ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್‌ನಿಂದ ಸುಧಾರನ್ನು ಹೊರಗಿಟ್ಟು ತಪ್ಪು ಮಾಡಿದೆ; ನಾರಾಯಣಮೂರ್ತಿ ಮನದಾಳ

Published 5 ಜನವರಿ 2024, 14:28 IST
Last Updated 5 ಜನವರಿ 2024, 14:28 IST
ಅಕ್ಷರ ಗಾತ್ರ

ನವದೆಹಲಿ: ‘ನನಗಿಂತ ಸುಧಾ ಹೆಚ್ಚು ಓದಿದ್ದರು. ಇನ್ಫೊಸಿಸ್‌ ಸಂಸ್ಥಾಪಕರಾದ ಆರು ಜನರಲ್ಲಿ ಒಬ್ಬರಾಗಿದ್ದರು. ಹೀಗಿದ್ದರೂ ಅವರನ್ನು ಕಂಪನಿಯಿಂದ ಹೊರಗಿಟ್ಟಿದ್ದು ದೊಡ್ಡ ತಪ್ಪು’ ಎಂದು ಕಂಪನಿ ಸಂಸ್ಥಾಪಕ ಹಾಗೂ ಸುಧಾಮೂರ್ತಿ ಅವರ ಪತಿ ಎನ್.ಆರ್.ನಾರಾಯಣಮೂರ್ತಿ ಹೇಳಿದ್ದಾರೆ.

ಸಿಎನ್‌ಬಿಸಿ–ಟಿವಿ18ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮನದಾಳವನ್ನು ಹಂಚಿಕೊಂಡಿರುವ ಅವರು, ‘ಕುಟುಂಬವನ್ನು ಕಂಪನಿಯೊಳಗೆ ತರಬಾರದು ಎಂಬ ತಪ್ಪು ಆದರ್ಶವನ್ನು ನಂಬಿದ್ದ ನನ್ನಿಂದ ಇದೊಂದು ತಪ್ಪು ಆಗಿದೆ’ ಎಂದಿದ್ದಾರೆ.

‘ಕಾರ್ಪೊರೇಟ್‌ ಜಗತ್ತಿನ ಅತ್ಯುತ್ತಮ ಪದ್ಧತಿ ಎಂದರೆ ಕುಟುಂಬವನ್ನು ಕಂಪನಿಯೊಳಗೆ ತಾರದಿರುವುದು ಎಂದು ನಾನು ನಂಬಿದ್ದೆ. ಆ ಕಾಲದಲ್ಲಿ ಮಕ್ಕಳು ಕಂಪನಿಗಳನ್ನು ನಡೆಸಲು ಬರುತ್ತಿದ್ದುದನ್ನು ನಾನು ನೋಡಿದ್ದೆ. ಅವರಿಂದ ಬಹಳಷ್ಟು ಕಾನೂನುಗಳ ಉಲ್ಲಂಘನೆಯಾಗುತ್ತಿದ್ದವು. ಆದರೆ ಇತ್ತೀಚೆಗೆ ಕೆಲ ವರ್ಷಗಳ ಹಿಂದೆ ನನ್ನ ನಿರ್ಧಾರದ ಕುರಿತು ಕೆಲ ತತ್ವಜ್ಞಾನದ ಪ್ರಾಧ್ಯಾಪಕರೊಂದಿಗೆ ಚರ್ಚಿಸಿದೆ. ನನ್ನ ನಿರ್ಧಾರವೇ ತಪ್ಪು ಎಂದು ಅವರು ಹೇಳಿದರು’ ಎಂದಿದ್ದಾರೆ.

‘ಕುಟುಂಬದಲ್ಲಿ ಪತ್ನಿ, ಪುತ್ರ ಅಥವಾ ಪುತ್ರಿ ವ್ಯವಹಾರ ನಡೆಸುವಷ್ಟು ಸಮರ್ಥರಿದ್ದರೆ, ಚೌಕಟ್ಟಿನೊಳಗೆ ಉತ್ತಮವಾಗಿ ಕಾರ್ಯನಿರ್ವಹಿಸುವವರಾದರೆ ಅಂಥವರನ್ನು ತಡೆಯುವ ಯಾವುದೇ ಹಕ್ಕು ನಿಮಗಿಲ್ಲ. ಒಂದೊಮ್ಮೆ ಹಾಗೆ ಮಾಡಿದ್ದೇ ಆದರೆ ನಿಮ್ಮದೇ ಹಕ್ಕುಗಳನ್ನು ನೀವು ಕಸಿದುಕೊಂಡಂತೆ ಎಂದು ಹೇಳಿದ್ದನ್ನು’ ಅವರು ನೆನಪಿಸಿಕೊಂಡಿದ್ದಾರೆ.

‘ಲೇಖಕಿ ಸುಧಾ ಮೂರ್ತಿ ಅವರು ಇನ್ಫೊಸಿಸ್‌ ಕಂಪನಿ ಆರಂಭಿಸಲು ಅಗತ್ಯವಿದ್ದ ಹೂಡಿಕೆಗಾಗಿ ₹10 ಸಾವಿರ ನೀಡಿದವರಲ್ಲಿ ಮೊದಲಿಗರು. ಆದರೆ ಅದೇ ₹10 ಸಾವಿರ ಶತಕೋಟಿ ಡಾಲರ್ ಆಗಲಿದೆ ಎಂದು ನಾನು ಆಗ ಊಹಿಸಿರಲಿಲ್ಲ’ ಎಂದು ನಾರಾಯಣಮೂರ್ತಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕೆಲಸ ಮಾಡುವ ಮನಸ್ಸಿತ್ತು, ಕುಟುಂಬ ನಿರ್ವಹಣೆಗಾಗಿ ಒಪ್ಪಿದೆ

ಪತಿಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುಧಾ ಮೂರ್ತಿ, ‘ಆ ಸಂದರ್ಭದಲ್ಲಿ ಅವರ (ನಾರಾಯಣಮೂರ್ತಿ) ನಿರ್ಧಾರ ಮೆದುಳಿಗೆ ಸರಿ ಎನಿಸಿದರೂ, ಹೃದಯ ಒಪ್ಪಿಕೊಳ್ಳಲಿಲ್ಲ. ನನಗೆ ಕೆಲಸ ಮಾಡುವ ಮನಸ್ಸಿತ್ತು. ಆದರೆ ಕುಟುಂಬದ ಹಿತದ ದೃಷ್ಟಿಯಿಂದ ನಾನೇ ಹಿಂದೆ ಸರಿಯಲು ನಿರ್ಧರಿಸಿದೆ’ ಎಂದಿದ್ದಾರೆ.

‘ನಾರಾಯಣಮೂರ್ತಿ ಅವರು ಆಗ ತಮ್ಮ ನಿರ್ಧಾರಕ್ಕೆ ಕಟಿಬದ್ಧರಾಗಿದ್ದರು. ನೀನು ಕಂಪನಿ ಸೇರುವುದೇ ಆದರೆ, ನಾನು ಹಿಂದೆ ಸರಿಯುತ್ತೇನೆ ಎಂದುಬಿಟ್ಟರು. ಅವರು ಒಮ್ಮೆ ನಿರ್ಧಾರ ತೆಗೆದುಕೊಂಡರೆ, ಅದು ಸರಿಯೋ ಅಥವಾ ತಪ್ಪೋ... ಅದರಿಂದ ಅವರು ಎಂದಿಗೂ ಹಿಂದೆ ಸರಿಯುವ ವ್ಯಕ್ತಿಯಲ್ಲ ಎಂಬ ಅವರ ವ್ಯಕ್ತಿತ್ವ ನನಗೆ ಗೊತ್ತಿತ್ತು’ ಎಂದಿದ್ದಾರೆ.

ರೈತರು, ಕಾರ್ಮಿಕರ ಪರಿಶ್ರಮ ವಿದ್ಯಾವಂತರಿಂದ ಆಗುತ್ತಿಲ್ಲ

ಇತ್ತೀಚೆಗೆ ತೀವ್ರ ಚರ್ಚೆಗೆ ಕಾರಣವಾದ ವಾರದಲ್ಲಿ 70 ಗಂಟೆ ದುಡಿಮೆ ಕುರಿತು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ನಾರಾಯಣಮೂರ್ತಿ, ‘ರೈತರು, ಕಾರ್ಖಾನೆ ಕಾರ್ಮಿಕರು ಹಾಗೂ ಭಾರತದಲ್ಲಿರುವ ಇತರ ದುಡಿಯುವ ವರ್ಗ ಅತ್ಯಂತ ಶ್ರಮಜೀವಿಗಳಾಗಿದ್ದಾರೆ. ಆದರೆ ಶಿಕ್ಷಣ ಪಡೆದ ದೇಶದ ವಿದ್ಯಾವಂತರೇ ಅಷ್ಟು ಶ್ರಮ ವಹಿಸುತ್ತಿಲ್ಲ’ ಎಂದಿದ್ದಾರೆ.

‘ರಿಯಾಯಿತಿಯೊಂದಿಗೆ ಶಿಕ್ಷಣ ಪಡೆದ ನಾವು ಸರ್ಕಾರದ ಸೌಕರ್ಯಗಳಿಗೆ ಧನ್ಯವಾದ ಹೇಳಬೇಕು. ಆದರೆ ಈ ಅದೃಷ್ಟ ಸಿಗದ ಬಹಳಷ್ಟು ಜನ ಅತ್ಯಂತ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ’ ಎಂದಿದ್ದಾರೆ.

‘70 ಗಂಟೆ ದುಡಿಮೆ ಕುರಿತ ನನ್ನ ಹೇಳಿಕೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಆದರೆ ಬಹಳಷ್ಟು ಉತ್ತಮರು ಹಾಗೂ ಅನಿವಾಸಿ ಭಾರತೀಯರು ಅದನ್ನು ಒಪ್ಪಿಕೊಂಡಿದ್ದಾರೆ’ ಎಂದು ನಾರಾಯಣಮೂರ್ತಿ ತಮ್ಮ ಅಂದಿನ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT