ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಮಾತ್ರವಲ್ಲ ದೇಶದ ಇತರ ರಾಜ್ಯಗಳಲ್ಲೂ ಕೋವಿಡ್ ಇದೆ: ವೀಣಾ ಜಾರ್ಜ್‌

Published 18 ಡಿಸೆಂಬರ್ 2023, 13:48 IST
Last Updated 18 ಡಿಸೆಂಬರ್ 2023, 14:06 IST
ಅಕ್ಷರ ಗಾತ್ರ

ತಿರುವನಂತಪುರ: ‘ಕೋವಿಡ್‌–19ಕ್ಕೆ ಸಂಬಂಧಿಸಿದ ರೂಪಾಂತರಿ ಜೆಎನ್‌.1 ತಳಿಯು ಕೇರಳದ 79 ವರ್ಷದ ಒಬ್ಬರಲ್ಲಿ ಮಾತ್ರ ಈವರೆಗೂ ಪತ್ತೆಯಾಗಿದೆ. ಆದರೆ ಭಾರತದಿಂದ ಸಿಂಗಪುರಕ್ಕೆ ತೆರಳಿದ 15 ಜನರಲ್ಲಿ ಈ ತಳಿ ಪತ್ತೆಯಾಗಿರುವುದನ್ನು ಅಲ್ಲಿನ ಅಧಿಕಾರಿಗಳು ಖಚಿತಪಡಿಸಿದ್ದಾರೆ’ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ವಿಧಾನಸಭೆ ಅಧಿವೇಶನದಲ್ಲಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ಕೇರಳದಲ್ಲಿ ಜೆಎನ್‌.1 ತಳಿ ಪತ್ತೆಯಾದ ವ್ಯಕ್ತಿಯು ಗುಣಮುಖರಾಗಿದ್ದು, ಸದ್ಯ ಮನೆಯಲ್ಲಿದ್ದಾರೆ. ಆದರೆ ಸಿಂಗಪುರಕ್ಕೆ ತೆರಳಿದವರಲ್ಲಿ ಭಾರತದ ಇತರ ಪ್ರದೇಶದವರೂ ಇದ್ದರು. ಹೀಗಾಗಿ ಹೊಸ ತಳಿಯ ಕೋವಿಡ್ ಸೋಂಕು ಕೇರಳ ಮಾತ್ರವಲ್ಲ, ಇತರ ರಾಜ್ಯಗಳಲ್ಲೂ ಇರುವುದು ಸ್ಪಷ್ಟ’ ಎಂದಿದ್ದಾರೆ.

ಕೋವಿಡ್ ನಿಯಂತ್ರಿಸುವಲ್ಲಿ ಸರ್ಕಾರ ಅಸಮರ್ಥ ಎಂದು ಆರೋಪಿಸಿದ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಅವರ ಟೀಕೆಗೆ ಪ್ರತಿಕ್ರಿಯಿಸಿದ ವೀಣಾ, ‘ಕೆಲ ಜನರು ವಿನಾ ಕಾರಣ ಜನರಲ್ಲಿ ಭಯ ಮೂಡಿಸುತ್ತಿದ್ದಾರೆ. ಇದು ನಿಜಕ್ಕೂ ತಪ್ಪು. ಕೋವಿಡ್‌–19 ಸೋಂಕಿತರ ಸಂಖ್ಯೆ ಕಳೆದ ನವೆಂಬರ್‌ನಲ್ಲಿ ಹೆಚ್ಚಾಗಿದ್ದನ್ನು ಗಮನಿಸಿದ ರಾಜ್ಯ ಸರ್ಕಾರ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಸಂಪೂರ್ಣ ಜಿನೋಮ್ ಅನುಕ್ರಮ ಅರಿಯಲು ಸೋಂಕಿತರಿಂದ ಸಂಗ್ರಹಿಸಿದ ಮಾದರಿಯನ್ನು ಕಳುಹಿಸಲು ಆರಂಭದಲ್ಲೇ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು’ ಎಂದು ಸಭೆಗೆ ಉತ್ತರಿಸಿದರು.

‘ರಾಜ್ಯದಲ್ಲಿ ಆರೋಗ್ಯ ಇಲಾಖೆಯು ಕೈಗೊಂಡಿರುವ ವ್ಯಾಪಕ ತಪಾಸಣೆ ಹಾಗೂ ಮುನ್ನೆಚ್ಚರಿಕೆಯಿಂದಾಗಿ ಒಂದು ಪ್ರಕರಣ ಪತ್ತೆಯಾಗಿದೆ. ಹೀಗಾಗಿ ಎಲ್ಲೆಡೆ ಸರಿಯಾದ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ಸೋಂಕು ಹರಡದಂತೆ ಎಚ್ಚರ ವಹಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ವಾರ್ಡ್‌ಗಳನ್ನು ಸಜ್ಜುಗೊಳಿಸಲಾಗಿದೆ. ಆಮ್ಲಜನಕ ಸಹಿತ ಹಾಸಿಗೆಗಳು, ತೀವ್ರ ನಿಗಾ ಘಟಕ, ವೆಂಟಿಲೇಟರ್‌ಗಳು ಸಿದ್ಧ ಇವೆ’ ಎಂದು ಸಚಿವೆ ವೀಣಾ ತಿಳಿಸಿದ್ದಾರೆ.

ಕೇರಳದ ಆಸ್ಪತ್ರೆಗಳಲ್ಲಿ ಒಟ್ಟು 2,454 ಐಸಿಯು ಹಾಸಿಗೆಗಳು

‘ಡಿ. 19ರವರೆಗೆ ರಾಜ್ಯವ್ಯಾಪಿ ಇರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು 1,192 ಆಸ್ಪತ್ರೆಗಳ ಪರಿಶೀಲನೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 1,957 ಆಮ್ಲಜನಕ ಸಹಿತ ಹಾಸಿಗೆಗಳು ಇವೆ. 2,454 ಐಸಿಯು ಹಾಸಿಗೆಗಳು ಇವೆ. 937 ವೆಂಟಿಲೇಟರ್‌ಗಳನ್ನು ಸಿದ್ಧಪಡಿಸಲಾಗಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ’ ಎಂದು ಸದನಕ್ಕೆ ಮಾಹಿತಿ ನೀಡಿದ್ದಾರೆ.

‘ಕೋವಿಡ್‌ನಿಂದಾಗಿ ರಾಜ್ಯದಲ್ಲಿ ಈವರೆಗೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈವರೆಗೂ ಮೃತಪಟ್ಟಿದ್ದಾರೆ ಎಂದು ಹೇಳಲಾದವರು, ಈ ಮೊದಲೇ ಇದ್ದ ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಕೇರಳದಲ್ಲಿ ಕೋವಿಡ್ ಹರಡುವಿಕೆ ಕುರಿತಂತೆ ಯಾವುದೇ ತಪ್ಪು ಮಾಹಿತಿಯನ್ನು ಜನರಿಗೆ ನೀಡಿ ಭಯಪಡಿಸಬೇಡಿ’ ಎಂದು ಮನವಿ ಮಾಡಿದ್ದಾರೆ.

ಮತ್ತೊಂದೆಡೆ ಸತೀಶನ್ ಅವರು ಮಾತನಾಡಿ, ‘ದೇಶದ ಶೇ 89ರಷ್ಟು ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ. ಈ ಕುರಿತಂತೆ ಯಾವುದೇ ಮಾಹಿತಿಯನ್ನು ರಾಜ್ಯ ಸರ್ಕಾರ ನೀಡುತ್ತಿಲ್ಲ. ಭಾನುವಾರ ಕೋವಿಡ್‌ನ 111 ಹೊಸ ಪ್ರಕರಣಗಳು ಪತ್ತೆಯಾಗಿವೆ. 4 ಜನ ಮೃತಪಟ್ಟಿದ್ದಾರೆ’ ಎಂದು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT