ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲಾ ಆರಾಧಕನಾಗಿದ್ದ ಮನು: ವಿವಾದ ಸೃಷ್ಟಿಸಿದ ಮೌಲಾನಾ ಅರ್ಷದ್‌

Last Updated 13 ಫೆಬ್ರುವರಿ 2023, 6:19 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಓಂ’ ಮತ್ತು ‘ಅಲ್ಲಾ’ ಒಂದೇ. ಈ ದೇವರನ್ನು ಮನು ಆರಾಧಿಸುತ್ತಿದ್ದ’ ಎಂದು ಜಮಿಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ ಅವರು ಭಾನುವಾರ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜೈನ ಧರ್ಮ ಗುರುವೊಬ್ಬರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವೇದಿಕೆಯಿಂದ ಕೆಳಗಿಳಿದಿದ್ದಾರೆ. ಅವರ ಜೊತೆಗೆ ಇತರ ಧಾರ್ಮಿಕ ಮುಖಂಡರೂ ವೇದಿಕೆ ತೊರೆದಿದ್ದಾರೆ.

ರಾಮ್‌ಲೀಲಾ ಮೈದಾನದಲ್ಲಿ ಜಮಿಯತ್‌ನ 34ನೇ ಸಾಮಾನ್ಯ ಅಧಿವೇಶದ ಅಂತಿಮ ದಿನವಾದ ಭಾನುವಾರ ಮಾತನಾಡಿದ ಅರ್ಷದ್‌, ‘ಶ್ರೀ ರಾಮ, ಬ್ರಹ್ಮ, ಶಿವ ಹೀಗೆ ಯಾವ ದೇವರೂ ಇಲ್ಲದಿದ್ದಾಗ ಯಾರನ್ನು ಆರಾಧಿಸಲಾಗುತ್ತಿತ್ತು ಎಂದು ಧರ್ಮಗುರುಗಳನ್ನು ಕೇಳಿದೆ. ಆಗ ಕೆಲವರು ಶಿವನನ್ನು ಮನು ಪೂಜಿಸುತ್ತಿದ್ದ ಎಂದರೆ, ಇನ್ನು ಕೆಲವರು ಜಗತ್ತಿನಲ್ಲಿ ಏನೂ ಇಲ್ಲ, ಮನು ‘ಓಂ’ನ ಆರಾಧಕನಾಗಿದ್ದ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ’ ಎಂದು ತಿಳಿಸಿದ್ದಾರೆ.

‘ಓಂ ಎಂದರೆ ಯಾರು ಎಂದು ಕೇಳಿದೆ. ಅದು ಕೇವಲ ಗಾಳಿ. ಅದಕ್ಕೆ ರೂಪವಿಲ್ಲ, ಬಣ್ಣವಿಲ್ಲ ಮತ್ತು ಅದು ಎಲ್ಲೆಡೆ ಇದೆ. ಅದು ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸಿದೆ ಎಂದು ಕೆಲವರು ಹೇಳಿದರು. ನಾವು ಇದನ್ನು ‘ಅಲ್ಲಾ’ ಎಂದು ಕರೆಯುತ್ತೇವೆ, ನೀವು ಈಶ್ವರ ಎಂದು ಕರೆಯುತ್ತೀರಿ. ಪರ್ಷಿಯನ್‌ ಮಾತನಾಡುವವರು ‘ಖುದಾ’ ಎಂದು ಕರೆಯುತ್ತಾರೆ ಮತ್ತು ಇಂಗ್ಲಿಷ್ ಭಾಷಿಗರು ದೇವರೆಂದು ಸಂಭೋದಿಸುತ್ತಾರೆ. ಇದರರ್ಥ ಮನು ಅಂದರೆ ಆದಮ್‌. ಇಬ್ಬರೂ ಓಂ ಅನ್ನು ಆರಾಧಿಸುತ್ತಿದ್ದರು. ಅಂದರೆ ಅದು ಅಲ್ಲಾ’ ಎಂದಿದ್ದಾರೆ.

ಅರ್ಷದ್ ಮದನಿಯವರ ಹೇಳಿಕೆಗೆ ಜೈನ ಸನ್ಯಾಸಿ ಆಚಾರ್ಯ ಲೋಕೇಶ್ ಮುನಿ ಅವರು ಖಂಡಿಸಿದ್ದಾರೆ. ಅರ್ಷದ್‌ ಅವರು ಏಕತೆಯ ಬಗ್ಗೆ ಮಾತನಾಡುವುದನ್ನು ಬಿಟ್ಟು ‘ಮನು ಮತ್ತು ಅಲ್ಲಾ’ ಕುರಿತ ಕಥೆಯನ್ನು ತಿರುಚುತ್ತಿದ್ದಾರೆ ಎಂದು ಆರೋಪಿಸಿ ಅಧಿವೇಶನದಿಂದ ಹೊರನಡೆದಿದ್ದಾರೆ.

‘ನಾವು ಸಾಮರಸ್ಯದಿಂದ ಬದುಕುವುದನ್ನು ಮಾತ್ರ ಒಪ್ಪುತ್ತೇವೆ, ಆದರೆ ಓಂ, ಅಲ್ಲಾ ಮತ್ತು ಮನುಗೆ ಸಂಬಂಧಿಸಿದ ಈ ಎಲ್ಲಾ ಕಥೆಗಳು ಆಧಾರರಹಿತವಾಗಿವೆ. ಅರ್ಷದ್‌ ಅವರು ಅಧಿವೇಶನದ ಪರಿಸರವನ್ನು ಸಂಪೂರ್ಣವಾಗಿ ಹಾಳು ಮಾಡಿದರು. ಅವರು ಹೇಳಿದ ಕಥೆಗಳಿಗಿಂತ ದೊಡ್ಡ ಕಥೆಗಳನ್ನು ನಾನು ಹೇಳಬಲ್ಲೆ. ನನ್ನೊಂದಿಗೆ ಚರ್ಚೆಗೆ ಬರುವಂತೆ ಅವರನ್ನು ವಿನಂತಿಸುತ್ತೇನೆ. ಅಗತ್ಯವಿದ್ದರೆ ಸಹರನ್‌ಪುರದಲ್ಲಿ ಅವರನ್ನು ಭೇಟಿಯಾಗಲು ನಾನು ಸಿದ್ಧನಿದ್ದೇನೆ’ ಎಂದು ಲೋಕೇಶ್ ಮುನಿ ಹೇಳಿದ್ದಾರೆ.

ಜಮಿಯತ್‌ನ ಕಾರ್ಯಕ್ರಮಗಳು ಮತ್ತು ಅಧಿವೇಶನಗಳಿಗೆ ಹಲವಾರು ಧರ್ಮಗಳ ಧಾರ್ಮಿಕ ಮುಖಂಡರನ್ನು ಆಗಾಗ್ಗೆ ಆಹ್ವಾನಿಸಲಾಗುತ್ತದೆ. ಆಚಾರ್ಯ ಲೋಕೇಶ್ ಮುನಿ ಅವರು ಜಮಿಯತ್‌ ಆಯೋಜಿಸಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ಈ ಹಿಂದೆಯೂ ಭಾಗವಹಿಸಿದ್ದರು.

ಜಮಿಯತ್‌ನ ಮತ್ತೊಂದು ಬಣದ ಮುಖ್ಯಸ್ಥ ಮಹಮೂದ್ ಮದನಿ, ‘ಭಾರತವು ಇಸ್ಲಾಂನ ಜನ್ಮಸ್ಥಳ’ ಮತ್ತು ದೇಶದ ಅತ್ಯಂತ ಹಳೆಯ ಧರ್ಮ ಎಂದು ಹೇಳುವ ಮೂಲಕ ಶುಕ್ರವಾರ ಗದ್ದಲ ಹುಟ್ಟುಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT