ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳಲ್ಲಿ ಅಪರಾಧಗಳು ನಡೆದಿಲ್ಲವೇ –ಬಿಜೆಪಿ ಪ್ರಶ್ನೆ

Published 22 ಜುಲೈ 2023, 14:34 IST
Last Updated 22 ಜುಲೈ 2023, 14:34 IST
ಅಕ್ಷರ ಗಾತ್ರ

ನವದೆಹಲಿ : ‘ರಾಜಸ್ಥಾನ, ಪಶ್ಚಿಮ ಬಂಗಾಳ, ಬಿಹಾರ ಸೇರಿದಂತೆ ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿಯೂ ಮಹಿಳೆಯರ ವಿರುದ್ಧ ಘೋರ ಅಪರಾಧಗಳು ನಡೆದಿವೆ. ಆದರೆ, ವಿರೋಧಪಕ್ಷಗಳು ಮಣಿಪುರದ ಬೆಳವಣಿಗೆ ವಿಷಯದಲ್ಲಿ ರಾಜಕಾರಣ ಮಾಡುತ್ತಿವೆ’ ಎಂದು ಬಿಜೆಪಿ ಶನಿವಾರ ಪ್ರತಿಕ್ರಿಯಿಸಿದೆ.

ಮಣಿಪುರದ ಬೆತ್ತಲೆ ಮೆರವಣಿಗೆ ಪ್ರಕರಣ ಸಂಬಂಧ ಪ್ರತಿಪಕ್ಷಗಳ ಟೀಕೆಗಳ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌, ಬಿಜೆಪಿಯೇತರ ಪಕ್ಷಗಳ ಸರ್ಕಾರವುಳ್ಳ ರಾಜ್ಯಗಳ ಕೃತ್ಯಗಳನ್ನು ಉಲ್ಲೇಖಿಸಿ, ಸೋನಿಯಾಗಾಂಧಿ ಒಳಗೊಂಡಂತೆ ಕಾಂಗ್ರೆಸ್‌ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

‘ಬಿಜೆಪಿಯೇತರ ಪಕ್ಷಗಳ ಆಡಳಿತವುಳ್ಳ ರಾಜ್ಯಗಳಲ್ಲಿನ ಅಪರಾಧ ಕೃತ್ಯಗಳ ಬಗ್ಗೆ ಪ್ರತಿಪಕ್ಷಗಳು ಮೌನವಾಗಿವೆ. ರಾಜಸ್ಥಾನದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಸಂಬಂಧ ಲಕ್ಷಕ್ಕೂ ಅಧಿಕ ಪ್ರಕರಣ ದಾಖಲಾಗಿವೆ. ಇದರಲ್ಲಿ ಲೈಂಗಿಕ ದೌರ್ಜನ್ಯದ್ದೇ 33 ಸಾವಿರ ಪ್ರಕರಣಗಳಿವೆ’ ಎಂದರು.

‘ಮಹಿಳೆಯರ ಮೇಲಿನ ಅಪರಾಧ ಕೃತ್ಯಗಳ ಏರಿಕೆ ಕುರಿತು ಆತ್ಮಾವಲೋಕನ, ಚರ್ಚೆ ಅಗತ್ಯ ಎಂದು ರಾಜಸ್ಥಾನದ ಸಚಿವ ರಾಜೇಂದ್ರ ಗುಧಾ ಹೇಳಿದ್ದರು. ಸಂಪುಟದ ಸಚಿವರ ಹೇಳಿಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ರಾಜೀನಾಮೆ ನೀಡುವರೇ? ಮುಖ್ಯಮಂತ್ರಿ ಅವರ ತವರು ಜಿಲ್ಲೆಯಲ್ಲಿಯೇ ಮಹಿಳೆಯನ್ನು ಕೊಲೆ ಮಾಡಿ ಸುಟ್ಟುಹಾಕಲಾಗಿತ್ತು. ಅವರ ಮನೆಗೆ ಐದು ಕಿ.ಮೀ. ದೂರದಲ್ಲಿ ಅತ್ಯಾಚಾರ, ಕೊಲೆ ನಡೆದಿತ್ತು’ ಎಂದೂ ಠಾಕೂರ್ ಉಲ್ಲೇಖಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಗಾಂಧಿ ಪರಿವಾರದ ಮುಖಂಡರು ಆಗ ತಮ್ಮ ಜವಾಬ್ದಾರಿಯನ್ನು ಮರೆತಿದ್ದರೇ ಎಂದು ಪ್ರಶ್ನಿಸಿದರು. ಮಹಿಳೆಯರ ವಿರುದ್ಧದ ಅಪರಾಧ ವಿಷಯದಲ್ಲಿ ಪಶ್ಚಿಮ ಬಂಗಾಳವೂ ಹಿಂದೆ ಬಿದ್ದಿಲ್ಲ. ಮಮತಾ ಬ್ಯಾನರ್ಜಿ ಅವರಲ್ಲಿ ಇನ್ನೂ ಮಮತೆ ಉಳಿದಿದೆಯೋ, ಇಲ್ಲವೊ ತಿಳಿದಿಲ್ಲ. ಹೌರಾದಲ್ಲಿ ಇತ್ತೀಚೆಗೆ ಪಂಚಾಯಿತಿ ಚುನಾವಣೆಯ ವೇಳೆ ಟಿಎಂಸಿಯ 40 ಗೂಂಡಾಗಳು ಮಹಿಳೆಯೊಬ್ಬರ ಬೆತ್ತಲೆ ಮೆರವಣಿಗೆ ನಡೆಸಿ, ಹಲ್ಲೆ ಮಾಡಿದ್ದರು ಎಂದು ಆರೋಪಿಸಿದರು.

ಅಲ್ಲದೆ, ಬಂಗಾಳದ ಮಾಲ್ದಾದಲ್ಲಿಯೂ ಮಹಿಳೆಯೊಬ್ಬರ ಅರೆಬೆತ್ತಲೆ ಮೆರವಣಿಗೆ ನಡೆದಿತ್ತು. ಆಗ ಮಮತಾ ಬ್ಯಾನರ್ಜಿ ಅವರ ಮಮತೆ ಎಲ್ಲಿ ಹೋಗಿತ್ತು. ಅಲ್ಲಿ ರಾಜ್ಯ ಸರ್ಕಾರ ಎಲ್ಲಿದೆ? ಈ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಲಾಗಿದೆಯೇ ಎಂದೂ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT