ್ಥಾನ ಎಂಬುದು ಭಾರತದ ಪಾಲಿಗೆ ಉನ್ನತ ಮಟ್ಟದ ರಾಜತಾಂತ್ರಿಕ ಪ್ರಯತ್ನವಲ್ಲ. ಪ್ರಜಾಪ್ರಭುತ್ವದ ತಾಯಿಯಾಗಿ, ವೈವಿಧ್ಯಕ್ಕೆ ಮಾದರಿ ಎಂತಿರುವ ಭಾರತಕ್ಕೆ, ತನ್ನ ಈ ಅನುಭವವನ್ನು ಜಗತ್ತಿನ ಮುಂದಿಡಲು ದೊರೆತಿರುವ ಅವಕಾಶವೂ ಆಗಿದೆ’ ಎಂದು ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.