ಕೊಚ್ಚಿ: ಕುವೈತ್‌ನಿಂದ ಕೇರಳದ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆಯೊಬ್ಬರ ಬಳಿ ಕಸ್ಟಮ್ಸ್ ಅಧಿಕಾರಿಗಳು ಪೇಸ್ಟ್ ರೂಪದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಆನಂದವಲ್ಲಿ ವಿಜಯಕುಮಾರ್ ಎಂಬ ಪ್ರಯಾಣಿಕರನ್ನು ತಪಾಸಣೆ ನಡೆಸಿದ ಕಸ್ಟಮ್ಸ್ ಸಿಬ್ಬಂದಿ, ಆಕೆಯ ಗುದನಾಳದೊಳಗೆ ಬಚ್ಚಿಟ್ಟುಕೊಂಡಿದ್ದ ₹90 ಲಕ್ಷ ಮೌಲ್ಯದ 1.70 ಕೆಜಿ ತೂಕದ, ಪೇಸ್ಟ್ ರೂಪದ ಚಿನ್ನವನ್ನು ಹೊಂದಿದ್ದ 4 ಕ್ಯಾಪ್ಸುಲ್ ಆಕಾರದ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್‌ನಲ್ಲಿ ಸುಮಾರು 1.4 ಕೆ.ಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ ಆರೋಪದ ಮೇರೆಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಸಿಬ್ಬಂದಿಯನ್ನು ಕೊಚ್ಚಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದರು.
ಬಹರೇನ್– ಕೊಯಿಕೋಡ್– ಕೊಚ್ಚಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಸಿಬ್ಬಂದಿಯನ್ನು ಬಂಧಿಸಿದ್ದ ಅಧಿಕಾರಿಗಳು, ಆತ ತನ್ನ ಎರಡೂ ತೋಳಿನಲ್ಲಿ ಸುತ್ತಿಕೊಂಡಿದ್ದ ಚಿನ್ನವನ್ನು ವಶಕ್ಕೆ ಪಡೆದಿದ್ದರು.
ಜುಲೈನಲ್ಲಿ ವಿದೇಶಗಳಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ 2 ಪ್ರತ್ಯೇಕ ಪ್ರಕರಣಗಳನ್ನು ಭೇದಿಸಿದ್ದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದರು.
ಬಂಧಿತರಿಂದ ಸುಮಾರು ₹48 ಲಕ್ಷ ಮೌಲ್ಯದ 783 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಬ್ಯಾಂಕಾಕ್ ನಿಂದ ಬಂದಿದ್ದ ಮೂವರು ಆರೋಪಿಗಳು ಚಿನ್ನದ ಸರಗಳನ್ನು ಮುಚ್ಚಿಟ್ಟುಕೊಂಡಿದ್ದರು. ಅವರ ಬಳಿಯಿದ್ದ ₹31.47 ಲಕ್ಷ ಮೌಲ್ಯದ 516 ಗ್ರಾಂನಷ್ಟು ಚಿನ್ನ ವಶಕ್ಕೆ ಪಡೆಯಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಟ್ರಾಲಿಬ್ಯಾಗ್‌ನಲ್ಲಿ ದುಬೈನಿಂದ ರೇಡಿಯಂ ಲೇಪಿತ ಚಿನ್ನದ ಸರ, ತುಂಡು ತಂದಿದ್ದ ಪ್ರಯಾಣಿಕನನ್ನು ಬಂಧಿಸಿದ್ದು, ಆತನಿಂದ ₹16.39 ಲಕ್ಷ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.