ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಅಖಾಡದಲ್ಲಿ ನಟ–ನಟಿಯರ ಖದರು

Published 23 ಏಪ್ರಿಲ್ 2024, 20:42 IST
Last Updated 23 ಏಪ್ರಿಲ್ 2024, 20:42 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣಾ ಕಣಕ್ಕೆ ಹುರಿಯಾಳುಗಳಾಗಿ ಧುಮುಕಿರುವ ಹೆಸರಾಂತ ನಟ ನಟಿಯರು ಕಣದ ರಂಗನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ತಾರೆಯರು ದೊಡ್ಡ ಬಂಗಲೆ ಹಾಗೂ ಹವಾನಿಯಂತ್ರಿತ ಕಾರುಗಳನ್ನು ಬದಿಗಿಟ್ಟು ನಗರ ಹಾಗೂ ಹಳ್ಳಿಗಳಲ್ಲಿ ಬಿರು ಬಿಸಿಲಿನಲ್ಲಿ ಗೆಲುವಿಗಾಗಿ ಬೆವರು ಹರಿಸುತ್ತಿದ್ದಾರೆ. ಈ ಮೂಲಕ ತಮ್ಮ ನೆಲೆ ವಿಸ್ತರಿಸಲು ಹೊರಟಿದ್ದಾರೆ. ಅಖಾಡದಲ್ಲಿರುವ ನಟ–ನಟಿಯರ ಬಗ್ಗೆ ಇಲ್ಲಿದೆ ಇಣುಕು ನೋಟ. 

ಗೋಪಿಯಿಂದ ಕಂಗನಾ ವರೆಗೆ...

ನವದೆಹಲಿ: ಈ ಚುನಾವಣೆಯಲ್ಲಿ 370 ಸ್ಥಾನಗಳನ್ನು ಗೆಲ್ಲುವ ಮಹದಾಸೆ ಇಟ್ಟುಕೊಂಡಿರುವ ಬಿಜೆಪಿಯು ಸಿನಿಮಾ ರಂಗದವರ ಪ್ರಖ್ಯಾತಿಯನ್ನು ಮತಗಳನ್ನಾಗಿ ಪರಿವರ್ತಿಸಲು ಮುಂದಾಗಿದೆ. ಕನಸಿನ ಕನ್ಯೆ ಎಂದೇ ಪ್ರಖ್ಯಾತರಾಗಿರುವ ಹೇಮಾಮಾಲಿನಿ ಅವರು ‘ಕೃಷ್ಣನ ಜನ್ಮಸ್ಥಾನ’ ಮಥುರಾದಿಂದ ಮತ್ತೆ ಕಣಕ್ಕೆ ಇಳಿದಿದ್ದಾರೆ. ರಾಜ್ಯಸಭಾ ಸದಸ್ಯೆಯಾಗಿದ್ದ ಅವರು 2014ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 2014 ಹಾಗೂ 2019ರಲ್ಲಿ ಗೆದ್ದಿದ್ದರು. ಈ ಸಲ ಅಖಾಡದಲ್ಲಿರುವ ಹೇಮಾ ಅವರು ಮತದಾರರನ್ನು ಸೆಳೆಯಲು ಬಗೆ ಬಗೆಯ ಕಸರತ್ತುಗಳನ್ನು ನಡೆಸುತ್ತಿದ್ದಾರೆ. 

ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಟಿ ಕಂಗನಾ ರನೌತ್‌ ಸ್ಪರ್ಧಿಸುತ್ತಿದ್ದಾರೆ. ಅವರು ಕಾಂಗ್ರೆಸ್‌ನ ಪ್ರಭಾವಿ ಮುಖಂಡ ವಿಕ್ರಮಾದಿತ್ಯ ಸಿಂಗ್ ಸವಾಲನ್ನು ಎದುರಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಕಂಗನಾ ಅವರು ಬಿಜೆಪಿ ಹಾಗೂ ಬಲಪಂಥೀಯ ಸಿದ್ಧಾಂತದ ಪ್ರಬಲ ಪ್ರತಿಪಾದಕರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸದಾ ಹೊಗಳುತ್ತಲೇ ಬಂದವರು. 

ಪಕ್ಷವು ಮೂವರು ಭೋಜ್‌ಪುರಿ ನಟರಿಗೆ ಮಣೆ ಹಾಕಿದೆ. ಯೋಗಿ ಆದಿತ್ಯನಾಥ ಅವರು ಪ್ರತಿನಿಧಿಸಿದ್ದ ಗೋರಖಪುರ ಕ್ಷೇತ್ರದಲ್ಲಿ ಭೋಜ್‌ಪುರಿ ನಟ ರವಿಕಿಶನ್ ಅವರಿಗೆ ಪಕ್ಷ ಮತ್ತೆ ಅವಕಾಶ ನೀಡಿದೆ. ಈಶಾನ್ಯ ದೆಹಲಿ ಕ್ಷೇತ್ರದಲ್ಲಿ ಎರಡು ಬಾರಿ ಗೆಲುವಿನ ನಗೆ ಬೀರಿರುವ ಭೋಜ್‌ಪುರಿ ನಟ ಹಾಗೂ ಗಾಯಕ ಮನೋಜ್ ತಿವಾರಿ ಅವರಿಗೆ ಈ ಸಲ ಪ್ರಖರ ಮಾತುಗಾರ ಕನ್ಹಯ್ಯ ಕುಮಾರ್ ಅವರಿಂದ ಸವಾಲು ಎದುರಾಗಿದೆ. 2014 ಹಾಗೂ 2019ರ ಚುನಾವಣೆಗಳಲ್ಲಿ ದೆಹಲಿಯ ಎಲ್ಲ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಹಾಲಿ ಸಂಸದರ ಪೈಕಿ ತಿವಾರಿ ಅವರಿಗೆ ಮಾತ್ರ ಪಕ್ಷ ಈ ಸಲ ಟಿಕೆಟ್‌ ನೀಡಿದೆ. ಅವರು ಬಿಜೆಪಿ ದೆಹಲಿ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. 2009ರ ಚುನಾವಣೆಯಲ್ಲಿ ಮನೋಜ್‌ ಅವರು ಗೋರಖಪುರದಲ್ಲಿ ಸಮಾಜವಾದಿ ಪಕ್ಷದ ಟಿಕೆಟ್‌ನಿಂದ ಸ್ಪರ್ಧಿಸಿ, ಯೋಗಿ ಆದಿತ್ಯನಾಥ ಎದುರು ಪರಾಭವಗೊಂಡಿದ್ದರು. ಬಳಿಕ ಬಿಜೆಪಿಗೆ ಸೇರಿದ್ದರು. 

ಉತ್ತರ ಪ್ರದೇಶದ ಅಜಂಗಢದಿಂದ ಹಾಲಿ ಸಂಸದ ದಿನೇಶ್ ಲಾಲ್‌ ಯಾದವ್‌ ಅವರಿಗೆ ಕಮಲ ಪಾಳಯ ಮತ್ತೆ ಮಣೆ ಹಾಕಿದೆ. ಭೋಜ್‌ಪುರಿ ನಟರಾಗಿರುವ ಅವರು 2022ರ ಉಪಚುನಾವಣೆಯಲ್ಲಿ ಗೆದ್ದಿದ್ದರು. 2019ರಲ್ಲಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್ ಎದುರು ದಿನೇಶ್‌ ಲಾಲ್‌ ಸೋತಿದ್ದರು. 

‘ಕೈ’ಕೊಟ್ಟ ಪವನ್‌ ಸಿಂಗ್‌

ಬಿಜೆಪಿಯು ಮೊದಲ ಪಟ್ಟಿಯಲ್ಲಿ 195 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. ಭೋಜ್‌ಪುರಿ ನಟ ಹಾಗೂ ಗಾಯಕ ಪವನ್ ಸಿಂಗ್ ಅವರನ್ನು ಸದ್ಯ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಶತ್ರುಘ್ನ ಸಿನ್ಹಾ ಪ್ರತಿನಿಧಿಸುವ ಪಶ್ಚಿಮ ಬಂಗಾಳದ ಅನಸೋಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಪಕ್ಷವು ಘೋಷಿಸಿತ್ತು. ತಾವು ಸ್ಪರ್ಧಿಸುವುದಿಲ್ಲವೆಂದು ಪವನ್ ಸಿಂಗ್‌ ಮರುದಿನವೇ ಪ್ರಕಟಿಸಿದ್ದರು. ಇದರಿಂದ ಬಿಜೆಪಿ ತೀವ್ರ ಮುಜುಗರಕ್ಕೆ ಒಳಗಾಗಿತ್ತು. 

ಮೀರಠ್‌ನಲ್ಲಿ ರಾಮನ ಪಾತ್ರಧಾರಿ

ಅಯೋಧ್ಯೆಯಲ್ಲಿ ರಾಮಮಂದಿರ ಸಾಕಾರಗೊಂಡಿದೆ. ರಾಮನ ಅಲೆಯನ್ನು ಚುನಾವಣೆಯಲ್ಲಿ ಬಳಸಿಕೊಳ್ಳಲು ರಾಮನ ಪಾತ್ರಧಾರಿಗೂ ಕೇಸರಿ ಪಡೆ ಅವಕಾಶ ನೀಡಿದೆ. ಮೀರಠ್‌ ಕ್ಷೇತ್ರದಿಂದ ಕಿರುತೆರೆ ನಟ ಅರುಣ್‌ ಗೋವಿಲ್‌ ಅವರನ್ನು ಪಕ್ಷ ಕಣಕ್ಕೆ ಇಳಿಸಿದೆ. ಅರುಣ್‌ ಅವರು 1987ರಲ್ಲಿ ದೂರದರ್ಶನದಲ್ಲಿ ಪ್ರಸಾರಗೊಂಡಿದ್ದ ರಮಾನಂದ ಸಾಗರ್‌ ಅವರ ‘ರಾಮಾಯಣ’ ಧಾರಾವಾಹಿಯಲ್ಲಿ ರಾಮನ ಪಾತ್ರದಲ್ಲಿ ನಟಿಸುವ ಮೂಲಕ ಮನೆ ಮಾತಾಗಿದ್ದರು. ಅರುಣ್‌ ಅವರು 2021ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅರುಣ್ ಅವರು ರಾಮನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗಿವೆ. 

ದೇವರ ಸ್ವಂತ ನಾಡು ಎಂದು ಪ್ರಖ್ಯಾತವಾಗಿರುವ ಕೇರಳದಲ್ಲಿ ನೆಲೆ ವಿಸ್ತರಿಸಲು ಬಿಜೆಪಿಗೆ ಈವರೆಗೆ ಸಾಧ್ಯವಾಗಿಲ್ಲ. ಈ ಸಲ ಖಾತೆ ತೆರೆಯಲೇಬೇಕು ಎಂದು ಪಣ ತೊಟ್ಟಿರುವ ಪಕ್ಷವು ಹಲವು ಪ್ರಯೋಗಗಳನ್ನು ಮಾಡಿದೆ. ಮಲಯಾಳಂ ಭಾಷೆಯ ನಟ ಸುರೇಶ್‌ ಗೋಪಿ ಅವರನ್ನು ಈ ಹಿಂದೆ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿತ್ತು. ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ತ್ರಿಶ್ಶೂರ್‌ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಬಾರಿಯೂ ಅದೇ ಕ್ಷೇತ್ರದಿಂದ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 

ನಟರಿಗೆ ಟಿಎಂಸಿ ಮೊರೆ

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷವು (ಟಿಎಂಸಿ) ಹಲವು ನಟರಿಗೆ ಅವಕಾಶ ಕಲ್ಪಿಸಿದೆ. ಆಸನ್‌ಸೋಲ್ ಕ್ಷೇತ್ರದಲ್ಲಿ 2022ರಲ್ಲಿ ನಡೆದ ಉಪಚುನಾವಣೆಯಲ್ಲಿ ನಟ ಶತ್ರುಘ್ನ ಸಿನ್ಹಾ ಗೆದ್ದಿದ್ದರು. ಅವರು ಈ ಸಲ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಟರೂ ಆದ ಹಾಲಿ ಶಾಸಕಿ ಜೂನ್‌ ಮಲಿಯಾ (ಮೇದಿನಿಪುರ), ಸಯೋನಿ ಘೋಷ್‌ (ಜಾದವ್‌ಪುರ), ರಚನಾ ಬ್ಯಾನರ್ಜಿ (ಹೂಗ್ಲಿ) ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರಲ್ಲದೆ ನಟರಾದ ದೇವ್‌ (ಘಟಾಲ್‌) ಮತ್ತು ಶತಾಬ್ದಿ ರಾಯ್‌ (ಬಿರ್‌ಭೂಮ್‌) ಮರು ಆಯ್ಕೆ ಬಯಸಿದ್ದಾರೆ. ಆದರೆ, ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ನಟಿಯರಾದ ಮಿಮಿ ಚಕ್ರವರ್ತಿ ಹಾಗೂ ನುಸ್ರತ್‌ ಜಹಾನ್ ಅವರಿಗೆ ಪಕ್ಷ ಈ ಸಲ ಕೊಕ್‌ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT