ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯ ಪ್ರದೇಶ: ಹುಲ್ಲು ಮೇಯಿಸುವುದು, ಮದುವೆಗಳಲ್ಲಿ ವಾದ್ಯ ನುಡಿಸುವುದಕ್ಕೆ ತರಬೇತಿ

Last Updated 19 ಮಾರ್ಚ್ 2019, 2:34 IST
ಅಕ್ಷರ ಗಾತ್ರ

ಭೋಪಾಲ್: ಮಧ್ಯ ಪ್ರದೇಶದಲ್ಲಿ 15 ವರ್ಷಗಳ ನಂತರ ಗದ್ದುಗೆಗೇರಿರುವ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಹೊಸ ಯೋಜನೆ ಆರಂಭಿಸಿದೆ.ಮುಖ್ಯಮಂತ್ರಿ ಯುವ ಸ್ವಾಭಿಮಾನ್ ಯೋಜನೆಯಡಿಯಲ್ಲಿ ನಿರುದ್ಯೋಗಿಗಳಿಗೆ ತರಬೇತಿ ನೀಡುವ ಯೋಜನೆ ಇದಾಗಿದೆ.

ಈ ಯೋಜನೆಯಡಿಯಲ್ಲಿ 90 ದಿನಗಳ ಕೌಶಲ ಅಭಿವೃದ್ದಿ ತರಬೇತಿ ನೀಡಲಾಗುವುದು.ಇಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ಹಸುಗಳನ್ನು ಹುಲ್ಲು ಮೇಯಿಸುವ, ಬ್ಯೂಟಿ ಪಾರ್ಲರ್ ತರಬೇತಿ, ಮದುವೆಗಳಲ್ಲಿ ವಾದ್ಯ ನುಡಿಸುವುದು ಸೇರಿದಂತೆ ಒಟ್ಟು 43 ವಿಭಿನ್ನ ಕೆಲಸಗಳಿಗೆ ತರಬೇತಿ ನೀಡಲು ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಕಮಲ್ ನಾಥ್ ಅವರು, ಚಿಂದ್ವಾರಾದಲ್ಲಿ ನಾನು ಬ್ಯಾಂಡ್ ತರಬೇತಿ ಶಾಲೆಯನ್ನು ಆರಂಭಿಸಲು ಪ್ರಯತ್ನಿಸುತ್ತಿದ್ದೇನೆ. ಹಲವಾರು ಮದುವೆ ಕಾರ್ಯಕ್ರಮಗಳಲ್ಲಿ ಬ್ಯಾಂಡ್ ನುಡಿಸಲಾಗುತ್ತಿದೆ.ಈ ಬಗ್ಗೆ ತಿಳಿಯಲು ಜನರು ಉತ್ಸುಕರಾಗಿದ್ದಾರೆ. ದೇಶದೆಲ್ಲೆಡೆ ನಡೆಯುವ ಮದುವೆ ಮೆರವಣಿಗೆಗಳಲ್ಲಿ ನಮ್ಮ ರಾಜ್ಯದ ಬ್ಯಾಂಡ್ ಸೆಟ್‍ಗಳು ಇರಬೇಕು ಎಂದು ನಾನು ಬಯಸುತ್ತೇನೆ ಎಂದಿದ್ದಾರೆ.

ನಗರ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಯುವಕರಿಗೆ ಪ್ರತೀ ವರ್ಷ 100 ದಿನ ಖಚಿತ ನೌಕರಿ ನೀಡುವ ಯೋಜನೆ ಇದಾಗಿದೆ.100 ದಿನಗಳ ಅವಧಿಯಲ್ಲಿ ತಿಂಗಳಿಗೆ ₹4,000 ತರಬೇತಿ ಭತ್ಯೆ ನೀಡಲಾಗುವುದು.

ಆದಾಗ್ಯೂ, ಈ ತರಬೇತಿ ಬಗ್ಗೆ ಯುವಕರು ಗಲಿಬಿಲಿಗೊಂಡಿದ್ದಾರೆ,
ಈ ಯೋಜನೆಯಡಿಯಲ್ಲಿ ಡ್ರೈವಿಂಗ್ ಕಲಿಯುವುದಕ್ಕಾಗಿ ಅರ್ಜಿ ಸಲ್ಲಿಸಿದ್ದೆ ಅಂತಾರೆ ಅಗಾರ್ ಮಾಲ್ವಾ ಜಿಲ್ಲೆಯ 25ರ ಹರೆಯದ ಯುವಕ ವಿಕಾಸ್ ಗೋರೆ.ಆದರೆ ಸರ್ಕಾರದಿಂದ ಸಿಕ್ಕಿದ ಪ್ರತಿಕ್ರಿಯೆ ಟೈಲರಿಂಗ್ ಕೋರ್ಸ್ ಮಾಡಿ ಎಂಬುದಾಗಿತ್ತು.

ನಾನು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ್ದೆ. ಅದರಲ್ಲಿ ಆಫೀಸ್ ಅಸಿಸ್ಟೆಂಟ್, ಡ್ರೈವರ್ ಮತ್ತು ಆಟೋಮೊಬೈಲ್ ರಿಪೇರಿ ಹೀಗೆ ಮೂರು ವಿಷಯ ಆಯ್ಕೆ ಮಾಡಿದ್ದೆ. ಕೌಶಲ್ ವಿಕಾಸ್ ಕೇಂದ್ರ ಸಂಪರ್ಕಿಸಿ ಎಂಬ ಉತ್ತರ ಬಂತು. ಅಲ್ಲಿಗೆ ಹೋದರೆ ಅಲ್ಲಿ ಟೈಲರಿಂಗ್ ಮತ್ತು ಬ್ಯೂಟಿಷನ್ ಬಗ್ಗೆ ತರಬೇತಿ ಕೊಡುತ್ತಾರೆ.ಇದನ್ನು ಕಲಿತು ನಾನೇನು ಮಾಡಲಿ? ಎಂದು ವಿಕಾಸ್ ಹೇಳಿರುವುದಾಗಿ ಎನ್‍ಡಿಟಿವಿ ವರದಿ ಮಾಡಿದೆ.
ಸೀಮಾ ಮಲ್ವಿಯಾ ಅವರದ್ದು ಕೂಡಾ ಇದೇ ಕತೆ. ಕಾಂಟ್ರಾಕ್ಟ್ ಸೂಪರ್‌ವೈಸರ್ ಆಗಲು ತರಬೇತಿ ನೀಡಲಾಗುತ್ತಿದೆ ಎಂದು ನಾನು ಇಲ್ಲಿಗೆ ಬಂದೆ.ಆದರೆ ಅದನ್ನು ಕಲಿಸಲು ಇಲ್ಲಿ ತರಬೇತುದಾರರೇ ಇಲ್ಲ.ಈ ರೀತಿಯ ತರಬೇತಿ ನೀಡುವುದಕ್ಕೆ ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಬೇಕು ಅಂತಾರೆ ಸೀಮಾ.

ಅಗಾರ್ ಮಾಲ್ವಾದಲ್ಲಿರುವ ತರಬೇತಿ ಕೇಂದ್ರದ ಉಸ್ತುವಾರಿ ಹೊಂದಿರುವ ಮಮತಾ ಬಿಥೇರೇ ಅವರು ಇಲ್ಲಿ ನಿಸ್ಸಹಾಯಕರಾಗಿ ನಿಂತಿದ್ದಾರೆ.ಈ ಕೇಂದ್ರದಲ್ಲಿ ಟೈಲರಿಂಗ್ ಮತ್ತು ಬ್ಯೂಟಿಷನ್ ತರಬೇತಿ ಮಾತ್ರ ನೀಡಿಲಾಗುತ್ತದೆ.ಹಸುಗಳನ್ನು ಹುಲ್ಲು ಮೇಯಿಸುವ ಕೋರ್ಸ್ ಗಾಗಿ ಅರ್ಜಿ ಸಲ್ಲಿಸಿದವರೂ ಇಲ್ಲಿಗೆ ಬರುತ್ತಾರೆ, ಅವರಿಗೆ ನಾನು ಏನೆಂದು ಹೇಳಲಿ? ಎಂದು ಪ್ರಶ್ನಿಸುತ್ತಾರೆ.

ಇಲ್ಲಿಯವರೆಗೆ 98,701 ಯುವಕ/ಯುವತಿಯರ ಅರ್ಜಿ ಸ್ವೀಕೃತವಾಗಿದೆ.ಆದರೆ ಬ್ಯೂಟಿಷನ್ ಮತ್ತು ಟೈಲರಿಂಗ್ ಕೋರ್ಸ್ ಗಾಗಿ 32,000 ಸೀಟು ,ಹಾರ್ಡ್ ವೇರ್ ಕಲಿಕೆಗೆ 21,300 ಸೀಟು ಮತ್ತು ಡೇಟಾ ಎಂಟ್ರಿ ಕಲಿಕೆಗಾಗಿ 17,672 ಸೀಟುಗಳಷ್ಟೇ ಇವೆ.

ರಾಜ್ಯದಲ್ಲಿ ಉದ್ಯೋಗವಕಾಶ ಸೃಷ್ಟಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ, ನಿರುದ್ಯೋಗಿಗಳಿಗೆ ನೌಕರಿ ಸಿಗುವುದಕ್ಕಾಗಿ ತರಬೇತಿ ನೀಡುವುದರ ಜತೆಗೆ ಹೂಡಿಕೆಯನ್ನು ಆಕರ್ಷಿಸಲು ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಕಮಲ್ ನಾಥ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT