ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಬಿಸಿಯಲ್ಲಿಂದು ಸುಧಾ ಮೂರ್ತಿ: ಸಾವಿರಾರು ಶೌಚಾಲಯ ನಿರ್ಮಾಣದ ಹಿಂದಿನ ಕತೆ ಬಹಿರಂಗ

Last Updated 29 ನವೆಂಬರ್ 2019, 4:47 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ಮೇರು ನಟ ಅಮಿತಾಬ್‌ ಬಚ್ಚನ್‌ ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮ ಕೌನ್‌ ಬನೇಗ ಕರೋಡ್‌ ಪತಿ, ‘ಕರ್ಮವೀರ’ ವಿಶೇಷ ಆವೃತ್ತಿಕೊನೇ ಹಂತ ತಲುಪಿದೆ. ಈ ಆವೃತ್ತಿಯ ಕೊನೆಯ ಸಂಚಿಕೆಯನ್ನುಸಾಧಕ ಮಹಿಳೆಗೆ ಮೀಸಲಿಡಲಾಗಿದೆ.

ಕರ್ಮವೀರ ವಿಶೇಷ ಅವೃತ್ತಿಯಲ್ಲಿ ಈವರೆಗೆ ವಿವಿಧ ರಂಗದ ಹಲವು ಸಾಧಕರು ಹಾಟ್‌ ಸೀಟ್‌ನಲ್ಲಿ ಅಮಿತಾಬ್‌ಗೆ ಮುಖಾಮುಖಿಯಾಗಿದ್ದರು. ಕೊನೆಯ ಸಂಚಿಕೆಯಲ್ಲಿಇನ್ಫೋಸಿಸ್‌ಸಂಸ್ಥಾಪಕಿ, ಕನ್ನಡತಿ ಸುಧಾ ಮೂರ್ತಿ ಅವರು ಅಮಿತಾಬ್‌ರ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ.

ಸುಧಾ ಮೂರ್ತಿ ಅವರು ಚಿತ್ರೀಕರಣದಲ್ಲಿಪಾಲ್ಗೊಂಡ ಫೋಟೊಗಳುಈಗಾಗಲೇ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ಸ್ವತಃ ಅಮಿತಾಬ್‌ ಬಚ್ಚನ್‌ ಅವರೇ ಸುಧಾ ಮೂರ್ತಿ ಕಾಲಿಗೆರೆಗಿರುವ ಚಿತ್ರಗಳು ಮೆಚ್ಚುಗೆಗೆ ಪಾತ್ರವಾಗಿವೆ.ಸುಧಾ ಮೂರ್ತಿ ಪಾಲ್ಗೊಂಡಿರುವ ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮ ಸೋನಿ ಚಾನೆಲ್‌ನಲ್ಲಿಇದೇಶುಕ್ರವಾರ (ನ.29) ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

ಏನು ಹೇಳಿದ್ದಾರೆ ಸುಧಾ ಮೂರ್ತಿ?

ಅಮಿತಾಬ್ ಅವರೊಂದಿಗೆ ಸುಧಾ ಮೂರ್ತಿ ಆಡಿರುವ ಮಾತುಗಳ ಕನ್ನಡ ರೂಪ ಇಲ್ಲಿದೆ...

‘1968ರಲ್ಲಿ ನಾನು ಎಂಜಿನಿಯರಿಂಗ್‌ ಓದಲು ನಿರ್ಧರಿಸಿದೆ.ನನ್ನ ತಂದೆ ವೈದ್ಯರಾಗಿದ್ದರು. ನನ್ನ ತಾಯಿ ವಿವಾಹಕ್ಕೂ ಮೊದಲು ಶಾಲಾ ಶಿಕ್ಷಕಿಯಾಗಿದ್ದವರು. ಎಂಜಿನಿಯರ್‌ ಆಗುವ ಉದ್ದೇಶದಿಂದ ನಾನು ವಿಜ್ಙಾನ ವಿಷಯ ಆಯ್ಕೆ ಮಾಡಿಕೊಂಡಿದ್ದೆ. ಆದರೆ, ನನ್ನಜ್ಜಿಗೆ ಇದು ಇಷ್ಟವಿರಲಿಲ್ಲ.

‘ನೀನೇನಾದರೂ ಹೆಚ್ಚು ಓದಿದರೆ ನಮ್ಮ ಸಮುದಾಯದಲ್ಲಿ ನಿನಗೆ ಸೂಕ್ತ ವರನನ್ನು ಹುಡುಕುವುದು ಕಷ್ಟವಾಗುತ್ತದೆಎನ್ನುತ್ತಿದ್ದರು. ನಾನು ಚೆನ್ನಾಗಿ ಮಾತಾಡುತ್ತಿಲ್ಲ, ಸಂವಹನ ಕೌಶಲವೂ ಉತ್ತಮವಾಗಿತ್ತು. ನಾನು ವೈದ್ಯೆಯಾಗಬೇಕು ಎಂದು ಇದೇ ಕಾರಣಕ್ಕೆ ನನ್ನ ತಂದೆ ಬಯಸಿದ್ದರು.ನನ್ನ ತಾಯಿಗೆ ನಾನು ಗಣಿತದ ಪ್ರಾಧ್ಯಾಪಕಿ ಆಗಬೇಕು ಎನ್ನುವ ಇಚ್ಛೆ ಇತ್ತು.

‘ನನ್ನ ಭವಿಷ್ಯದ ಬಗ್ಗೆ ನಮ್ಮ ಕುಟುಂಬದಪ್ರತಿಯೊಬ್ಬರಿಗೂ ಅವರದ್ದೇ ಆದ ಕಲ್ಪನೆಗಳಿದ್ದವು. ನಾನು ಎಂಜಿನಿಯರಿಂಗ್‌ ಆಯ್ಕೆ ಮಾಡಿಕೊಳ್ಳಬೇಕು ಎಂದಾಗ ಕೆಲವರು ಆಶ್ಚರ್ಯವನ್ನೂ ವ್ಯಕ್ತಪಡಿಸಿದ್ದರು. ಈ ವೃತ್ತಿ ಗಂಡು ಮಕ್ಕಳಿಗೆ ಸೀಮಿತ ಎಂಬುದು ಅವರ ಭಾವನೆಯಾಗಿತ್ತು. ಆದರೆ, ಎಂಜಿನಿಯರ್ ಆಗಲೇಬೇಕೆಂದು ನಾನು ಗಟ್ಟಿ ನಿರ್ಧಾರ ಮಾಡಿದ್ದೆ.

‘ಎಂಜಿನಿಯರಿಂಗ್‌ ಓದಲೆಂದು ನಾನು ಅರ್ಜಿ ಹಾಕಿದ್ದ ಕಾಲೇಜಿನ ಒಟ್ಟಾರೆ ವಿದ್ಯಾರ್ಥಿಗಳ ಸಂಖ್ಯೆ 600. ಅದರಲ್ಲಿ 599 ಮಂದಿ ಗಂಡುಮಕ್ಕಳು. ನನ್ನ ಅಂಕಗಳನ್ನು ನೋಡಿ ಕಾಲೇಜಿಗೆ ಸೇರಿಸಿಕೊಂಡ ಪ್ರಿನ್ಸಿಪಾಲರು ನನ್ನೆದುರು ಮೂರು ಷರತ್ತುಗಳನ್ನಿಟ್ಟಿದ್ದರು.

‘ಎಂಜಿನಿಯರಿಂಗ್‌ ಕೋರ್ಸ್‌ ಪೂರ್ಣಗೊಳ್ಳುವ ವರೆಗೆ ನಾನು ಸೀರೆ ಉಟ್ಟೇ ಕಾಲೇಜಿಗೆ ಬರಬೇಕು. ಕಾಲೇಜು ಕ್ಯಾಂಟೀನ್‌ಗೆ ನಾನು ಹೋಗಬಾರದು ಮತ್ತು ಕಾಲೇಜಿನ ಗಂಡು ಮಕ್ಕಳೊಂದಿಗೆ ಮಾತನಾಡಬಾರದು.

‘ಸೀರೆ ಉಟ್ಟು ಕಾಲೇಜಿಗೆ ಹೊಗುವುದು ನನಗೆ ಸಮಸ್ಯೆ ಅನ್ನಿಸಲಿಲ್ಲ.ಕ್ಯಾಂಟೀನ್‌ ಅಷ್ಟು ಚೆನ್ನಾಗಿರಲಿಲ್ಲ. ಹೀಗಾಗಿ ಅಲ್ಲಿಗೆ ಹೋಗಬಾರುದು ಎನ್ನುವ ಷರತ್ತಿನ ಪಾಲನೆಯೂ ಸಮಸ್ಯೆಯಾಗಿರಲಿಲ್ಲ.ಗಂಡು ಮಕ್ಕಳನ್ನು ಮಾತನಾಡಿಸಬಾರದು ಎಂಬ ಷರತ್ತನ್ನು ನಾನು ಅತ್ಯಂತ ಶಿಸ್ತಿನಿಂದ, ಎಚ್ಚರಿಕೆಯಿಂದ ಪಾಲಿಸಿದ್ದೆ. ಒಂದು ವರ್ಷ ನಾನು ಯಾರ ಬಳಿಯೂ ಮಾತನಾಡಿರಲಿಲ್ಲ. ಆದರೆ ಮೊದಲ ವರ್ಷದಲ್ಲಿ ನಾನು ಹೆಚ್ಚು ಅಂಕ ಪಡೆದು ಪಾಸಾದಾಗ ಎಲ್ಲ ಹುಡುಗರೂ ನನ್ನನ್ನು ಮಾತನಾಡಿಸಲು ಪ್ರಯತ್ನಿಸಿದರು. ನನ್ನನ್ನು ನೋಡಿ ಮುಗುಳ್ನಗುತ್ತಿದ್ದರು.

ಇದೆಲ್ಲದರ ಮಧ್ಯೆ ನನಗೆ ಕಾಲೇಜಿನಲ್ಲಿ ಬಹಳ ಕಷ್ಟವಾಗುತ್ತಿದ್ದದ್ದು ಶೌಚಾಲಯದ ಸಮಸ್ಯೆ. ಅಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯವೇ ಇರಲಿಲ್ಲ. ಆದರೆ, ಈ ಬಗ್ಗೆ ನಾನು ಮಾತನಾಡುವಂತೆ ಇರಲಿಲ್ಲ. ಮಾತನಾಡಿದರೆ ನನ್ನನ್ನು ಕಾಲೇಜಿನಿಂದ ಬಿಡುಸುತ್ತಿದ್ದರು. ನಾನು ಎಂಜಿನಿಯರಿಂಗ್‌ ಮಾಡುವುದು ಯಾರಿಗೂ ಇಷ್ಟವಿರಲ್ಲ. ಹೀಗಾಗಿ ನನಗೆ ನಾನೇ‘ಸಹಿಸಿಕೋ’ ಹೇಳಿಕೊಳ್ಳುತ್ತಿದ್ದೆ.

‘ಬೆಳಿಗ್ಗೆ 7 ಗಂಟೆಗೆ, 2 ಕಿ.ಮೀ ನಡೆದುಕೊಂಡು ಬಂದು ಕಾಲೇಜು ಸೇರಿಕೊಂಡರೆ ಅಲ್ಲಿಂದ ಹೊರ ಬರುತ್ತಿದ್ದದ್ದೇ 11 ಗಂಟೆಗೆ. ಅಲ್ಲಿಂದ ಮತ್ತೆ 2 ಕಿ.ಮೀ ನಡೆದು ಬಂದು ಮನೆ ತಲುಪಿದ ನಂತರವೇ ಶೌಚಾಲಯ ಬಳಸುತ್ತಿದ್ದೆ. ಸ್ವಚ್ಛ ಶೌಚಾಲಯ ಮಹಿಳೆಗೆ ಎಷ್ಟು ಅನಿವಾರ್ಯ ಎಂಬುದು ನನಗೆ ಅರಿವಾಗಿದ್ದೇ ಆಗ. ಹೆಣ್ಣೊಬ್ಬಳ ಕಷ್ಟ ಹೆಣ್ಣಿಗೆ ಮಾತ್ರವೇ ಅರ್ಥವಾಗುತ್ತದೆ. ಇದೇ ಕಾರಣಕ್ಕೆ ನಾನು ಇನ್ಫೋಸಿಸ್‌ ಮುಖ್ಯಸ್ಥೆಯಾದಾಗ ವಿವಿಧ ರಾಜ್ಯಗಳಲ್ಲಿ 16 ಸಾವಿರ ಶೌಚಾಲಯಗಳನ್ನು ಕಟ್ಟಿಸಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT