ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ಸೇಬು ಕೊಯ್ಲಿಗೆಂದು ಕಾಶ್ಮೀರಕ್ಕೆ ಬಂದವರು ಉಗ್ರರ ಗುಂಡಿಗೆ ಬಲಿಯಾದರು

Last Updated 30 ಅಕ್ಟೋಬರ್ 2019, 3:40 IST
ಅಕ್ಷರ ಗಾತ್ರ

ಕಾಶ್ಮೀರವೆಂದರೆ ಸೇಬಿನ ನೆನಪು ಬರುವುದು ತೀರಾ ಸಹಜ. ಕಣಿವೆ ರಾಜ್ಯದ ಸೇಬಿಗೆ ವಿಶ್ವದೆಲ್ಲೆಡೆ ಬೇಡಿಕೆ ಇದೆ. ಇದು ಕಾಶ್ಮೀರದ 35 ಲಕ್ಷ ಜನರಿಗೆ ನೇರವಾಗಿ ಅನ್ನ ಕೊಡುವ ಬೆಳೆ. ಅಕ್ಟೋಬರ್ ತಿಂಗಳುಕಾಶ್ಮೀರದಲ್ಲಿ ಸೇಬು ಕೊಯ್ಲು ಚುರುಕಾಗಿ ನಡೆಯಬೇಕಾದ, ಕಣಿವೆಯತ್ತ ದೇಶದ ವಿವಿಧೆಡೆಯಿಂದ ಟ್ರಕ್‌ಗಳು ಧಾವಿಸಬೇಕಾದ, ಬೆಳೆಗಾರರ ಕೈಲಿ ಕಾಂಚಾಣ ಝಣಝಣ ಎನ್ನಬೇಕಾದಕಾಲ. ಆದರೆ ಈ ಬಾರಿ ಮಾತ್ರ ಕಾಶ್ಮೀರದ ಗ್ರಾಮೀಣ ಪ್ರದೇಶದಲ್ಲಿ ನಿಸ್ತೇಜ ವಾತಾವರಣ ಕಂಡು ಬರುತ್ತಿದೆ.

ಹತ್ತಾರು ವರ್ಷಗಳಿಂದ ಕಾಶ್ಮೀರದ ಗ್ರಾಮೀಣ ಪ್ರದೇಶಗಳ ಸೇಬು ಬೆಳೆಗಾರರೊಂದಿಗೆ ಒಡನಾಟ ಇಟ್ಟುಕೊಂಡಿರುವ ವ್ಯಾಪಾರಿಗಳು ಪ್ರತಿ ವರ್ಷವೂ ಕೊಯ್ಲಿನ ಹಂಗಾಮಿನಲ್ಲಿ ಕೂಲಿಕಾರ್ಮಿಕರೊಂದಿಗೆ ಲಾರಿಗಳಲ್ಲಿ ಕಾಶ್ಮೀರಕ್ಕೆ ಹೋಗುವುದು ವಾಡಿಕೆ.ಸೇಬು ಕೊಯ್ಲಿನ ಜೊತೆಗೆ ಗುಣಮಟ್ಟಕ್ಕೆ ಅನುಗುಣವಾಗಿ ಬೆಳೆವಿಂಗಡಿಸಿ ಬಾಕ್ಸ್‌ಗಳಿಗೆ ತುಂಬಿ, ಲಾರಿಗಳಿಗೆ ಲೋಡ್ ಮಾಡುವ ಕೆಲಸವನ್ನೂ ನಿರ್ವಹಿಸಿ, ರೈತರ ಕೈಗೆ ಹಣಕೊಟ್ಟು ಸೇಬಿನ ಲಾರಿಗಳನ್ನು ತಮ್ಮ ರಾಜ್ಯಗಳಿಗೆ ಕೊಂಡೊಯ್ಯುವುದು ಇವರ ಕೆಲಸದ ರೀತಿ.

ಆದರೆ ಈ ಬಾರಿ ಮಾತ್ರ ಕಾಶ್ಮೀರದಲ್ಲಿಇದಕ್ಕೆ ವ್ಯತಿರಿಕ್ತ ಪರಿಸ್ಥಿತಿ ಕಂಡುಬರುತ್ತಿದೆ. ಕಾಶ್ಮೀರದಗ್ರಾಮೀಣ ಪ್ರದೇಶಗಳಿಗೆ ಹೋಗಿ, ಬೆಳೆಗಾರರೊಂದಿಗೆ ವ್ಯಾಪಾರ ಕುದುರಿಸುವ ಉತ್ಸಾಹ ವ್ಯಾಪಾರಿಗಳಲ್ಲಿ ಬತ್ತಿ ಹೋಗಿದೆ. ‘ಕಾಶ್ಮೀರದಲ್ಲಿ ಎಲ್ಲವೂ ಚೆನ್ನಾಗಿದೆ, ಶಾಂತಿ ನೆಲೆಸಿದೆ’ ಎಂದು ಇಡೀ ದೇಶ ನಂಬುತ್ತಿರುವ ಹೊತ್ತಿನಲ್ಲಿ ಕಣಿವೆ ರಾಜ್ಯದ ಹಳ್ಳಿಗಳುಸ್ಮಶಾನ ಮೌನಕ್ಕೆ ತಿರುಗುತ್ತಿವೆ. ಸೇಬು ಕೊಯ್ಲು ಮಾಡಲು ಬಂದಿದ್ದ ಕೂಲಿಕಾರ್ಮಿಕರು ಜೀವಭೀತಿಯಿಂದಖಾಲಿ ಲಾರಿಗಳಲ್ಲಿಯೇ ತವರು ರಾಜ್ಯಗಳಿಗೆ ಹಿಂದಿರುಗುತ್ತಿದ್ದಾರೆ.

ಕಣಿವೆ ರಾಜ್ಯದ ಸೇಬು ವಹಿವಾಟಿನ ಒಟ್ಟು ಮೊತ್ತವನ್ನು₹ 10,000 ಕೋಟಿ ಎಂದು ಅಂದಾಜಿಸಲಾಗಿದೆ. ಕಾಶ್ಮೀರದಶೋಪಿಯಾನ್‌ ಜಿಲ್ಲೆ ಸೇಬು ಬೆಳೆಗೆ ಹೆಸರುವಾಸಿ. ಈ ಒಂದೇ ಜಿಲ್ಲೆಯಿಂದ ಒಂದು ಕೊಯ್ಲಿನ ಸಂದರ್ಭದಲ್ಲಿ ಉತ್ಪನ್ನ ಸಾಗಿಸಲು 7,500 ಟ್ರಕ್‌ಗಳು ಬೇಕು. ಜಿಲ್ಲೆಯ ಸ್ಥಳೀಯರ ಮಾಲೀಕತ್ವದಲ್ಲಿರುವುದು ಕೇವಲ 250 ಟ್ರಕ್‌ಗಳು ಮಾತ್ರ.

ಸೇಬು ಬೆಳೆಯುವ ಕುಗ್ಲಾಂ, ಅನಂತನಾಗ್, ಸೊಪೊರೆ, ಬಾರಾಮುಲ್ಲಾ, ಚರಾರಿ ಷರೀಫ್, ಪುಲ್ವಾಮಾ ಮತ್ತು ಪರಿಂಪೋರಾ ಪ್ರದೇಶಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಹೀಗಾಗಿಯೇ ಹೊರ ರಾಜ್ಯಗಳಿಂದ ವ್ಯಾಪಾರಿಗಳು ಬರದಿದ್ದರೆ ನಮ್ಮ ಪರಿಸ್ಥಿತಿ ಏನು ಎಂಬ ಆತಂಕ ಅಲ್ಲಿನಸೇಬು ಬೆಳೆಗಾರರಲ್ಲಿ ಮೂಡಿದೆ. ಮುಂದೇನಾಗುತ್ತೋ ಎಂಬ ಭೀತಿ ಮನೆಮಾಡಿದೆ.

ಏಕೆ ಹೀಗೆ? ಏನಾಗುತ್ತಿದೆ ಕಾಶ್ಮೀರದಲ್ಲಿ?

ಉಗ್ರರ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಟ್ರಕ್ ಚಾಲಕ ಜೀವನ್‌ ಸಿಂಗ್‌ ಕಾಶ್ಮೀರದ ರಾಜಧಾನಿ ಶ್ರೀನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ (ರಾಯಿಟರ್ಸ್‌ ಚಿತ್ರ).
ಉಗ್ರರ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಟ್ರಕ್ ಚಾಲಕ ಜೀವನ್‌ ಸಿಂಗ್‌ ಕಾಶ್ಮೀರದ ರಾಜಧಾನಿ ಶ್ರೀನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ (ರಾಯಿಟರ್ಸ್‌ ಚಿತ್ರ).

ವ್ಯಾಪಾರಿಗಳು, ಕೂಲಿಕಾರ್ಮಿಕರಲ್ಲಿಹೆದರಿಕೆಯ ಅಲೆ

ಕೇಂದ್ರ ಸರ್ಕಾರವುಕಳೆದ ಆಗಸ್ಟ್‌ 5ರಂದು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿ, ಲಡಾಖ್‌ ಪ್ರಾಂತ್ಯವನ್ನು ಪ್ರತ್ಯೇಕಿಸಿದ್ದು ಮತ್ತು ಇಡಿಯಾಗಿ ಎರಡೂ ಪ್ರಾಂತ್ಯಗಳನ್ನುಕೇಂದ್ರದಾಳಿತ ಪ್ರದೇಶವೆಂದು ಘೋಷಿಸಿದ್ದು ನಿಮಗೆ ನೆನಪಿರಬಹುದು. ಇದಾದ ನಂತರ ಕಣಿವೆ ರಾಜ್ಯದಲ್ಲಿ ನಿಷೇಧಾಜ್ಞೆ, ಸಂವಹನ ನಿರ್ಬಂಧ ಇದ್ದೇ ಇದೆ. ಉಗ್ರಗಾಮಿ ಚಟುವಟಿಕೆ, ಹಿಂಸಾಚಾರಗಳು ಹೆಚ್ಚಾಗಿ ವರದಿಯಾಗಲಿಲ್ಲ.

ಆದರೆ ಈಗ, ಸೇಬು ಕೊಯ್ಲಿನ ಹಂಗಾಮಿನಲ್ಲಿ ಉಗ್ರರು ತಮ್ಮ ಕರಾಮತ್ತು ತೋರುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಪಂಜಾಬ್‌ನ ಹಣ್ಣಿನ ವ್ಯಾಪಾರಿಗಳಾದ ಚರಣ್‌ಜೀತ್‌ ಸಿಂಗ್ ಮತ್ತು ಸಂಜಯ್‌ ಚರಯ 10 ಕೂಲಿ ಕಾರ್ಮಿಕರೊಂದಿಗೆ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿತಮ್ಮ ಗುರುತಿನ ಸೇಬು ಬೆಳೆಗಾರರ ತೋಟಗಳಿಗೆ ಬಂದಿದ್ದರು. ಈ ವೇಳೆ,ಅ.16ರಂದು ಟ್ರೆಂಜ್‌ ಗ್ರಾಮದ ಸಮೀಪನಾಲ್ವರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಇವರಿಬ್ಬರ ಮೇಲೆ ಗುಂಡಿನ ದಾಳಿ ಮಾಡಿದ್ದರು.ಸ್ಥಳೀಯ ಸೇಬು ಬೆಳೆಗಾರರು ಗಾಯಾಳುಗಳನ್ನು ತಕ್ಷಣ ಪುಲ್ವಾಮಾ ಆಸ್ಪತ್ರೆಗೆ ದಾಖಲಿಸಿದರು.

ಮಾರ್ಗಮಧ್ಯೆಯೇ ಸಿಂಗ್‌ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಸಂಜಯ್ ಅವರನ್ನು ಶ್ರೀನಗರದ ಎಸ್‌ಎಂಎಚ್‌ಎಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ‘ತೀವ್ರವಾಗಿ ಗಾಯಗೊಂಡಿರುವ ನನ್ನ ಮಗ ಮೊದಲಿನಂತೆ ಆಗಲು ಕನಿಷ್ಠ 6 ತಿಂಗಳು ಆಗುತ್ತೆ ಎನ್ನುತ್ತಾರೆ ವೈದ್ಯರು’ ಎನ್ನುವುದುಸಂಜಯ್ ಅವರ ತಂದೆ ಜಸ್ವಾಲ್ ಚರಯ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆ. ತಮ್ಮನ್ನು ಕರೆತಂದವರ ಮೇಲೆ ನಡೆದ ಗುಂಡಿನ ದಾಳಿಯಿಂದಹೆದರಿದ ಕಾರ್ಮಿಕರು ಸಿಕ್ಕ ವಾಹನಗಳನ್ನು ಹತ್ತಿ ಸ್ವಂತ ಊರುಗಳಿಗೆ ಹೊರಟುಬಿಟ್ಟರು.

‘ಈ ಪ್ರಕರಣದ ತನಿಖೆ ವೇಳೆ ಪೊಲೀಸರು ತಪ್ಪು ಮಾಡಿದ್ದಾರೆ’ ಎನ್ನುವುದು ಜಸ್ಪಾಲ್ ಅವರ ಅಭಿಪ್ರಾಯ.

‘ತನ್ನ ಜೀವ ಒತ್ತೆಯಿಟ್ಟುಸಂಜಯ್‌ನ ಜೀವ ಕಾಪಾಡಿದ ಸ್ಥಳೀಯ ಸೇಬು ಬೆಳೆಗಾರರನ್ನು ಪೊಲೀಸರು ಠಾಣೆಗೆ ಕರೆಸಿಕೊಂಡಿದ್ದಾರೆ. ಅವರು ಇಂಥ ತಪ್ಪು ಮಾಡಬಾರದಿತ್ತು. ತನ್ನ ಜೀವ ಒತ್ತೆ ಇಟ್ಟು ನನ್ನ ಮಗನ ಜೀವ ಕಾಪಾಡಿದ ರೈತನ ಹೆಸರು ಬಹಿರಂಗವಾದರೆ ಅವನ ಜೀವಕ್ಕೆ ಆಪತ್ತು ಬರುತ್ತದೆ’ ಎನ್ನುತ್ತಾರೆ ಅವರು.

ಕಾಶ್ಮೀರದ ಸೇಬು ಬೆಳೆಗಾರರು ಎದುರಿಸುತ್ತಿರುವಅಸಹಾಯಕ ಪರಿಸ್ಥಿತಿಯ ಬಗ್ಗೆ ಇಂಥ ಪಕ್ವ ಜ್ಞಾನ ಬರಲು ಅವರ ಕುಟುಂಬಕ್ಕೆಹಲವು ವರ್ಷಗಳಿಂದ ಇರುವ ಕಾಶ್ಮೀರಿ ಜನರ ಒಡನಾಟವೇ ಕಾರಣ.

ಕಾಶ್ಮೀರದ ಅನಂತನಾಗ್ ಜಿಲ್ಲೆಯ ಸೇಬಿನ ಬಾಕ್ಸ್‌ ಹೊತ್ತೊಯ್ಯುತ್ತಿರುವ ಕಾರ್ಮಿಕ (ರಾಯಿಟರ್ಸ್‌ ಚಿತ್ರ)
ಕಾಶ್ಮೀರದ ಅನಂತನಾಗ್ ಜಿಲ್ಲೆಯ ಸೇಬಿನ ಬಾಕ್ಸ್‌ ಹೊತ್ತೊಯ್ಯುತ್ತಿರುವ ಕಾರ್ಮಿಕ (ರಾಯಿಟರ್ಸ್‌ ಚಿತ್ರ)

ಗೋಗರೆಯುತ್ತಿದ್ದಾರೆ ಸ್ಥಳೀಯರು

ಸೇಬು ವ್ಯಾಪಾರಿಗಳಾದ ಚರಣ್‌ಜೀತ್‌ ಸಿಂಗ್ ಮತ್ತು ಸಂಜಯ್ ಚರಯ ಅವರ ಮೇಲೆ ದಾಳಿ ನಡೆಯುವ ಕೆಲವೇ ಗಂಟೆಗಳ ಮೊದಲು (ಅ.16ರಂದು)ಪುಲ್ವಾಮಾದ ನೆಹಾಮಾ ಬಳಿ ಇಟ್ಟಿಗೆಗೂಡಿನ ಕಾರ್ಮಿಕ ಸೇಥಿ ಕುಮಾರ್‌ ಸಾಗರ್‌ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅದಕ್ಕೆ ಒಂದುದಿನ ಮೊದಲು (ಅ.14) ರಾಜಸ್ಥಾನದಿಂದ ಬಂದಿದ್ದ ಚಾಲಕ ಷರೀಫ್ ಖಾನ್ಅವರನ್ನು ಕೊಂದು, ಲಾರಿಗೆ ಬೆಂಕಿ ಹಚ್ಚಲಾಗಿತ್ತು.

ಶೋಪಿಯಾನ್‌ ಜಿಲ್ಲೆ ಸುಗಾನ್ ಗ್ರಾಮದ ಸೇಬಿನ ತೋಪಿನಲ್ಲಿ ದಿಢೀರ್‌ ಎಂದು ಪ್ರತ್ಯಕ್ಷರಾದ ಅಪರಿಚಿತ ಬಂದೂಕುಧಾರಿಗಳು ಅಲ್ಲಿಕೆಲಸ ಮಾಡುತ್ತಿದ್ದ ಷರೀಫ್‌ ಖಾನ್ಮತ್ತು ಅವನ ಒಡೆಯ ಮೊಹಮದ್‌ ಅಕ್ರಮ್‌ನನ್ನು ಲಾರಿಯಲ್ಲಿ ಕುಳಿತುಕೊಳ್ಳಿ ಎಂದು ಕರೆದೊಯ್ದರು. ಸ್ಥಳೀಯರು ಅವರ ಜೀವ ಉಳಿಸಿ ಎಂದು ಗೋಗರೆದರೂ ಬಂದೂಕುಧಾರಿಗಳ ಮನಸ್ಸು ಕರಗಲಿಲ್ಲ. ಗುಂಡಿನ ದಾಳಿಯಿಂದ ಷರೀಫ್‌ ಖಾನ್‌ ಸ್ಥಳದಲ್ಲಿಯೇ ಮೃತಪಟ್ಟರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದು ಪಡಿಸಿದ್ದು ಆಗಸ್ಟ್‌ 5. ಅದಾದ ನಂತರ ಸುಮಾರು ಎರಡು ತಿಂಗಳು ಕಾಶ್ಮೀರ ಕಣಿವೆಯಲ್ಲಿ ಹೇಳಿಕೊಳ್ಳುವಂಥ ಹಿಂಸಾಚಾರದ ಘಟನೆಗಳು ವರದಿಯಾಗಿರಲಿಲ್ಲ. ಆದರೆ ಉಗ್ರಗಾಮಿಗಳು, ಪ್ರತ್ಯೇಕತಾವಾದಿಗಳು ಮತ್ತು ಪಾಕ್‌ ಪರ ಸಹಾನುಭೂತಿಯುಳ್ಳವರು ಕಾಶ್ಮೀರದ ಸೇಬುಗಳನ್ನು ಭಾರತದ ಇತರ ರಾಜ್ಯಗಳ ವ್ಯಾಪಾರಿಗಳಿಗೆ ಮಾರಾಟ ಮಾಡಬಾರದು ಎಂದು ಒತ್ತಡ ಹೇರುತ್ತಲೇ ಇದ್ದರು. ಈ ಒತ್ತಡಕ್ಕೆ ಹಿಂಸಾರೂಪ ಸಿಕ್ಕಿದ್ದು ಅ.14ರಂದು ರಾಜಸ್ಥಾನದ ಲಾರಿ ಚಾಲಕ ಷರೀಫ್‌ ಖಾನ್ ಹತ್ಯೆಯ ನಂತರ.

ಈ ಘಟನೆಯ ನಂತರ ಕಾಶ್ಮೀರಕ್ಕೆ ಬರಬೇಕಿದ್ದ ರಾಜಸ್ಥಾನದ ಹಲವು ವ್ಯಾಪಾರಿಗಳು ತಮ್ಮ ನಿರ್ಧಾರ ಕೈಬಿಟ್ಟರು.ಹಲವು ಚಾಲಕರು ಟ್ರಕ್‌ಗಳು ಲೋಡ್ ಆಗುವುದಕ್ಕೂ ಕಾಯದೆ, ಖಾಲಿ ಟ್ರಕ್‌ಗಳಲ್ಲಿಯೇ ಕೂಲಿ ಕಾರ್ಮಿಕರನ್ನು ಕರೆದುಕೊಂಡುತಮ್ಮ ರಾಜ್ಯಗಳಿಗೆ ಹಿಂದಿರುಗಿದರು.

ಕಾಶ್ಮೀರ ಬದಲಾಗಿದೆ ಸ್ವಾಮಿ

‘ನಾನು 10 ವರ್ಷಗಳಿಂದ ಕಾಶ್ಮೀರಕ್ಕೆ ಬರುತ್ತಿದ್ದೇನೆ. ಇಂಥ ಕಷ್ಟ ಎಂದೂ ಅನುಭವಿಸಿರಲಿಲ್ಲ.ಕಾಶ್ಮೀರ ಈಗ ಸಂಪೂರ್ಣ ಬೇರೆಯೇ ಆಗಿ ಕಾಣಿಸುತ್ತಿದೆ. ನಾನು ಜೀವಂತವಾಗಿ ವಾಪಸ್ ಹೋಗ್ತೀನಿ ಅನ್ನೋ ಧೈರ್ಯವೇ ಇಲ್ಲ. ಕಳೆದ ಎರಡು ತಿಂಗಳಿನಿಂದ ರಸ್ತೆ ಬದಿ ಹೊಟೆಲ್‌ಗಳು ಬಂದ್ ಆಗಿವೆ. ಊಟ–ತಿಂಡಿಗೂ ಪರದಾಡಬೇಕಾದ ಸ್ಥಿತಿ ಬಂದಿದೆ’ ಎಂದು ಪಂಜಾಬ್‌ನ ಹೋಶಿಯಾಂಪುರದಿಂದ ಬಂದಿದ್ದ ಟ್ರಕ್ ಚಾಲಕರೊಬ್ಬರು ಪ್ರಶ್ನಿಸಿದರು.

ತೋಟದಲ್ಲಿ ಬೆಳೆಯಿದ್ದರೂ, ಕೊಯ್ಲು ಮಾಡಲು ಮತ್ತು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಿಸಾನ್‌ ಕ್ರೆಡಿಟ್ ಕಾರ್ಟ್‌ ಮೂಲಕ ಮಾಡಿರುವ ಸಾಲಗಳನ್ನು ಸರ್ಕಾರ ತಕ್ಷಣ ಮನ್ನಾ ಮಾಡಬೇಕು ಎಂದು ಕಾಶ್ಮೀರದ ರೈತರು ಒತ್ತಾಯಿಸುತ್ತಿದ್ದಾರೆ. ಹೆದ್ದಾರಿ ಸಂಚಾರಕ್ಕೆ ವಿಪರೀತ ನಿರ್ಬಂಧಗಳನ್ನು ವಿಧಿಸಿರುವುದರಿಂದ ಲೋಡ್‌ ಆಗಿರುವ ಲಾರಿಗಳಲ್ಲಿಯೂಸೇಬುಗಳು ಹಾಳಾಗುತ್ತಿವೆ ಎಂದು ರೈತರು ಹೇಳುತ್ತಿದ್ದಾರೆ.

ಉಗ್ರರ ದೊಡ್ಡ ಸಂಚು

ಹೊರ ರಾಜ್ಯಗಳಿಂದ ಬಂದ ಸೇಬು ವ್ಯಾಪಾರಿಗಳ ಹತ್ಯೆಯ ಹಿಂದೆ ದೊಡ್ಡ ಸಂಚು ಇದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳುಗೆಡವಲು ದುಷ್ಕರ್ಮಿಗಳು ನಡೆಸುತ್ತಿರುವ ಪ್ರಯತ್ನವಿದುಎಂದು ಸರ್ಕಾರಿ ಅಧಿಕಾರಿಗಳು ಹೇಳುತ್ತಾರೆ.

‘ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಗೂ, ಇಂಥ ಹತ್ಯೆಗಳಿಗೂ ಸಂಬಂಧವಿಲ್ಲ’ ಎನ್ನುವುದು ಕಣಿವೆ ರಾಜ್ಯದ ಸರ್ಕಾರಿ ಅಧಿಕಾರಿಗಳ ವಾದ. ‘370ನೇ ವಿಧಿ ರದ್ದತಿಯನ್ನು ಪ್ರಸ್ತಾಪಿಸುವ ಮೂಲಕ ಉಗ್ರರು ತಮ್ಮ ಕೃತ್ಯಕ್ಕೆ ಸ್ಥಳೀಯರ ಬೆಂಬಲ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ’ ಎನ್ನುವುದು ರಾಜ್ಯಪಾಲರ ಸಲಹೆಗಾರ ಕೆ.ವಿಜಯ್‌ಕುಮಾರ್ ಹೇಳುತ್ತಾರೆ. ‘ರಾಜ್ಯದಲ್ಲಿ ಸಹಜ ಸ್ಥಿತಿ ನೆಲೆಗೊಂಡರೆ ಶಾಂತಿ ಮತ್ತು ಅಭಿವೃದ್ಧಿ ಸಾಧ್ಯವಾಗುತ್ತೆ. ಇದನ್ನು ಭಯೋತ್ಪಾದಕರು ಹೇಗೆ ಸಹಿಸಲು ಸಾಧ್ಯ?’ ಎನ್ನವುದು ಅವರ ಮರುಪ್ರಶ್ನೆ.

‘ಇವರು (ಉಗ್ರರು) ಏಕೆ ಹೀಗೆ ಮಾಡುತ್ತಿದ್ದಾರೆ ಅಂತ ನಮಗೆ ಚೆನ್ನಾಗಿ ಗೊತ್ತಿದೆ. ಅವರು ಅತ್ಯಂತ ಅಪಾಯಕಾರಿ ಆಟ ಆಡುತ್ತಿದ್ದಾರೆ. ದೀರ್ಘಾವಧಿಯಲ್ಲಿ ಇದರಿಂದ ಹೆಚ್ಚೇನೂ ಪ್ರಯೋಜನವಾಗುವುದಿಲ್ಲ. ಈ ಕಾಶ್ಮೀರದ ಸೇಬು ಬೆಳೆಗಾರರಿಗೆ ಹೊರ ರಾಜ್ಯಗಳಟ್ರಕ್‌ ಚಾಲಕರೊಂದಿಗೆ20 ವರ್ಷಗಳಿಗೂ ಹೆಚ್ಚು ಸಮಯದಿಂದ ಒಡನಾಟವಿದೆ.ಈ ಚಾಲಕರು ಮತ್ತು ಕೂಲಿಕಾರ್ಮಿಕರು ಸೇಬು ಬೆಳೆಗಾರರ ಮನೆಗಳಲ್ಲಿಯೇ ಉಳಿದುಕೊಳ್ಳುತ್ತಾರೆ. ಒಬ್ಬರನ್ನು ಒಬ್ಬರು ನಂಬುತ್ತಾರೆ. ಉಗ್ರರ ಇಂಥ ಕೃತ್ಯಗಳು ಈ ನಂಬಿಕೆಯನ್ನು, ಸಂಬಂಧವನ್ನು ಹಾಳು ಮಾಡುತ್ತೆ ಎಂದು ನಾನು ಅಂದುಕೊಳ್ಳುವುದಿಲ್ಲ. ಇಂಥ ದಾಳಿಗಳನ್ನು ಹೇಗೆ ನಿರ್ವಹಿಸಬೇಕು ಎಂಬುದು ಸರ್ಕಾರಕ್ಕೆ ಗೊತ್ತಿದೆ’ ಎನ್ನುತ್ತಾರೆ ಅವರು.

‘ಕಾಶ್ಮೀರದಲ್ಲಿ ಏನೆಲ್ಲಾ ಆಗುತ್ತೆ ಎಂದು ಅವರು (ಪಾಕ್ ಸೇನೆ ಮತ್ತು ಉಗ್ರರು)ಅಂದುಕೊಂಡಿದ್ದರೋ ಅಂಥದ್ದು ಆಗಿಲ್ಲ. ರಾಜ್ಯಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಭಯೋತ್ಪಾದಕರು ಮತ್ತು ಪಾಕಿಸ್ತಾನಕ್ಕೆ ಇದು ಬೇಕಿಲ್ಲ. ಹೀಗಾಗಿಯೇ ಅವರು ಹೊರರಾಜ್ಯಗಳಿಂದ ಬಂದವರನ್ನು ಗುರಿಯಾಗಿಸಿ ದಾಳಿ ಮಾಡುತ್ತಿದ್ದಾರೆ. ಸಾಮಾನ್ಯ ಜನರು ದೊಡ್ಡಮಟ್ಟದಲ್ಲಿ ಮನೆಗಳಿಂದ ಹೊರಗೆ ಬಂದು ಪ್ರತಿಭಟನೆಗಳನ್ನು ನಡೆಸಲಿ ಎಂದು ಭಯೋತ್ಪಾದಕರು ಪ್ರಚೋಚಿಸುತ್ತಿದ್ದಾರೆ. ಅಂಥ ಸಮಯಕ್ಕಾಗಿ ಕಾಯುತ್ತಿದ್ದಾರೆ’ಎಂದು ಹಿರಿಯ ಸೇನಾಧಿಕಾರಿಯೊಬ್ಬರು ಹೇಳುತ್ತಾರೆ.

ಯಾರ ತಾಳಕ್ಕೆ ಯಾರು ಕುಣೀತಿದ್ದಾರೆ?

‘ಕಾಶ್ಮೀರದಲ್ಲಿ ಶಾಂತಿ ನೆಲೆಗೊಳ್ಳುವುದು ಪಾಕಿಸ್ತಾನಕ್ಕೆ ಬೇಕಿಲ್ಲ. ಅದಕ್ಕೆ ಪೂರಕವಾಗಿ ಮಾಡುವ ಯಾವುದೇ ಕೆಲಸವನ್ನು ಅದು ಪ್ರೋತ್ಸಾಹಿಸುತ್ತೆ’ ಎನ್ನುವುದು ಸೇನೆಯ ವ್ಯಾಖ್ಯಾನ.

‘ಜಮ್ಮು ಮತ್ತು ಕಾಶ್ಮೀರದಲ್ಲಿ 50,000 ದೇಗುಲ ನಿರ್ಮಿಸುವುದು, ಇತರರ ರಾಜ್ಯಗಳ ಶ್ರೀಮಂತರನ್ನುಭೂಖರೀದಿಗೆ ಆಹ್ವಾನಿಸುವುದು ಮತ್ತು ಕಾಶ್ಮೀರದ ಸಾಂಸ್ಕೃತಿಕಚಹರೆ ಬದಲಿಸುವ ಪ್ರಯತ್ನಗಳಿಗೆ ಪೂರಕ ವಾತಾವರಣ ನಿರ್ಮಾಣವಾದರೆನೀವು (ಭಾರತೀಯರು)ಪಾಕಿಸ್ತಾನದ ತಾಳಕ್ಕೆ ಕುಣಿಯುತ್ತಿದ್ದೀರಿ ಎಂದು ಅರ್ಥ’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಹಿರಿಯ ಸೇನಾಧಿಕಾರಿ.

‘ಕಾಶ್ಮೀರಕ್ಕೆ ಬರುವ ಹೊರ ರಾಜ್ಯಗಳ ವ್ಯಾಪಾರಿಗಳು, ಕೂಲಿ ಕಾರ್ಮಿಕರ ಕೊಲೆಗಳು ಮುಂದುವರಿದರೆಬೇರೆ ರಾಜ್ಯದವರಿಗೆ ಇಲ್ಲಿ ಉಳಿಗಾಲವಿಲ್ಲ ಎನ್ನುವ ಸಂದೇಶ ರವಾನೆಯಾಗುತ್ತದೆ. ಮಾತ್ರವಲ್ಲಿ ಕಾಶ್ಮೀರದ ಬಗ್ಗೆ ಭಾರತೀಯರ ಮನದಲ್ಲಿರುವ ಭಾವನೆಯೇ ಬದಲಾಗುತ್ತದೆ. ಸದ್ಯದ ಮಟ್ಟಿಗೆಪಾಕಿಸ್ತಾನ ಮತ್ತು ಉಗ್ರಗಾಮಿಗಳು ದೊಡ್ಡದೊಂದು ಅಪಾಯಕಾರಿ ಆಟ ಆರಂಭಿಸಿದ್ದಾರೆ. ಅದನ್ನು ಶೀಘ್ರ ಮಟ್ಟಹಾಕುತ್ತೇವೆ’ ಎನ್ನುತ್ತಾರೆ ಅವರು.

(ಮಾಹಿತಿ: ವಿವಿಧ ವೆಬ್‌ಸೈಟ್‌ಗಳು)

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT