ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹ್ವಾನವಿಲ್ಲದೇ INDIA ಸಭೆಗೆ ಹಾಜರಾದ ಕಪಿಲ್ ಸಿಬಲ್: ಕೆ.ಸಿ ವೇಣುಗೋಪಾಲ್ ಗರಂ

ಕಳೆದ ವರ್ಷ ಕಾಂಗ್ರೆಸ್ ತೊರೆದಿರುವ ಕಪಿಲ್ ಸಿಬಲ್
Published 2 ಸೆಪ್ಟೆಂಬರ್ 2023, 11:13 IST
Last Updated 2 ಸೆಪ್ಟೆಂಬರ್ 2023, 11:13 IST
ಅಕ್ಷರ ಗಾತ್ರ

ಮುಂಬೈ: ಸೆ.1 ಶುಕ್ರವಾರ ಮುಂಬೈನಲ್ಲಿ ಇಂಡಿಯಾ ಒಕ್ಕೂಟದ ಮಹತ್ವದ ಮೂರನೇ ಸಭೆ ನಡೆಯಿತು. ಈ ಸಭೆಯಲ್ಲಿ ನಡೆದ ಆಶ್ಚರ್ಯಕರ ಘಟನೆಯೊಂದು ಚರ್ಚೆಗೆ ಗ್ರಾಸವಾಗಿದೆ.

ಕಳೆದ ವರ್ಷ ಕಾರಣಾಂತರಗಳಿಂದ ಕಾಂಗ್ರೆಸ್ ತೊರೆದಿರುವ ರಾಜ್ಯಸಭಾ ಸದಸ್ಯ, ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಆಹ್ವಾನವಿಲ್ಲದೇ ಇಂಡಿಯಾ ಸಭೆಗೆ ಹಾಜರಾಗಿದ್ದರು. ಇದರಿಂದ ಅನೇಕ ಕಾಂಗ್ರೆಸ್ ನಾಯಕರು ಮುಜುಗರಕ್ಕೊಳಗಾದರು ಎಂದು ತಿಳಿದು ಬಂದಿದೆ.

ಸಭೆಗೆ ಸಿಬಲ್ ಅವರ ಪ್ರವೇಶದಿಂದ ಕಸಿವಿಸಿಗೆ ಒಳಗಾದ ಕಾಂಗ್ರೆಸ್ ನಾಯಕ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು, ಸಭೆಯ ಉಸ್ತುವಾರಿಯಾಗಿದ್ದ ಉದ್ಧವ್ ಠಾಕ್ರೆಗೆ ದೂರು ನೀಡಿದರು.

ಆದರೆ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ ಕೆ.ಸಿ ವೇಣುಗೋಪಾಲ್ ಅವರಿಗೆ ಮನವಿ ಮಾಡಿ, ವಿರೋಧ ಪಕ್ಷಗಳ ಒಗ್ಗಟ್ಟಿನ ಹಿನ್ನೆಲೆಯಲ್ಲಿ ಇದನ್ನೆಲ್ಲ ದೊಡ್ಡದು ಮಾಡುವುದು ಬೇಡ ಎಂದು ಗಮನಕ್ಕೆ ತಂದರು ಎನ್ನಲಾಗಿದೆ.

ಇದೇ ವೇಳೆ ರಾಹುಲ್ ಗಾಂಧಿ ಕೂಡ ಸಿಬಲ್ ಪ್ರವೇಶದ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಬಳಿಕ ಇಂಡಿಯಾ ನಾಯಕರ ಗ್ರೂಪ್ ಫೋಟೊ ಸೆಷನ್ ಕಾರ್ಯಕ್ರಮದಲ್ಲೂ ಕಪಿಲ್ ಹಾಜರಾಗಿದ್ದು ಕಂಡು ಬಂದಿದೆ.

2022ರ ಮೇನಲ್ಲಿ ಕಪಿಲ್ ಸಿಬಲ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರು. ನಂತರ ಸಮಾಜವಾದಿ ಪಕ್ಷದ ಬಾಹ್ಯ ಬೆಂಬಲದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇಂಡಿಯಾ ಮೈತ್ರಿಕೂಟ ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಪಿಲ್ ಸಿಬಲ್ ಅವರ ಈ ನಡೆ ಕುತೂಹಲ ಮೂಡಿಸಿದೆ ಎಂದು ಚರ್ಚೆಯಾಗುತ್ತಿದೆ.

ಪಟ್ನಾ, ಬೆಂಗಳೂರು ನಂತರ ಮುಂಬೈನಲ್ಲಿ ಸಭೆ ಸೇರಿದ ಇಂಡಿಯಾ ಒಕ್ಕೂಟದ ನಾಯಕರು ಒಗ್ಗಟ್ಟು ‍ಪ್ರದರ್ಶಿಸಿದ್ದಾರೆ.

ಕಪಿಲ್ ಸಿಬಲ್ ಅವರು, ಶಿವಸೇನಾ ಬಣಗಳ ಕಿತ್ತಾಟದ ಪ್ರಕರಣದ ಬಗ್ಗೆ ಉದ್ಧವ್ ಠಾಕ್ರೆ ಪರವಾಗಿ ಸುಪ್ರಿಂಕೋರ್ಟ್‌ನಲ್ಲಿ ವಾದಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT