ನವದೆಹಲಿ: ಕೇಂದ್ರ ಬಜೆಟ್ ಚರ್ಚೆಗೆ ಮುನ್ನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡಬೇಕು ಎಂಬ ವಿಷಯದ ಬಗ್ಗೆ ಆಡಳಿತಾರೂಢ ಎನ್ಡಿಎ ಹಾಗೂ ವಿಪಕ್ಷ ಇಂಡಿಯಾ ಮೈತ್ರಿಕೂಟ ಸೋಮವಾರವೂ ಒಮ್ಮತಕ್ಕೆ ಬರಲಿಲ್ಲ. ಇದರಿಂದಾಗಿ, ಸತತ ಆರನೇ ದಿನವೂ ಲೋಕಸಭಾ ಕಲಾಪಕ್ಕೆ ಭಂಗವಾಯಿತು.

ಜನರಲ್ ಎಂ.ಎನ್. ನರವಣೆ ಪುಸ್ತಕ ಸೇರಿದಂತೆ ವಿವಾದಾತ್ಮಕ ವಿಷಯಗಳನ್ನು ಪ್ರಸ್ತಾಪಿಸಲು ತಮಗೆ ಅವಕಾಶ ನೀಡುವ ಕುರಿತು ಒಪ್ಪಂದ ಆಗಿದೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು. ವಿಪಕ್ಷ ನಾಯಕನ ಹೇಳಿಕೆಯನ್ನು ಬಿಜೆಪಿ ತಳ್ಳಿ ಹಾಕಿದ್ದು, ಅಂತಹ ಯಾವುದೇ ಒಪ್ಪಂದ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ. ಇನ್ನೊಂದೆಡೆ, ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರದ್ದು ಪಕ್ಷಪಾತದ ಧೋರಣೆ ಎಂದು ಆರೋಪಿಸಿರುವ ಕಾಂಗ್ರೆಸ್, ಅವರನ್ನು ಪದಚ್ಯುತಗೊಳಿಸುವಂತೆ ಸಹಿ ಸಂಗ್ರಹಿಸಲು ಆರಂಭಿಸಿತು.

ಜನರಲ್ ನರವಣೆ ಅವರ ಪುಸ್ತಕದ ಕುರಿತು ರಾಹುಲ್ಗೆ ಮಾತನಾಡಲು ಅವಕಾಶ ನೀಡದ ಕಾರಣ ಕೆಳಮನೆಯಲ್ಲಿ ಗದ್ದಲ ಉಂಟಾಯಿತು. ಆದರೆ, ಕೇಂದ್ರ ಬಜೆಟ್ ಕುರಿತ ಚರ್ಚೆಗೆ ಅವಕಾಶ ಕಲ್ಪಿಸುವ ಸಂಬಂಧ ಲೋಕಸಭಾಧ್ಯಕ್ಷರು ವಿರೋಧ ಪಕ್ಷದ ನಾಯಕ ಮತ್ತು ಇತರ ನಾಯಕರೊಂದಿಗೆ ಒಂದೆರಡು ಸಭೆಗಳನ್ನು ನಡೆಸಿದರು.

ಬಜೆಟ್ ಚರ್ಚೆಗೆ ಮುನ್ನ ಕೆಲವೊಂದು ವಿಷಯಗಳನ್ನು ಪ್ರಸ್ತಾಪಿಸಲು ಲೋಕಸಭಾಧ್ಯಕ್ಷರ ಜತೆಗಿನ ಸಭೆಯಲ್ಲಿ ಒಪ್ಪಂದ ಆಗಿದೆ. ಆದರೆ, ಸಭಾಧ್ಯಕ್ಷರು ಈಗ ಒಪ್ಪಂದ ಉಲ್ಲಂಘಿಸಿದ್ದಾರೆ ಎಂದು ರಾಹುಲ್ ಅವರು ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಅಂತಹ ಯಾವುದೇ ಒಪ್ಪಂದದ ಬಗ್ಗೆ ನನಗೆ ತಿಳಿದಿಲ್ಲ. ಈ ಬಗ್ಗೆ ಕಾರ್ಯಸೂಚಿಯಲ್ಲೂ ಉಲ್ಲೇಖ ಇಲ್ಲ. ನೋಟಿಸ್ ಇಲ್ಲದೆ ಯಾವುದೇ ವಿಷಯ ಪ್ರಸ್ತಾಪಿಸಲು ಯಾರಿಗೂ ಅವಕಾಶ ನೀಡುವುದಿಲ್ಲ‘ ಎಂದು ಸಭಾಧ್ಯಕ್ಷರ ಪೀಠದಲ್ಲಿದ್ದ ಬಿಜೆಪಿ ಸದಸ್ಯೆ ಸಂಧ್ಯಾ ರೇ ಸ್ಪಷ್ಟಪಡಿಸಿದರು.

ಈ ಹಂತದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಧ್ಯಪ್ರವೇಶಿಸಿ, ‘ಅಂತಹ ಯಾವುದೇ ಒಪ್ಪಂದ ಆಗಿಲ್ಲ. ಸ್ಪೀಕರ್ ಬಗ್ಗೆ ರಾಹುಲ್ ಏನಾದರೂ ಹೇಳಲು ಬಯಸಿದರೆ, ಆಗ ಬಿರ್ಲಾ ಕೂಡ ಸದನದಲ್ಲಿ ಹಾಜರಿರಬೇಕು‘ ಎಂದರು. ‘ಸ್ಪೀಕರ್ ವಿರುದ್ಧ ಆರೋಪಗಳನ್ನು ಮಾಡಿದರೆ, ಸದನದ ಇತರ ನಾಯಕರಿಗೂ ಮಾತನಾಡಲು ಅವಕಾಶ ನೀಡಲಾಗುವುದು ಮತ್ತು ಸರ್ಕಾರವು ಪ್ರತಿಕ್ರಿಯಿಸಲಿದೆ‘ ಎಂದರು.

ಎರಡೂ ಕಡೆಯವರು ತಮ್ಮ ನಿಲುವಿನಿಂದ ಹಿಂದೆ ಸರಿಯದ ಕಾರಣ, ರೇ ಅವರು ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು. ಇದಕ್ಕೂ ಮುನ್ನ ಕಲಾಪವನ್ನು ಎರಡು ಸಲ ಮುಂದೂಡಲಾಗಿತ್ತು.

ಆ ಬಳಿಕ ರಾಹುಲ್ ಅವರು ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮತ್ತು ಡಿಎಂಕೆಯ ಟಿ.ಆರ್. ಬಾಲು ಅವರೊಂದಿಗೆ ಓಂಬಿರ್ಲಾ ಅವರನ್ನು ಭೇಟಿಯಾದರು. ಈ ವೇಳೆ, ಸದನದ ಬಿಕ್ಕಟ್ಟು ಬಗೆಹರಿಸುವ ಬಗ್ಗೆ ಚರ್ಚೆ ನಡೆಯಿತು.

‘ನರವಣೆ ಅವರ ಪುಸ್ತಕ, ಪುಸ್ತಕಗಳನ್ನು ಉಲ್ಲೇಖಿಸಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮಾಡಿರುವ ಆರೋಪಗಳು, ಎಂಟು ಸಂಸದರ ಅಮಾನತು ಮತ್ತು ಪ್ರಧಾನಿ ಮೇಲೆ ಸಂಸದರು ದಾಳಿಗೆ ಸಂಚು ರೂಪಿಸಿದ್ದರು ಎಂಬ ಆರೋಪಗಳ ಬಗ್ಗೆ ಪ್ರಸ್ತಾಪಿಸಲು ಅವಕಾಶ ನೀಡುವ ಬಗ್ಗೆ ಒಪ್ಪಂದ ಆಗಿದೆ‘ ಎಂದು ರಾಹುಲ್ ಗಾಂಧಿ ಸುದ್ದಿಗಾರರಿಗೆ ತಿಳಿಸಿದರು.

‘ಒಪ್ಪಂದ’ ಮಾತು: ಆರನೇ ದಿನವೂ ನಡೆಯದ ಚರ್ಚೆ l ಮೇಲ್ಮನೆಯಲ್ಲೂ ಗದ್ದಲ
ಕಿರಣ್ ರಿಜಿಜು, ಸಂಸದೀಯ ವ್ಯವಹಾರಗಳ ಸಚಿವ

ಭಯದಿಂದ ಪ್ರಧಾನಿ ಗೈರು: ರಾಹುಲ್

‘ಬಜೆಟ್ ಬಗ್ಗೆ ಚರ್ಚೆ ನಡೆಯಬೇಕೆಂದು ನಾವು ಉತ್ಸುಕರಾಗಿದ್ದೇವೆ. ಆದರೂ ಚರ್ಚೆ ನಡೆಸಲು ಸರ್ಕಾರ ಹೆದರುತ್ತಿದೆ. ನಾವು ಏನು ಹೇಳಲಿದ್ದೇವೆ ಎಂಬ ಭಯದಿಂದ ಮತ್ತು ನರವಣೆ ಅವರ ಪುಸ್ತಕವನ್ನು ಹಸ್ತಾಂತರಿಸುತ್ತೇವೆ ಎಂಬ ಭೀತಿಯಿಂದ ಪ್ರಧಾನಿ ಸದನಕ್ಕೆ ಬರಲಿಲ್ಲ’ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು.

‘ವಾಸ್ತವ ತುಂಬ ಸ್ಪಷ್ಟವಾಗಿದೆ. ಪ್ರಧಾನಿ ಅವರು ಸದನಕ್ಕೆ ಬರಲು ಹೆದರುತ್ತಿ ದ್ದಾರೆ. ಅದಕ್ಕೆ ಕಾರಣ ಸಂಸದರಲ್ಲ. ಅವರಿಗೆ ಸತ್ಯ ಎದುರಿಸಲು ಸಾಧ್ಯವಾಗುತ್ತಿಲ್ಲ. ಆ ಕಾರಣಕ್ಕೆ ಅವರು ಭಯಭೀತರಾಗಿದ್ದಾರೆ. ಪ್ರಧಾನಿ ಮೇಲೆ ನಮ್ಮ ಸಂಸದರು ದಾಳಿ ಮಾಡುವ ಪ್ರಶ್ನೆಯೇ ಇಲ್ಲ. ಅವರು ಬರಲು ಧೈರ್ಯ ಮಾಡಬೇಕು. ಯಾರಾದರೂ ಪ್ರಧಾನಿಯ ಮೇಲೆ ದಾಳಿ ಮಾಡುವುದಾಗಿ ಹೇಳಿದರೆ, ದಯವಿಟ್ಟು ಎಫ್ಐಆರ್ ದಾಖಲಿಸಿ, ಆ ವ್ಯಕ್ತಿಯನ್ನು ಬಂಧಿಸಿ ಎಂದು ನಾನು ಹೇಳಿದ್ದೇನೆ. ಸರ್ಕಾರ ಆ ಕೆಲಸವನ್ನೇಕೆ ಮಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.

ಬಿರ್ಲಾ ಪದಚ್ಯುತಿ ನಿರ್ಣಯಕ್ಕೆ ‘ಕೈ’ ಸಿದ್ಧತೆ

ಸದನದಲ್ಲಿ ಮಾತನಾಡಲು ರಾಹುಲ್ ಗಾಂಧಿಗೆ ಅವಕಾಶ ನಿರಾಕರಿಸಿದ್ದು, ಎಂಟು ಸಂಸದರ ಅಮಾನತು ಸೇರಿದಂತೆ ನಾಲ್ಕು ವಿಷಯಗಳಿಗೆ ಸಂಬಂಧಿಸಿದಂತೆ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸುವಂತೆ ನಿರ್ಣಯ ಮಂಡಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.

ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸಬೇಕು ಎಂದು ಕೋರಿ ನಿರ್ಣಯ ಮಂಡಿಸಲು ವಿಪಕ್ಷ ಮೈತ್ರಿಕೂಟದಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಸ್ಪೀಕರ್ ಅವರ ಪಕ್ಷಪಾತಿ ಧೋರಣೆ ಬಗ್ಗೆ ಮೂರು ಪುಟಗಳ ನೋಟಿಸ್ ಸಿದ್ಧಪಡಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಆ ಬಳಿಕ ಕಾಂಗ್ರೆಸ್ ನಾಯಕರು ಅನೇಕ ಸಂಸದರ ಸಹಿ ಸಂಗ್ರಹಿಸಿದರು. ಆದರೆ, ಈ ಪ್ರಸ್ತಾವಕ್ಕೆ ಟಿಎಂಸಿ ಹಾಗೂ ಸಮಾಜವಾದಿ ಪಕ್ಷ ಹೆಚ್ಚು ಒಲವು ತೋರಲಿಲ್ಲ. ಹೀಗಾಗಿ, ಉಳಿದ ಪಕ್ಷಗಳ ಸಂಸದರಿಂದ ಕಾಂಗ್ರೆಸ್ ನಾಯಕರು ಸಹಿ ಸಂಗ್ರಹಿಸಲಿಲ್ಲ.

‘ಕಗ್ಗಂಟು ಬಗೆಹರಿಸುವ ಬಗ್ಗೆ ಓಂ ಬಿರ್ಲಾ ಅವರೊಂದಿಗೆ ಚರ್ಚೆಗಳು ನಡೆಯುತ್ತಿವೆ. ಒಂದು ವೇಳೆ, ರಾಹುಲ್ ಗಾಂಧಿಗೆ ಮಂಗಳವಾರ ಮಾತನಾಡಲು ಅವಕಾಶ ನೀಡದಿದ್ದರೆ ಸಹಿ ಸಂಗ್ರಹ ಪ್ರಕ್ರಿಯೆ ಮುಂದುವರಿಸಲಾಗುವುದು. ಆ ಬಳಿಕ ನೋಟಿಸ್ ನೀಡಲಾಗುವುದು‘ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.