ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Kerala Blast: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ವಿರುದ್ಧ ಕೇರಳದಲ್ಲಿ ಪ್ರಕರಣ

Published 31 ಅಕ್ಟೋಬರ್ 2023, 6:35 IST
Last Updated 31 ಅಕ್ಟೋಬರ್ 2023, 6:35 IST
ಅಕ್ಷರ ಗಾತ್ರ

ಕೊಚ್ಚಿ: ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರ ಹೇಳಿಕೆಯೊಂದು ಸಮಾಜದ ವಿವಿಧ ಸಮುದಾಯಗಳ ನಡುವೆ ದ್ವೇಷವನ್ನು ಹುಟ್ಟಿಸುವಂಥದ್ದು ಎಂಬ ಆರೋಪದ ಅಡಿಯಲ್ಲಿ ಅವರ ವಿರುದ್ಧ ಕೇರಳದಲ್ಲಿ ಪ್ರಕರಣ ದಾಖಲಾಗಿದೆ. ಈ ಕ್ರಮವನ್ನು ಬಿಜೆಪಿ ಖಂಡಿಸಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹಮಾಸ್ ಸಂಘಟನೆಯನ್ನು ಓಲೈಸುತ್ತಿದ್ದಾರೆ ಎಂಬುದನ್ನು ತೋರಿಸಿಕೊಟ್ಟ ಕಾರಣಕ್ಕೆ ಈ ಪ್ರಕರಣ ದಾಖಲಿಸಲಾಗಿದೆ ಎಂದು ರಾಜೀವ್ ಅವರು ಪ್ರತಿಕ್ರಿಯಿಸಿದ್ದಾರೆ.

ರಾಹುಲ್ ಮತ್ತು ವಿಜಯನ್ ಅವರು ಜೊತೆಯಾಗಿ ಈ ಪ್ರಕರಣ ದಾಖಲಿಸಿದ್ದಾರೆ ಎಂದು ರಾಜೀವ್ ದೂರಿದ್ದಾರೆ. ಅಲ್ಲದೆ, ಇಬ್ಬರೂ ಮುಖಂಡರು ಎಸ್‌ಡಿಪಿಐ, ಪಿಎಫ್‌ಐ ಮತ್ತು ಹಮಾಸ್‌ನಂತಹ ‘ವಿಷಕಾರಿ, ತೀವ್ರಗಾಮಿ, ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿಕೊಳ್ಳುವ ಸಂಘಟನೆಗಳನ್ನು ನಾಚಿಕೆಬಿಟ್ಟು ಓಲೈಸುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ರಾಜೀವ್ ವಿರುದ್ಧದ ಕ್ರಮವು ತೀವ್ರಗಾಮಿ ಚಿಂತನೆಗಳನ್ನು ಹೊಂದಿರುವ ವಿಭಜನಕಾರಿ ಶಕ್ತಿಗಳಿಗೆ ಸಹಾಯ ಮಾಡುವ ಮತ್ತು ಅವುಗಳನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ ಎಂದು ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ. ರಾಜೀವ್ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಕಾನೂನಿನ ಮೂಲಕ ಮತ್ತು ರಾಜಕೀಯವಾಗಿ ಎದುರಿಸಲಾಗುತ್ತದೆ ಎಂದು ಬಿಜೆಪಿ ಹೇಳಿದೆ.

ಕೊಚ್ಚಿಯಲ್ಲಿ ನಡೆದ ಬಾಂಬ್ ಸ್ಫೋಟ ಹಾಗೂ ಮಲಪ್ಪುರಂ ಜಿಲ್ಲೆಯಲ್ಲಿ ಈಚೆಗೆ ಇಸ್ಲಾಮಿಕ್ ಸಂಘಟನೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಮಾಸ್ ಸಂಘಟನೆಯ ನಾಯಕರು ವರ್ಚುವಲ್ ಆಗಿ ಭಾಷಣ ಮಾಡಿದ್ದರು ಎಂಬ ವಿಚಾರವಾಗಿ ರಾಜೀವ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ತಾವಾಗಿಯೇ ಎಫ್‌ಐಆರ್ ದಾಖಲಿಸಿದ್ದಾರೆ. ಕೇರಳದಲ್ಲಿ ಕೋಮು ಸೌಹಾರ್ದವನ್ನು ಹಾಳುಮಾಡುವ ಹಾಗೂ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಉದ್ದೇಶದಿಂದ ರಾಜೀವ್ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೆ ನೀಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಐಯುಎಂಎಲ್ ಶಾಸಕ ಎಂ.ಕೆ. ಮುನೀರ್ ಮತ್ತು ಸಿಪಿಎಂ ನಾಯಕ ಎಂ. ಸ್ವರಾಜ್ ಅವರು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ಶ್ಲಾಘಿಸಿದ್ದರು. ಆದರೆ ಅವರ ವಿರುದ್ಧ ದೂರು ದಾಖಲಿಸಿಕೊಂಡಿಲ್ಲ ಎಂದು ಸುರೇಂದ್ರನ್ ವಾಗ್ದಾಳಿ ನಡೆಸಿದ್ದಾರೆ.

ಹಮಾಸ್ ನಾಯಕರು ಪಾಲ್ಗೊಂಡಿದ್ದ ಸಭೆಯನ್ನು ಆಯೋಜಿಸಿದ್ದ ಇಸ್ಲಾಮಿಕ್ ಸಂಘಟನೆಯ ವಿರುದ್ಧ ದೂರು ದಾಖಲಿಸಲು ಸರ್ಕಾರ ಸಿದ್ಧವಿಲ್ಲ. ಆದರೆ ಈ ಸಭೆಯ ವಿರುದ್ಧ ಮಾತನಾಡಿದ ಕೇಂದ್ರ ಸಚಿವರ ವಿರುದ್ಧ ದೂರು ದಾಖಲಿಸಲಾಗುತ್ತದೆ. ಈ ಎಫ್‌ಐಆರ್‌, ಮತಬ್ಯಾಂಕ್ ಆಧರಿಸಿದ ಹೀನ ತೀರ್ಮಾನ ಎಂದು ಸುರೇಂದ್ರ ಟೀಕಿಸಿದ್ದಾರೆ.

‘ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ, ಅಪಕೀರ್ತಿ ಪಡೆದಿರುವ ಮುಖ್ಯಮಂತ್ರಿ (ಮತ್ತು ಗೃಹಮಂತ್ರಿ) ಪಿಣರಾಯಿ ವಿಜಯನ್ ಅವರದ್ದು ಕೊಳಕು, ನಾಚಿಕೆಯಿಲ್ಲದ ಓಲೈಕೆ ರಾಜಕಾರಣ. ಅವರು ದೆಹಲಿಯಲ್ಲಿ ಕುಳಿತು ಇಸ್ರೇಲ್ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಭಯೋತ್ಪಾದಕ ಹಮಾಸ್ ಕೇರಳದಲ್ಲಿ ಜಿಹಾದ್‌ಗೆ ಮುಕ್ತವಾಗಿ ಕರೆ ನೀಡುತ್ತಿದ್ದು, ಅದು ಅಮಾಯಕ ಕ್ರೈಸ್ತರ ಮೇಲೆ ದಾಳಿ ಮತ್ತು ಬಾಂಬ್‌ ಸ್ಫೋಟಗಳಿಗೆ ಕಾರಣವಾಗುತ್ತಿದೆ’ ಎಂದು ರಾಜೀವ್ ಅವರು ಪೋಸ್ಟ್ ಮಾಡಿದ್ದರು. ಇದಾದ ನಂತರದಲ್ಲಿ ವಿಜಯನ್ ಹಾಗೂ ರಾಜೀವ್ ನಡುವೆ ಮಾತಿನ ಸಮರ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT