ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ವರ್ಷಗಳ ಬಳಿಕ ನ್ಯಾಯ: ಮುಂಗೈ ಕಳೆದುಕೊಂಡ ಕೇರಳ ಪ್ರೊಫೆಸರ್‌ ಹೇಳಿದ್ದೇನು?

ಕೇರಳ: 2010ರಲ್ಲಿ ಪಿಎಫ್‌ಐ ಕಾರ್ಯಕರ್ತರಿಂದ ಹಲ್ಲೆ. ಬಲ ಮುಂಗೈ ಕಳೆದುಕೊಂಡಿರುವ ಪ್ರೊ.ಜೋಸೆಫ್‌ ಹೇಳಿಕೆ
Published 12 ಜುಲೈ 2023, 13:24 IST
Last Updated 12 ಜುಲೈ 2023, 13:24 IST
ಅಕ್ಷರ ಗಾತ್ರ

ಕೊಚ್ಚಿ: ‘ಯಾವುದೇ ಹೋರಾಟದಲ್ಲಿ ಸೋಲು ಇದ್ದದ್ದೇ. ನಾನು ಗೆದ್ದಿರುವೆ ಎಂದು ನನ್ನಂತೆ ಹೇಳುವವರಿಗೂ ಸೋಲುಂಟಾಗುತ್ತದೆ. ಆದರೆ, ನಾನು ಹೋರಾಟವನ್ನು ನಿಲ್ಲಿಸುವುದಿಲ್ಲ’ ಎಂದು ಪ್ರೊ.ಟಿ.ಜೆ.ಜೋಸೆಫ್‌ ಬುಧವಾರ ಹೇಳಿದರು.

ಸದ್ಯ ನಿಷೇಧಿಸಲಾಗಿರುವ ಪಾಪ್ಯುಲರ್‌ ಫ್ರಂಟ್ ಆಫ್‌ ಇಂಡಿಯಾ(ಪಿಎಫ್‌ಐ)ಕ್ಕೆ ಸೇರಿದವರು ಎನ್ನಲಾದ ಕಾರ್ಯಕರ್ತರು 2010ರ ಜುಲೈ 4ರಂದು ಜೋಸೆಫ್‌ ಅವರ ಬಲ ಮುಂಗೈಯನ್ನು ಕತ್ತರಿಸಿದ್ದರು. ಆರೋಪಿಗಳ ಪೈಕಿ ಆರು ಜನರಿಗೆ ಇಲ್ಲಿನ ವಿಶೇಷ ಎನ್‌ಐಎ ನ್ಯಾಯಾಲಯ ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಪ್ರಕರಣ ಕುರಿತು ಎರಡನೇ ಹಂತದ ವಿಚಾರಣೆ ನಡೆಸಿದ ನ್ಯಾಯಾಲಯ, ಇತರ ಐವರು ಆರೋಪಿಗಳನ್ನು ಖುಲಾಸೆ ಮಾಡಿದೆ.

ಪ್ರಕರಣ ಕುರಿತ ಮೊದಲ ಹಂತದ ವಿಚಾರಣೆ ಮುಗಿದ ನಂತರ 13 ಜನರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಯುಎಪಿಎ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಶಿಕ್ಷೆ ವಿಧಿಸಲಾಗಿತ್ತು.

‘ನನ್ನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ನನ್ನಲ್ಲಿ ಯಾವುದೇ ದ್ವೇಷ ಭಾವನೆ ಇಲ್ಲ. ಆದರೆ, ಅಂದಿನ ಘಟನೆಯಿಂದ ನನ್ನ ಜೀವನದಲ್ಲಿ ಬದಲಾವಣೆಯಾಗಿದೆ. ಹಾನಿಯೂ ಆಗಿದೆ’ ಎಂದು ಹೇಳಿದರು.

‘ಆರೋಪಿಗಳಿಗೆ ಶಿಕ್ಷೆ ವಿಧಿಸುವುದರಿಂದ ಸಂತ್ರಸ್ತನಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂಬ ನಂಬಿಕೆ ನನಗಿಲ್ಲ. ಹೀಗಾಗಿ, ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿರುವ ಕಾರಣ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಈ ಪ್ರಕರಣದಲ್ಲಿ ಸಿಕ್ಕಿ ಬಿದ್ದು, ಶಿಕ್ಷೆಗೆ ಗುರಿಯಾದವರು ಮತ್ತೊಬ್ಬರ ಕೈಯಲ್ಲಿರುವ ಅಸ್ತ್ರಗಳಿದ್ದಂತೆ. ನನ್ನ ಮೇಲೆ ದಾಳಿಯನ್ನು ಹೆಣೆದ ನಿಜವಾದ ದೋಷಿಗಳು ಇನ್ನೂ ಹೊರಗಡೆಯೇ ಇದ್ದಾರೆ. ಇಂಥವರ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ’ ಎಂದು ಜೋಸೆಫ್‌ ಹೇಳಿದರು.

‘ಈ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದವರು ತಮ್ಮ ನಂಬಿಕೆಗಳ ಸಂತ್ರಸ್ತರೇ ಆಗಿದ್ದಾರೆ. ಅವರ ನಂಬಿಕೆಯೇ ನನ್ನ ಮೇಲೆ ಆಕ್ರಮಣ ನಡೆಸಲು ಹಾಗೂ ನಂತರದ ಪರಿಣಾಮಗಳಿಗೆ ಕಾರಣವಾಗಿತ್ತು. ಹೀಗಾಗಿ, ಈ ರೀತಿಯ ನಂಬಿಕೆ ವ್ಯವಸ್ಥೆ ಬದಲಾಗದೇ ಹೋದರೆ ಭವಿಷ್ಯದಲ್ಲಿ ಕೂಡ ಇಂಥ ಘಟನೆಗಳು ಮತ್ತೆ ಸಂಭವಿಸಬಹುದು’ ಎಂದರು.

‘ನಿಮ್ಮ ಮುಂಗೈಯನ್ನು ಕತ್ತರಿಸಿದ್ದ, ಈ ಪ್ರಕರಣದ ಮುಖ್ಯ ಆರೋಪಿ ಸಾವದ್‌ ಇನ್ನೂ ತಲೆಮರೆಸಿಕೊಂಡಿರುವುದರಿಂದ ನಿಮಗೆ ಭಯವಾಗುವುದಿಲ್ಲವೇ’ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ನನಗೆ ಯಾವುದೇ ಭಯ ಇಲ್ಲ. ನಾನು ನನ್ನ ನಂಬಿಕೆಗೆ ಅನುಸಾರ ಬದುಕಿರುವೆ, ಮುಂದೆಯೂ ಬದುಕುವೆ. ಆರೋಪಿಯನ್ನು ಇನ್ನೂ ಬಂಧಿಸಿಲ್ಲ ಅಂದರೆ, ಅದು ಈ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ’ ಎಂದರು.

ಘಟನೆ: ಪ್ರೊ.ಜೋಸೆಫ್ ಅವರು ಇಡುಕ್ಕಿ ಜಿಲ್ಲೆಯ ತೋಡುಪುಳದಲ್ಲಿರುವ ನ್ಯೂಮನ್ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 2010ರ ಜುಲೈ 4ರಂದು ಅವರು ಎರ್ನಾಕುಲಂ ಜಿಲ್ಲೆಯ ಮುವತ್ತುಪುಳದಲ್ಲಿರುವ ಚರ್ಚ್‌ನಲ್ಲಿ ಭಾನುವಾರದ ಸಾಮೂಹಿಕ ಪ್ರಾರ್ಥನೆಯಲ್ಲಿ ಕುಟುಂಬದೊಂದಿಗೆ ಪಾಲ್ಗೊಂಡಿದ್ದರು.

ಪ್ರಾರ್ಥನೆ ಮುಗಿಸಿ ಮನೆಗೆ ಮರಳುವಾಗ ಏಳು ಜನರಿದ್ದ ಗುಂಪು ಅವರ ಮೇಲೆ ಹಲ್ಲೆ ಮಾಡಿತ್ತು. ವಾಹನದಿಂದ ಅವರನ್ನು ಹೊರಗೆಳೆದಿದ್ದ ಗುಂಪು, ಅವರ ಬಲ ಮುಂಗೈಯನ್ನು ಕತ್ತರಿಸಿತ್ತು.

ನಂತರ ಅವರು ಉದ್ಯೋಗ ಕಳೆದುಕೊಂಡಿದ್ದರು. ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು.

‘ಜೋಸೆಫ್‌ ಅವರು ಸಿದ್ಧಪಡಿಸಿದ್ದ ಬಿ.ಕಾಂ ಸೆಮಿಸ್ಟರ್‌ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಂಶಗಳಿದ್ದವು ಎಂಬ ಕಾರಣಕ್ಕೆ ಆರೋಪಿಯು (ಸಾವದ್) ಅವರನ್ನು ಹತ್ಯೆ ಮಾಡಲು ಮುಂದಾಗಿದ್ದ’ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT