ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಪುರ್ತಲಾ ಗುರುದ್ವಾರ ಅಪವಿತ್ರಗೊಂಡಿಲ್ಲ ಎಂದ ಪಂಜಾಬ್ ಸಿಎಂ; ಉಸ್ತುವಾರಿ ಬಂಧನ

ಚಂಡೀಗಡ: ಕಪುರ್ತಲಾದ ಗುರುದ್ವಾರದಲ್ಲಿ ಅಪವಿತ್ರಗೊಳಿಸುವ ಘಟನೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಶುಕ್ರವಾರ ಪ್ರಕಟಿಸಿದ್ದಾರೆ. ಕಳೆದ ಭಾನುವಾರ ಗುರುದ್ವಾರದಲ್ಲಿ ಉದ್ರಿಕ್ತ ಗುಂಪಿನಿಂದ ಥಳಿತಕ್ಕೆ ಒಳಗಾಗಿ ಯುವಕ ಸಾವಿಗೀಡಾದ ಪ್ರಕರಣದಲ್ಲಿ ಗುರುದ್ವಾರದ ಉಸ್ತುವಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗುರುದ್ವಾರದಲ್ಲಿ ಯಾವುದೇ ಅಪವಿತ್ರಗೊಳಿಸುವ ಘಟನೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಚನ್ನಿ ಹೇಳಿರುವ ಬೆನ್ನಲ್ಲೇ ಗುಂಪು ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

ಗುರುದ್ವಾರದಲ್ಲಿ ಅಪವಿತ್ರಗೊಳಿಸುವ ಯಾವುದೇ ಸೂಚನೆಗಳೂ ಕಂಡು ಬಂದಿಲ್ಲ ಎಂದಿರುವ ಪೊಲೀಸರು, ಹತ್ಯೆ ಪ್ರಕರಣದಲ್ಲಿ ಅಲ್ಲಿನ ಉಸ್ತುವಾರಿ ಅಮರ್‌ಜಿತ್‌ ಸಿಂಗ್‌ ಅವರನ್ನು ಬಂಧಿಸಿದ್ದಾರೆ. ಸಾವಿಗೀಡಾದ ಯುವಕ ಗುರುದ್ವಾರದಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ಬಂದಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ.

ಹತ್ಯೆ ನಡೆದ ದಿನವೇ ಅಮರ್ಜಿತ್‌ ಸಿಂಗ್‌ ಅವರನ್ನು ಪೊಲೀಸರು ಬಂಧಿಸಿದ್ದರಾದರೂ ಪರಿಸ್ಥಿತಿ ಕೈಮೀರುವುದನ್ನು ನಿಯಂತ್ರಿಸುವ ಉದ್ದೇಶದಿಂದ ಭಾನುವಾರ ಸಂಜೆಯೇ ಅವರನ್ನು ಬಿಡುಗಡೆ ಮಾಡಿದ್ದರು ಎಂದು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ. ಗುರುದ್ವಾರದಲ್ಲಿ ಅಪವಿತ್ರಗೊಳಿಸುವ ಹಾಗೂ ನಿಶಾನ್‌ ಸಾಹಿಬ್‌ಗೆ (ಸಿಖ್ಖರ ಧ್ವಜ) ಅಗೌರವ ತೋರಿರುವ ಘಟನೆ ನಡೆದಿಲ್ಲ ಎಂದು ಈ ಹಿಂದೆಯೂ ಪೊಲೀಸರು ಹೇಳಿದ್ದರು.

ನಿಶಾನ್‌ ಸಾಹಿಬ್‌ಗೆ ಅಗೌರವ ತೋರಿರುವ ಶಂಕೆಯ ಮೇಲೆ ಸಿಖ್ಖರ ಗುಂಪು ಯುವಕನಿಗೆ ಸಾಯುವವರೆಗೂ ಥಳಿಸಿತ್ತು. ಗುರುವಾರ ಐವರು ವೈದ್ಯರನ್ನು ಒಳಗೊಂಡ ತಂಡವು ಮೃತ ಯುವಕನ ಶವಪರೀಕ್ಷೆ ನಡೆಸಿದ್ದರು. ದೇಹದ ಮೇಲೆ 30 ಗಾಯದ ಗುರುತುಗಳು ಇರುವುದಾಗಿ ವರದಿಯಾಗಿತ್ತು. ತಿವಿದಿರುವುದು ಸೇರಿದಂತೆ ಕುತ್ತಿಗೆ, ತಲೆ ಹಾಗೂ ಸೊಂಟದ ಭಾಗದಲ್ಲಿ ತೀವ್ರ ರೀತಿಯ ಗಾಯಗಳಾಗಿರುವುದನ್ನು ಗುರುತಿಸಲಾಗಿತ್ತು.

ಮರಣೋತ್ತರ ಪರೀಕ್ಷೆಯ ಬಳಿಕ ಶವದ ಅಂತಿಮ ಸಂಸ್ಕಾರ ನಡೆಸಲಾಗಿದೆ. ಈವರೆಗೂ ಸಾವಿಗೀಡಾಗಿರುವ ಯುವಕನ ಗುರುತು ಪತ್ತೆಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT