ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Rahul Gandhi: ರಾಯ್‌ಬರೇಲಿ ಉಳಿಸಿ ವಯನಾಡ್ ಕ್ಷೇತ್ರ ಬಿಟ್ಟುಕೊಡಲಿರುವ ರಾಹುಲ್?

Published 12 ಜೂನ್ 2024, 11:05 IST
Last Updated 12 ಜೂನ್ 2024, 11:05 IST
ಅಕ್ಷರ ಗಾತ್ರ

ವಯನಾಡ್: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಯ್‌ಬರೇಲಿ ಹಾಗೂ ವಯನಾಡ್‌ ಕ್ಷೇತ್ರಗಳಲ್ಲಿ ಭಾರಿ ಅಂತರದ ಜಯ ಸಾಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾವ ಕ್ಷೇತ್ರವನ್ನು ಬಿಟ್ಟುಕೊಡಲಿದ್ದಾರೆ ಎಂಬುದು ಕುತೂಹಲವೆನಿಸಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಯನಾಡ್ ಕ್ಷೇತ್ರವನ್ನು ಬಿಟ್ಟುಕೊಡುವ ಸಾಧ್ಯತೆಯಿದೆ ಎಂದು ಕೇರಳ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ. ಸುಧಾಕರನ್ ಇಂದು (ಬುಧವಾರ) ಸುಳಿವು ನೀಡಿದ್ದಾರೆ.

ರಾಹುಲ್ ಗಾಂಧಿ ಅವರು ವಯನಾಡ್‌ ಕ್ಷೇತ್ರದ ಜನರಿಗೆ ಧನ್ಯವಾದ ಅರ್ಪಿಸಲು ಆಯೋಜಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಸುಧಾಕರನ್, 'ದೇಶವನ್ನು ಮುನ್ನಡೆಸಬೇಕಾಗಿರುವ ರಾಹುಲ್ ಗಾಂಧಿ ಇಲ್ಲಿ ಉಳಿಯುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ನಾವು ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ' ಎಂದು ಹೇಳಿದ್ದಾರೆ.

'ಎಲ್ಲರೂ ಇದನ್ನು ಅರ್ಥಮಾಡಿಕೊಂಡು ರಾಹುಲ್ ಅವರನ್ನು ಆಶೀರ್ವದಿಸಿ ಬೆಂಬಲ ನೀಡಬೇಕು' ಎಂದು ಅವರು ಹೇಳಿದ್ದಾರೆ.

ಕಳೆದ ಬಾರಿ (2019) ಅಮೇಠಿಯಲ್ಲಿ ಸೋಲು ಅನುಭವಿಸಿದ್ದ ರಾಹುಲ್ ಅವರನ್ನು ವಯನಾಡ್ ಕ್ಷೇತ್ರ ಕೈ ಹಿಡಿದಿತ್ತು. ವಯನಾಡ್ ಸಂಸದರಾಗಿ ಸಂಸತ್ತಿಗೆ ಆಯ್ಕೆಯಾಗಿದ್ದರು. ಈಗ ಸತತ ಎರಡನೇ ಸಲ ವಯನಾಡ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಈ ಬಾರಿ ಅಮೇಠಿ ಬದಲು ತಾಯಿ ಸೋನಿಯಾ ಗಾಂಧಿ ಬಿಟ್ಟುಕೊಟ್ಟಿದ್ದ ರಾಯ್‌ಬರೇಲಿ ಕ್ಷೇತ್ರದಿಂದಲೂ ಕಣಕ್ಕಿಳಿದಿದ್ದ ರಾಹುಲ್ ಅಲ್ಲೂ ಅಭೂತಪೂರ್ವ ಜಯ ಸಾಧಿಸಿದ್ದರು. ಇದರಿಂದಾಗಿ ಯಾವ ಕ್ಷೇತ್ರವನ್ನು ಬಿಟ್ಟುಕೊಡಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.

ಸಂದಿಗ್ಧ ಪರಿಸ್ಥಿತಿಯಲ್ಲಿ ರಾಹುಲ್...

ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ವಯನಾಡ್ ಕ್ಷೇತ್ರದ ಜನರಿಗೆ ಧನ್ಯವಾದ ಸಲ್ಲಿಸಿದರು.

'ನಾನು ವಯನಾಡ್ ಅಥವಾ ರಾಯ್‌ಬರೇಲಿ ಸಂಸದನಾಗಿ ಉಳಿಯಬೇಕೋ ಎಂಬ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದ್ದೇನೆ. ಆದರೆ ನನ್ನ ನಿರ್ಧಾರದಿಂದ ಎರಡೂ ಕ್ಷೇತ್ರದ ಜನರು ಖುಷಿಯಾಗಿರಬೇಕು' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT