ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಿಮ ಸಮರದಲ್ಲೂ ಗೆದ್ದ ಹೋರಾಟಗಾರ

ಮರೀನಾ ಕಿನಾರೆಯಲ್ಲಿ ಸಮಾಧಿ: ಸ್ಥಳ ಕೊಡಲು ಹೈಕೋರ್ಟ್‌ ನಿರ್ದೇಶನ
Last Updated 8 ಆಗಸ್ಟ್ 2018, 19:38 IST
ಅಕ್ಷರ ಗಾತ್ರ

ಚೆನ್ನೈ: ದಣಿವರಿಯದ ಛಲಗಾರ ಕರುಣಾನಿಧಿಯವರನ್ನು ‘ಹುಟ್ಟು ಹೋರಾಟಗಾರ’ ಎಂದೇ ರಾಜಕೀಯ ಮುಖಂಡರು ಬಣ್ಣಿಸುತ್ತಾರೆ. ಈ ಹೋರಾಟದ ಕಥನ ಅವರ ಉಸಿರು ನಿಂತ ಮೇಲೆಯೂ ಮುಂದುವರಿಯಿತು. ಮರೀನಾ ಕಡಲ ಕಿನಾರೆಯಲ್ಲಿ ಅಂತ್ಯ ಸಂಸ್ಕಾರ ಮತ್ತು ಸ್ಮಾರಕದ ಸ್ಥಳಕ್ಕಾಗಿ ಡಿಎಂಕೆ ಕಾರ್ಯಕರ್ತರು ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲು ಹತ್ತಬೇಕಾಯಿತು.

ಏಳು ದಶಕಗಳ ರಾಜಕೀಯ ವೃತ್ತಿ ಜೀವನದಲ್ಲಿ ಕರುಣಾನಿಧಿ ಹೋರಾಟಗಾರ ಎಂದೇ ಗುರುತಿಸಿಕೊಂಡವರು. ಸಂಘರ್ಷಕ್ಕೆ ಹೆಸರಾದ ತಮಿಳುನಾಡಿನ ರಾಜಕಾರಣದ ಹೋರಾಟಗಳಲ್ಲಿ ಹಲವನ್ನು ಅವರು ಗೆದ್ದಿದ್ದಾರೆ, ಕೆಲವಲ್ಲಿ ಸೋತಿದ್ದಾರೆ. ಆದರೆ ಎಂದೂ ಕೈಚೆಲ್ಲಿ ಕೂತದ್ದಿಲ್ಲ. ಸಮಾಧಿ ಸ್ಥಳಕ್ಕೆ ನಡೆದ ಬದುಕಿನ ಕೊನೆಯ ಹೋರಾಟದಲ್ಲಿಯೂ ಗೆದ್ದ ಹಿರಿಮೆ ಕರುಣಾನಿಧಿ ಪಾಲಾಗಿದೆ.

ಗುರು ಸಿ.ಎನ್‌. ಅಣ್ಣಾದೊರೈ ಅವರ ಸ್ಮಾರಕದ ಪಕ್ಕದಲ್ಲೇ ಕರುಣಾನಿಧಿ ಸಮಾಧಿಗೆ ಅವಕಾಶ ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಡಿಎಂಕೆ ಕಾರ್ಯಕರ್ತರು ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್‌ ನೇತೃತ್ವದ ಪೀಠ ಮಂಗಳವಾರ ರಾತ್ರಿಯೇ ವಿಚಾರಣೆಗೆ ಎತ್ತಿಕೊಂಡಿತು. ಅಗಲಿದ ನಾಯಕನಿಗೆ ಮರೀನಾ ಕಡಲ ಕಿನಾರೆಯಲ್ಲಿ ‘ಗೌರವಾರ್ಹ ಅಂತ್ಯಸಂಸ್ಕಾರ’ಕ್ಕೆ ಏರ್ಪಾಡು ಮಾಡಿ ಎಂದು ಪೀಠವು ಬುಧವಾರ ಬೆಳಿಗ್ಗೆ ಆದೇಶ ನೀಡಿತು.

ಸರ್ಕಾರದ ತರಕಾರು ಏನು?:ಡಿಎಂಕೆ ಅಧ್ಯಕ್ಷರ ಅಂತ್ಯಸಂಸ್ಕಾರವನ್ನು ಮರೀನಾ ಕಿನಾರೆಯಲ್ಲಿ ನಡೆಸಲು ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ ತಮಿಳುನಾಡು ಸರ್ಕಾರ ನಿರಾಕರಿಸಿತು. ಇಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ಕೊಡಲು ಕರಾವಳಿ ನಿಯಂತ್ರಣ ವಲಯದ (ಸಿಆರ್‌ಝಡ್‌) ನಿಯಮಗಳು ಅಡ್ಡಿಯಾಗುತ್ತವೆ ಎಂಬುದು ಸರ್ಕಾರದ ವಾದವಾಗಿತ್ತು.

ಆದರೆ, ಡಿಎಂಕೆ ಕಾರ್ಯಕರ್ತರು ಬೀದಿಗಿಳಿದು ‘ಮರೀನಾ ಬೇಕೇ ಬೇಕು’ ಎಂದು ಘೋಷಣೆಗಳನ್ನು ಕೂಗಿದರು.

ಸಿಆರ್‌ಝಡ್‌ನಿಂದಾಗಿ ಕಡಲ ಕಿನಾರೆಯಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗೆ ಅವಕಾಶ ಇಲ್ಲ. ಆದರೆ, ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ನಿಧನರಾದಾಗ ವಿಶೇಷ ವಿನಾಯಿತಿ ಪಡೆದುಕೊಂಡು ಸ್ಮಾರಕ ನಿರ್ಮಾಣ ಮಾಡಲಾಗಿತ್ತು. ಅದೇ ರೀತಿ ಕರುಣಾನಿಧಿ ಸ್ಮಾರಕಕ್ಕೂ ಅವಕಾಶ ಕೊಡಬೇಕು ಎಂಬುದು ಡಿಎಂಕೆ ವಾದವಾಗಿತ್ತು.

‌ಸುಮಾರು ಆರು ದಶಕ ರಾಜ್ಯಕ್ಕೆ ಸೇವೆ ಸಲ್ಲಿಸಿರುವ, ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿಯವರಿಗೆ ಅಣ್ಣಾದೊರೈ ಸ್ಮಾರಕದ ಪಕ್ಕದಲ್ಲಿಯೇ ಅಂತ್ಯಸಂಸ್ಕಾರಗೊಳ್ಳುವ ಹಕ್ಕು ಇದೆ ಎಂಬುದು ಅವರ ಒತ್ತಾಯವಾಗಿತ್ತು.

ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗ ನಿಧನರಾದವರಿಗೆ ಮಾತ್ರ ಮರೀನಾ ಕಿನಾರೆಯಲ್ಲಿ ಅಂತ್ಯಸಂಸ್ಕಾರದ ಅವಕಾಶ ನೀಡಲಾಗುವುದು. ಮಾಜಿ ಮುಖ್ಯಮಂತ್ರಿಗಳಿಗೆ ಬೇರೆಡೆ ವ್ಯವಸ್ಥೆ ಮಾಡಲಾಗುವುದು ಎಂದು ತಮಿಳುನಾಡು ಸರ್ಕಾರದ ಪರ ವಕೀಲರು ವಾದಿಸಿದರು. ಆದರೆ, ಬೇರೆಡೆ ಅಂತ್ಯಸಂಸ್ಕಾರ ನಡೆಸುವುದು ‘ಗೌರವಾರ್ಹ ವಿದಾಯ’ ಆಗದು. ಇದು ಲಕ್ಷಾಂತರ ಕಾರ್ಯಕರ್ತರಿಗೆ ಮಾಡುವ ಅವಮಾನ ಎಂದು ಡಿಎಂಕೆ ವಾದಿಸಿತು.

ಮರೀನಾ ಕಿನಾರೆಯಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ಕೊಟ್ಟು ಹೈಕೋರ್ಟ್‌ ಆದೇಶ ನೀಡಿದ ಸುದ್ದಿ ತಿಳಿಯುತ್ತಿದ್ದಂತೆಯೇ ಭಾವುಕರಾದ ಸ್ಟಾಲಿನ್‌ ಅತ್ತುಬಿಟ್ಟರು. ರಾಜಾಜಿ ಸಭಾಂಗಣದಲ್ಲಿ ತಂದೆಯ ಮೃತದೇಹದ ಸಮೀಪದಲ್ಲಿ ನಿಂತಿದ್ದ ಅವರು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

ದಣಿವರಿಯದೆ ದುಡಿದ ವ್ಯಕ್ತಿಗೆ ವಿಶ್ರಾಂತಿ!

ದಣಿವರಿಯದೆ ಅವಿರತವಾಗಿ ದುಡಿದ ವ್ಯಕ್ತಿ ಈಗ ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ’– ಕರುಣಾನಿಧಿ ಅವರ ಶವಪೆಟ್ಟಿಗೆಯ ಮೇಲೆ ತಮಿಳು ಭಾಷೆಯಲ್ಲಿದ್ದ ಈ ಆಕರ್ಷಕ ವಾಕ್ಯ ಎಲ್ಲರ ಗಮನ ಸೆಳೆಯಿತು.

ಕಾವ್ಯಾತ್ಮಕವಾಗಿರುವ ಈ ಸಾಲು ಸ್ವತಃ ಕರುಣಾನಿಧಿ ಕಲ್ಪನೆಯ ಮೂಸೆಯಲ್ಲಿ ಅರಳಿಬಂದಿದೆ.

ಮೂರು ದಶಕಗಳ ಹಿಂದೆಯೇ ಅವರು ತಮ್ಮ ಶವಪೆಟ್ಟಿಗೆಯ ಮೇಲೆ ಈ ಸಾಲನ್ನು ಬರೆಯುವಂತೆ ಪುತ್ರ ಸ್ಟಾಲಿನ್‌ಗೆ ಹೇಳಿದ್ದರು. ತಮ್ಮ ತಂದೆ ಹೇಳಿದ್ದ ಈ ವಾಕ್ಯವನ್ನು ಸ್ಟಾಲಿನ್‌ ಬರೆದು ಇಟ್ಟುಕೊಂಡಿದ್ದರು. 30 ವರ್ಷಗಳಿಂದ ಅದನ್ನು ಅತ್ಯಂತ ಜೋಪಾನವಾಗಿ ಕಾಯ್ದಿಟ್ಟುಕೊಂಡಿದ್ದರು. ತಮ್ಮ ತಂದೆಯನ್ನು ಕುರಿತು ಬರೆದ ಕವನದಲ್ಲಿ ಸ್ಟಾಲಿನ್‌ ಈ ಪ್ರಸಂಗವನ್ನುಸ್ಮರಿಸಿಕೊಂಡಿದ್ದಾರೆ.

ರಾಜಕೀಯ ಗುರು ಅಣ್ಣಾದೊರೈ (ಅಣ್ಣ) ಮತ್ತು ರಾಜಕೀಯ ಬದ್ಧ ವೈರಿ ಜಯಲಲಿತಾ (ಅಮ್ಮ) ಅವರ ಸಮಾಧಿಗಳ ಪಕ್ಕ ‘ಅಯ್ಯ’ (ಕರುಣಾನಿಧಿ) ವಿಶ್ರಾಂತಿಗೆ ಜಾರಿದ್ದಾರೆ.

ಹುಟ್ಟೂರಲ್ಲಿ ಮೌನ...

ಎಂ. ಕರುಣಾನಿಧಿ ಅವರು ಹುಟ್ಟೂರು ನಾಗಪಟ್ಟಣ ಜಿಲ್ಲೆಯ ತಿರುಕ್ಕುವಲೈ ಗ್ರಾಮದಲ್ಲಿ ಸ್ಮಶಾನ ಮೌನ ಕವಿದಿದೆ.

ಈ ಗ್ರಾಮದಲ್ಲಿರುವ ಕರುಣಾನಿಧಿ ಅವರ ಪೂರ್ವಿಕರ ಮನೆಯ ಎದುರು ಜಮಾಯಿಸಿರುವ ಗ್ರಾಮಸ್ಥರು ಅಗಲಿದ ನಾಯಕನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ.

ಕರುಣಾನಿಧಿ ಅವರು ಇದೇ ಗ್ರಾಮದಲ್ಲಿ ತಮ್ಮ ಬಾಲ್ಯ ಮತ್ತು ವಿದ್ಯಾಭ್ಯಾಸ ಪೂರೈಸಿದ್ದರು. ಅವರ ಬಾಲ್ಯ ಮತ್ತು ಯೌವ್ವನದ ದಿನಗಳ ಅನೇಕ ಕಪ್ಪುಬಿಳುಪು ಚಿತ್ರಗಳು ಪೂರ್ವಿಕರ ಮನೆಯ ಗೋಡೆಗಳನ್ನು ಅಲಂಕರಿಸಿವೆ.

2009ರಲ್ಲಿ ಅವರು ಸ್ವಗ್ರಾಮಕ್ಕೆ ಭೇಟಿ ನೀಡಿದ್ದೇ ಕೊನೆ. ಅದಾದ ನಂತರ ಅವರು ಇಲ್ಲಿಗೆ ಬರಲಿಲ್ಲ ಎಂದು ಗ್ರಾಮಸ್ಥರು ಸ್ಮರಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT