ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಇಂದು ಕೊನೆಯ ಹಂತ ಮತದಾನ: ಮಲ್ಲಿಕಾರ್ಜುನ ಖರ್ಗೆ

Published 1 ಜೂನ್ 2024, 4:34 IST
Last Updated 1 ಜೂನ್ 2024, 4:34 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತದ ಮತದಾನ ಇಂದು ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, 'ನನ್ನ ಪ್ರೀತಿಯ ದೇಶವಾಸಿಗಳೇ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು ಇಂದು ಕೊನೆಯ ಹಂತದ ಮತದಾನವಾಗಿದೆ. ಇಂಡಿಯಾ ಕೂಟ ತನ್ನೆಲ್ಲ ಶಕ್ತಿಯಿಂದ ಸರ್ವಾಧಿಕಾರಿ ಶಕ್ತಿಗಳನ್ನು ಎದುರಿಸುತ್ತಿದೆ. ಹೋರಾಟವು ಅಂತಿಮ ಹಂತದಲ್ಲಿದೆ. ಆರು ಹಂತಗಳ ಚುನಾವಣೆಯಲ್ಲಿ ಜನ ನಮಗೆ ಬೆಂಬಲ ನೀಡಿದ್ದಾರೆ. ಹಾಗೇ ಕಾಂಗ್ರೆಸ್ ಪಕ್ಷ ನೀಡಿದ ಭರವಸೆಗಳನ್ನು ಜಾರಿಗೊಳಿಸುವುದನ್ನು ಎದುರು ನೋಡುತ್ತಿದ್ದಾರೆ' ಎಂದು ಹೇಳಿದ್ದಾರೆ.

'ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವ ಯುವ ನ್ಯಾಯ, ಮಹಿಳಾ ನ್ಯಾಯ, ರೈತ ನ್ಯಾಯ, ಕಾರ್ಮಿಕ ನ್ಯಾಯ ಮತ್ತು ಸಮಾನ ನ್ಯಾಯ ಭರವಸೆಗಳಿಗೆ ಜನ ಬೆಂಬಲ ನೀಡಲಿದ್ದಾರೆ. ಪ್ರಜಾಸತ್ತಾತ್ಮಕ ಶಕ್ತಿಗಳು ಸರ್ವಾಧಿಕಾರಿ ಶಕ್ತಿಗಳನ್ನು ಸೋಲಿಸಿದಾಗ ಮಾತ್ರ ಪ್ರಜಾಪ್ರಭುತ್ವದ ಈ ಹಬ್ಬ ಯಶಸ್ವಿಯಾಗುತ್ತದೆ' ಎಂದು ಅವರು ಹೇಳಿದ್ದಾರೆ.

'ರೈತರು, ಯುವಕರು, ಕಾರ್ಮಿಕರು, ಮಹಿಳೆಯರು, ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಭವಿಷ್ಯದ ಬಗ್ಗೆ ಯೋಚಿಸಿ. ಇನ್ನೂ 5 ವರ್ಷಗಳ ಕಾಲ ನೀವು(ಮತದಾರರು) ಅವರನ್ನು ಅನ್ಯಾಯ, ದಬ್ಬಾಳಿಕೆ ಮತ್ತು ಅಸಮಾನತೆಯ ಬಲೆಗೆ ತಳ್ಳುತ್ತೀರಾ ಅಥವಾ ಅವರಿಗೆ ಉಜ್ವಲ, ಉತ್ತಮ ಮತ್ತು ನ್ಯಾಯಯುತ ಭವಿಷ್ಯವನ್ನು ಸೃಷ್ಟಿಸುತ್ತೀರಾ? ನಿರ್ಧರಿಸುವುದು ನಿಮಗೆ ಬಿಟ್ಟದ್ದು. ನೆನಪಿರಲಿ, ಸಂವಿಧಾನ ಇದ್ದರೆ ನಮ್ಮ ಮೂಲಭೂತ ಹಕ್ಕುಗಳು ಉಳಿಯುತ್ತವೆ' ಎಂದು ಖರ್ಗೆ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

'ಮೊದಲ ಬಾರಿಗೆ ಮತದಾನ ಮಾಡಲು ಹೊರಟಿರುವ ನನ್ನ ಯುವ ಸ್ನೇಹಿತರು ತಮ್ಮ ಹೆಗಲ ಮೇಲೆ ದೊಡ್ಡ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕೆಂಬುದು ನನ್ನ ವಿನಂತಿ' ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT