ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಯದಲ್ಲೇ ರಾಷ್ಟ್ರೀಯ ಪಕ್ಷ ಘೋಷಿಸಲಿರುವ ಕೆಸಿಆರ್?

Last Updated 11 ಜೂನ್ 2022, 11:17 IST
ಅಕ್ಷರ ಗಾತ್ರ

ಹೈದರಾಬಾದ್: ರಾಷ್ಟ್ರೀಯ ಹಂತದಲ್ಲಿ ತೃತೀಯ ರಂಗ ನಿರ್ಮಾಣ ಅಷ್ಟಾಗಿ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು, ಹೊಸ ರಾಷ್ಟ್ರೀಯ ಪಕ್ಷ ಆರಂಭಿಸುವ ಚಿಂತನೆಯಲ್ಲಿದ್ದಾರೆ. ಜೂನ್ 19ರಂದು ಟಿಆರ್‌ಎಸ್ ಕಾರ್ಯಕಾರಿಣಿ ಸಭೆಯಲ್ಲಿ ಈ ಕುರಿತಂತೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಶುಕ್ರವಾರ, ರಾಜ್ಯದ ಸಚಿವರು ಮತ್ತು ಪಕ್ಷದ ಹಿರಿಯ ನಾಯಕರೊಂದಿಗೆ ಮ್ಯಾರಥಾನ್ ಚರ್ಚೆ ನಡೆಸಿದ ಟಿಆರ್‌ಎಸ್ ಮುಖ್ಯಸ್ಥರು, ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಚುನಾವಣಾ ಆಯೋಗದಲ್ಲಿ ಹೊಸ ಪಕ್ಷದ ನೋಂದಣಿ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗುವ ಸಾಧ್ಯತೆ ಇದೆ. ಈ ತಿಂಗಳಾಂತ್ಯದಲ್ಲಿ ನವದೆಹಲಿಯಲ್ಲಿ ಕೆಸಿಆರ್ ಅವರು ಹೊಸ ರಾಷ್ಟ್ರೀಯ ಪಕ್ಷದ ಘೋಷಣೆ ಮಾಡಬಹುದು ಎಂದು ತಿಳಿದುಬಂದಿದೆ.

ಕಾರನ್ನು ರಾಷ್ಟ್ರೀಯ ಪಕ್ಷದ ಚಿಹ್ನೆಯಾಗಿ ಇಟ್ಟುಕೊಳ್ಳಲು ಟಿಆರ್‌ಎಸ್ ನಾಯಕತ್ವ ಮುಂದಾಗಿದೆ. ರಾಷ್ಟ್ರೀಯ ಪಕ್ಷದ ಕೇಂದ್ರ ಕಚೇರಿ ನವದೆಹಲಿಯಲ್ಲಿ ನಿರ್ಮಾಣವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ದೇಶದ ರಾಜಕಾರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಇಚ್ಛೆ ವ್ಯಕ್ತಪಡಿಸಿರುವ ಕೆಸಿಆರ್, ತಮ್ಮ ಆಪ್ತರ ಜೊತೆ ಪ್ರಸ್ತುತ ರಾಜಕೀಯ ಪರಿಸ್ಥಿತಿ ಬಗ್ಗೆ ಸತತ 6 ಗಂಟೆ ಕಾಲ ಚರ್ಚೆ ನಡೆಸಿದ್ದಾರೆ. ಪಕ್ಷದ ಶಾಸಕರೊಬ್ಬರು ಸೂಚಿಸಿದ ‘ಬಿಆರ್‌ಎಸ್’ ಹೆಸರನ್ನೇ ಅಂತಿಮಗೊಳಿಸಲು ಅವರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ತಿಂಗಳು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರ ಜೊತೆ ಚರ್ಚಿಸಿರುವ ಕೆಸಿಆರ್, ಅಂತಿಮವಾಗಿ ಈ ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ಹಂತದಲ್ಲಿ ಬಿಜೆಪಿಯೇತರ ಮತ್ತು ಕಾಂಗ್ರೆಸ್‌ಯೇತರ ತೃತೀಯ ರಂಗ ಕಟ್ಟುವ ಕೆಸಿಆರ್ ಅವರ ಪ್ರಯತ್ನ ಅಷ್ಟಾಗಿ ಫಲ ನೀಡದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT