ರಾಂಚಿ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಅವರು ಶುಕ್ರವಾರ ಬಿಜೆಪಿಗೆ ಸೇರ್ಪಡೆಯಾದರು. ಜೆಎಂಎಂ ಪಕ್ಷದ ಈಗಿನ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಅವರು ಎರಡು ದಿನಗಳ ಹಿಂದಷ್ಟೇ ಪಕ್ಷ ತೊರೆದಿದ್ದರು.
ತಮ್ಮ ದೊಡ್ಡ ಸಂಖ್ಯೆಯ ಬೆಂಬಲಿಗರೊಂದಿಗೆ ಅವರು ಬಿಜೆಪಿ ಸೇರಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಇದ್ದರು.
‘ದೆಹಲಿ ಹಾಗೂ ಕೋಲ್ಕತ್ತದಲ್ಲಿ ನನ್ನ ವಿರುದ್ಧ ಕಣ್ಗಾವಲು ಹೆಚ್ಚಾದ ಬಳಿಕ ಬಿಜೆಪಿ ಸೇರುವ ನನ್ನ ಸಂಕಲ್ಪ ಬಲಗೊಂಡಿತು. ಬುಡಕಟ್ಟು ಜನರ ಗುರುತನ್ನು ರಕ್ಷಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ. ಬುಡಕಟ್ಟು ಜನಾಂಗದ ಗುರುತನ್ನು ಕಾಂಗ್ರೆಸ್ ಪಣಕ್ಕಿಟ್ಟಿದೆ. ಜನರಿಗೆ ನ್ಯಾಯ ಒದಗಿಸಲು ನಾನು ಬದ್ಧನಾಗಿದ್ದೇನೆ’ ಎಂದು ಹೇಳಿದ್ದಾರೆ.
‘ಜೆಎಂಎಂ ಅನ್ನು ನಾನು ನನ್ನ ಬೆವರು, ರಕ್ತ ಹರಿಸಿ ಕಟ್ಟಿದ್ದೆ. ಆದರೆ ನನಗೆ ಅವಮಾನ ಮಾಡಲಾಯಿತು. ಈಗ ನಾನು ಬಿಜೆಪಿ ಸೇರಿದ್ದೇನೆ. ವಿಶ್ವದ ಅತಿದೊಡ್ಡ ಪಕ್ಷವೊಂದರ ಭಾಗವಾಗುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ’ ಎಂದು ಹೇಳಿದ್ದಾರೆ.