ತಿರುವನಂತಪುರ: ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ವಾಸ್ತವ್ಯಕ್ಕೆ ಸುರಕ್ಷಿತ ವಾತಾವರಣ ಕಲ್ಪಿಸುವ ಉದ್ದೇಶದಿಂದ ‘ಸ್ಟುಡಿಯೊ ಅಪಾರ್ಟ್‌ಮೆಂಟ್‘ ಸ್ಥಾಪಿಸಲು ಕೇರಳ ಸರ್ಕಾರ ಯೋಜನೆ ರೂಪಿಸಿದೆ.
ಕಾರ್ಮಿಕ ಮತ್ತು ಕೌಶಲ ಇಲಾಖೆ ಈ ಸಂಬಂಧ ಈಗಾಗಲೇ ಕಾರ್ಯಪ್ರವೃತ್ತವಾಗಿದ್ದು, ಆರಂಭಿಕ ಹಂತದಲ್ಲಿ ಪರೀಕ್ಷಾರ್ಥ ಯೋಜನೆಗಾಗಿ ಮೀನಂಕುಳಂನಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದೆ ಎಂದು ಕಾರ್ಮಿಕ ಸಚಿವ ವಿ. ಶಿವನ್‌ಕುಟ್ಟಿ ಹೇಳಿದ್ದಾರೆ.
ಕಿನ್‌ಫ್ರಾ ಇಂಟರ್‌ನ್ಯಾಶನಲ್ ಅಪಾರೆಲ್ ಪಾರ್ಕ್‌ನಲ್ಲಿ ಕ್ಯಾಂಪಸ್ ಸಜ್ಜುಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ಎಲ್ಲ ಜಿಲ್ಲೆಗಳಲ್ಲೂ ಯೋಜನೆ ವಿಸ್ತರಿಸಲು ಕೇರಳ ಸರ್ಕಾರ ಮುಂದಾಗಿದೆ.
ಬಾಡಿಗೆ ದರ ವಿಧಿಸಿ, ಅದರ ಮೂಲಕ ಮಹಿಳೆಯರಿಗೆ ಸುರಕ್ಷಿತ ಮತ್ತು ಅಗತ್ಯ ಸೌಲಭ್ಯ ಇರುವ ಸ್ಥಳವನ್ನು ಒದಗಿಸುವ ಯೋಜನೆ ಇದಾಗಿದೆ. ಇಲ್ಲಿ ಉಳಿದುಕೊಂಡು, ಕೆಲಸಕ್ಕೆ ಹೋಗಿ ಬರುವ ಅವಕಾಶವನ್ನು ಸ್ಟುಡಿಯೊ ಅಪಾರ್ಟ್‌ಮೆಂಟ್ ಕಲ್ಪಿಸಲಿದೆ.
ಮುಂದೆ ಇತರ ಜಿಲ್ಲೆಗಳಲ್ಲಿ ಅಗತ್ಯ ಹೂಡಿಕೆ ಮತ್ತು ಸ್ಥಳ ಲಭ್ಯತೆ ನೋಡಿಕೊಂಡು ಯೋಜನೆ ವಿಸ್ತರಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.