ಸಂಘರ್ಷಬಾಧಿತ ಇರಾನ್‌ನಿಂದ ವಿಶೇಷ ವಿಮಾನದಲ್ಲಿ ಗುರುವಾರ ನವದೆಹಲಿಗೆ ಬಂದಿಳಿದ ಭಾರತೀಯ ವಿದ್ಯಾರ್ಥಿಗಳು ಸಂಭ್ರಮಿಸಿದರು –ಪಿಟಿಐ ಚಿತ್ರ
ನವದೆಹಲಿ: ಸಂಘರ್ಷ ಬಾಧಿತ ಇರಾನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆದೊಯ್ಯಲು ಇರಾನ್ ಶುಕ್ರವಾರ ತನ್ನ ವಾಯುಗಡಿ ಮುಕ್ತಗೊಳಿಸಿತು. ‘ಆಪರೇಷನ್ ಸಿಂಧು’ ಅಡಿ 1,000 ವಿದ್ಯಾರ್ಥಿಗಳನ್ನು ಕರೆತರಲು ಇದು ಸಹಕಾರಿಯಾಯಿತು.
ಭಾರತೀಯ ವಿದ್ಯಾರ್ಥಿಗಳಿದ್ದ ವಿಶೇಷ ವಿಮಾನವು ಶುಕ್ರವಾರ ದೆಹಲಿಗೆ ಬಂದಿಳಿಯಿತು. ಇನ್ನೂ ಎರಡು ಹೆಚ್ಚುವರಿ ವಿಮಾನಗಳು ಶನಿವಾರ ಬರುವ ನಿರೀಕ್ಷೆಯಿದೆ.
ಇರಾನ್ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ಮೊಹಮ್ಮದ್ ಜಾವೇದ್ ಹೊಸೈನಿ ಅವರು, ಅಗತ್ಯವಿದ್ದರೆ ಹೆಚ್ಚಿನ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಬರುವ ದಿನಗಳಲ್ಲಿ ಇನ್ನಷ್ಟು ವಿಮಾನಗಳ ಸಂಚಾರ ಏರ್ಪಡಿಸಬಹುದು ಎಂದು ತಿಳಿಸಿದರು.
ಇಸ್ರೇಲ್ ದಾಳಿ ಹಿಂದೆಯೇ ಭಾರತೀಯ ವಿದ್ಯಾರ್ಥಿಗಳು ರಾಜಧಾನಿ ಟೆಹರಾನ್‌ನಿಂದ ಮಶದ್ ನಗರಕ್ಕೆ ತೆರಳಿದ್ದರು. ಇರಾನ್‌ನ ‘ಮಹನ್’ ಸಂಸ್ಥೆ ವಿಮಾನಗಳ ಸಂಚಾರ ಏರ್ಪಡಿಸಿತ್ತು.
ಸಂಘರ್ಷ ಪೀಡಿತ ದೇಶಗಳಿಂದ ತನ್ನ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ ‘ಆಪರೇಷನ್ ಸಿಂಧು’ ಯೋಜನೆ ಆರಂಬಿಸಿದೆ. ವಿದ್ಯಾರ್ಥಿಗಳ ನಿರ್ಗಮನಕ್ಕೆ ಇರಾನ್‌ನಲ್ಲಿನ ಭಾರತೀಯ ರಾಯಭಾರಿ ಕಚೇರಿ ನೆರವಾಗಿದೆ.
ಭಾರತೀಯ ಪ್ರಜೆಗಳ ರಕ್ಷಣೆ ಮತ್ತು ಅವರ ಸುರಕ್ಷಿತ ಸಂಚಾರಕ್ಕೆ ಭಾರತ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಕ್ಷಿಪಣಿ ದಾಳಿಯಿಂದಾಗಿ ಇರಾನ್‌ನ ತನ್ನ ವಾಯುಗಡಿ ಮುಚ್ಚಿದ್ದರೂ ಭಾರತೀಯ ಪ್ರಜೆಗಳ ಸಂಚಾರಕ್ಕಾಗಿ ಮುಕ್ತಗೊಳಿಸಿದೆವು ಎಂದು ಹೊಸೈನಿ ಅವರು ಪ್ರತಿಕ್ರಿಯಿಸಿದರು.
ಗುರುವಾರ ಸುಮಾರು 110 ವಿದ್ಯಾರ್ಥಿಗಳನ್ನು ಕರೆತರಲಾಗಿತ್ತು. ಇರಾನ್‌ನಲ್ಲಿ ಸುಮಾರು 10 ಸಾವಿರ ಭಾರತೀಯರು ಇದ್ದಾರೆ. ದೇಶ ಬಿಟ್ಟು ಹೋಗಲು ಬಯಸುವವರಿಗೆ ಸುರಕ್ಷಿತವಾಗಿ ತೆರಳಲು ಅನುವು ಮಾಡಿಕೊಡಲಾಗುತ್ತಿದೆ ಎಂದು ಹೊಸೈನಿ ತಿಳಿಸಿದರು.
ಭಾರತೀಯ ಪ್ರಜೆಗಳು ಟೆಹರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಜೊತೆಗೆ ಸಂಪರ್ಕದಲ್ಲಿರಬೇಕು. ಜನರಿಗೆ ನೆರವಾಗಲು ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿ ತೆರೆಯಲಾಗಿದೆ ಎಂದು ವಿದೇಶಾಂಗ ಸಚಿವಾಲಯವು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.