ನವದೆಹಲಿ: ದೆಹಲಿ ಸರ್ಕಾರ ಆಯೋಜಿಸುತ್ತಿರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಲು ಸಚಿವೆ ಅತಿಶಿ ಬದಲು, ಗೃಹ ಸಚಿವ ಕೈಲಾಶ್ ಗೆಹಲೋತ್ ಅವರ ಹೆಸರನ್ನು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೆನಾ ಅವರು ಅಂತಿಮಗೊಳಿಸಿದ್ದಾರೆ.
ಸರ್ಕಾರದಲ್ಲಿ ಹಲವು ಹಿರಿಯ ನಾಯಕರಿದ್ದರೂ, ಅವರನ್ನು ಕಡೆಗಣಿಸಿ ಸೆಕ್ಸೆನಾ ಅವರು ತಮ್ಮ ಆಯ್ಕೆ ಪ್ರಕಟಿಸಿದ್ದು, ಎಎಪಿ ಹಾಗೂ ಲೆಫ್ಟಿನೆಂಟ್ ಗವರ್ನರ್ ನಡುವೆ ಮತ್ತೊಂದು ಸುತ್ತಿನ ಜಟಾಪಟಿಗೆ ವೇದಿಕೆ ಸಿದ್ಧವಾದಂತಾಗಿದೆ.
‘ಸ್ವಾತಂತ್ರ್ಯ ದಿನದಂದು ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಲು ಲೆಫ್ಟಿನಂಟ್ ಗವರ್ನರ್ ಅವರು ಗೃಹ ಸಚಿವ ಕೈಲಾಶ್ ಗೆಹಲೋತ್ ಅವರ ಹೆಸರನ್ನು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಅಗತ್ಯವಿರುವ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತದೆ’ ಎಂದು ಸಕ್ಸೆನಾ ಅವರ ಕಾರ್ಯದರ್ಶಿ ಆಶಿಶ್ ಕುಂದ್ರ ತಿಳಿಸಿದ್ದಾರೆ.