ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಶಸ್ತ್ರ ಪಡೆಯಲ್ಲಿ ಖಾಲಿ ಹುದ್ದೆಗಳ ಮಾಹಿತಿ ಮುಚ್ಚಿಡುತ್ತಿರುವ ಸರ್ಕಾರ: ಖರ್ಗೆ

Published : 6 ಆಗಸ್ಟ್ 2024, 16:20 IST
Last Updated : 6 ಆಗಸ್ಟ್ 2024, 16:20 IST
ಫಾಲೋ ಮಾಡಿ
Comments

ನವದೆಹಲಿ: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಶಸ್ತ್ರ ಪಡೆಯಲ್ಲಿ ಖಾಲಿ ಹುದ್ದೆಗಳ ಕುರಿತಾದ ಮಹತ್ವದ ಮಾಹಿತಿಗಳನ್ನು ಮುಚ್ಚಿಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಈ ಮಾಹಿತಿಯು ಅಗ್ನಿಪಥ ನೇಮಕಾತಿ ಯೋಜನೆ ಕುರಿತಂತೆ ಮತ್ತಷ್ಟು ಪ್ರಶ್ನೆಗಳನ್ನು ಎತ್ತಬಹುದು ಎಂದು ಸರ್ಕಾರ ಭಯಪಡುತ್ತಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ಸೋಮವಾರ ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆ ಮತ್ತು ಉತ್ತರದ ಮಾಹಿತಿಯನ್ನು ಖರ್ಗೆ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಸೇನೆಯಲ್ಲಿ ಅಧಿಕಾರಿಗಳು, ವೈದ್ಯಕೀಯ ಅಧಿಕಾರಿಗಳು, ಯೋಧರು ಸೇರಿದಂತೆ ಇತರೆ ಸಿಬ್ಬಂದಿಯ ಕೊರತೆ ಬಗ್ಗೆ ಸರ್ಕಾರ ಗಮನ ಹರಿಸಿದೆಯೇ? ಈ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದೇ ಎಂದು ಪ್ರಶ್ನೆ ಕೇಳಲಾಯಿತು.

ಇದಕ್ಕೆ ಲಿಖಿತ ಉತ್ತರ ನೀಡಿದ ರಕ್ಷಣಾ ಖಾತೆಯ ರಾಜ್ಯ ಸಚಿವ ಸಂಜಯ್ ಸೇಠ್, ‘ಸದನದಲ್ಲಿ ಕೋರಲಾಗಿರುವ ಮಾಹಿತಿಯು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಕಾರ್ಯಾಚರಣೆಯ ವಿಷಯವಾಗಿದೆ. ಹಾಗಾಗಿ, ಸಂಬಂಧಿತ ವಿವರಗಳನ್ನು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಬಹಿರಂಗಪಡಿಸುವುದು ಸೂಕ್ತವಾದುದಲ್ಲ’ಎಂದಿದ್ದಾರೆ.

‘ಬಿಜೆಪಿಯ ನಕಲಿ ರಾಷ್ಟ್ರೀಯವಾದಿಗಳು ನಮ್ಮ ದೇಶಪ್ರೇಮಿ ಯುವಕರ ಮೇಲೆ ಅಗ್ನಿಪಥ ಯೋಜನೆಯನ್ನು ಹೇರಿದ್ದಾರೆ. ಅವರ ಭವಿಷ್ಯವನ್ನು ನಾಶಪಡಿಸಿದ್ದಾರೆ. ಈಗ ಈ ಕುರಿತಾದ ಪ್ರಮುಖ ಮಾಹಿತಿಯನ್ನು ಬಹಿರಂಗವಾಗಿ ಹಂಚಿಕೊಳ್ಳಲು ನಿರಾಕರಿಸುತ್ತಿದ್ದಾರೆ’ಎಂದು ಖರ್ಗೆ ಕಿಡಿಕಾರಿದ್ದಾರೆ.

ಸೇನೆಯಲ್ಲಿ ಖಾಲಿ ಇರುವ ಅಧಿಕಾರಿಗಳು, ಯೋಧರು, ಜೆಒಸಿ, ವೈದ್ಯಕೀಯ ಅಧಿಕಾರಿಗಳ ಹುದ್ದೆಗಳ ಕುರಿತಾದ ಪ್ರಮುಖ ಮಾಹಿತಿಗಳನ್ನು ಮೋದಿ ಸರ್ಕಾರ ಕಳೆದ ಕೆಲ ವರ್ಷಗಳಿಂದ ಆಗಿಂದ್ದಾಗ್ಗೆ ಪ್ರಕಟಿಸುತ್ತಿದೆ ಎಂದು ಖರ್ಗೆ ಹೇಳಿದ್ದಾರೆ.

‘ಈಗ ಏಕೆ ಇದ್ದಕ್ಕಿದ್ದಂತೆ ಈ ಕುರಿತಾದ ಮಾಹಿತಿ ಹಂಚಿಕೊಳ್ಳಲು ನೀವು ಹಿಂದೇಟು ಹಾಕುತ್ತಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಹಳಷ್ಟು ಹುದ್ದೆಗಳ ಖಾಲಿ ಕುರಿತಾದ ಈ ಮಾಹಿತಿಯು ಅಗ್ನಿಪಥ ಯೋಜನೆಯ ಮೇಲೆ ಮತ್ತಷ್ಟು ಪ್ರಶ್ನೆಗಳನ್ನು ಎತ್ತಲಿದೆ ಎಂದು ನೀವು ಭಯಪಡುತ್ತಿರುವಿರೇ? ಕೆಟ್ಟ ಆಲೋಚನೆ ಇಟ್ಟುಕೊಂಡು ಏಕಪಕ್ಷೀಯವಾಗಿ ಈ ಯೋಜನೆಯನ್ನು ಸಶಸ್ತ್ರ ಪಡೆಗಳ ಮೇಲೆ ಹೇರಿದ್ದೀರಿ’ಎಂದು ದೂರಿದ್ದಾರೆ.

2023ರ ಮಾರ್ಚ್ ತಿಂಗಳಲ್ಲಿ ಮೋದಿ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಸಶಸ್ತ್ರ ಪಡೆಯಲ್ಲಿ 1.55 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ರಾಷ್ಟ್ರೀಯ ಭದ್ರತೆ ಅತಿಮುಖ್ಯ. ನೈಜ ರಾಷ್ಟ್ರೀಯ ಹಿತಾಸಕ್ತಿಯು ಸಶಸ್ತ್ರ ಪಡೆಯಲ್ಲಿ ನಿಜವಾಗಿ ಖಾಲಿ ಇರುವ ಹುದ್ದೆಗಳ ಮಾಹಿತಿ ಬಹಿರಂಗಕ್ಕೆ ಕೋರುತ್ತದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT